ಡೊಂಬಿವಲಿ: ಶಿಷ್ಯ ವರ್ಗದಿಂದ ಗುರುವರ್ಯರ ರಜತ ವರ್ಷ ಮಹೋತ್ಸವ ಆಚರಣೆಯು ಜರಗುತ್ತಿರುವ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀಜಿಯವರು ಮೇ 31 ರಂದು ರಾಜಾಪುರ ಸಾರಸ್ವತರ ಡೊಂಬಿವಲಿ ಪೂರ್ವದಲ್ಲಿನ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಸೇವಾಭವನಕ್ಕೆ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಬೆಳಗ್ಗೆ 9.30ಕ್ಕೆ ಆಗಮಿಸಲಿರುವ ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ನೀಡುವ ಕಾರ್ಯಕ್ರಮವಿದೆ. ಅನಂತರ ಬೆಳಗ್ಗೆ 10ರಿಂದ ಶ್ರೀ ವರದಸಿದ್ಧಿ ವಿನಾಯಕ ಸೇವಾ ಮಂಡಲದ ವಾಸ್ತು ವಿಸ್ತಾರದ ಅಂಗವಾಗಿ ನಿರ್ಮಿಸಿದ ಎರಡು ನೂತನ ಮಹಡಿಗಳಾದ ಗುರುಕೃಪಾ ಮತ್ತು ನಾರಾಯಣ ಕೃಪಾ ಸೇವಾಭವನಗಳನ್ನು ಶ್ರೀಗಳು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಲಿದ್ದಾರೆ.
ಸೇವಾ ಮಂಡಲದ ವತಿಯಿಂದ ಕವಳೆ ಮಠಾಧೀಶರ ಪಾದ್ಯ ಪೂಜೆ ಹಾಗೂ ಶ್ರೀಗಳ ಆಶೀರ್ವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೂತನ ವಾಸ್ತುವಿನಲ್ಲಿ ಮುಂಜಾನೆ ಜರಗುವ ವಾಸ್ತುಹೋಮ ಹಾಗೂ ಅಪರಾಹ್ನ 1.30ರಿಂದ ಜರಗುವ ಧಾರ್ಮಿಕ ಸಭೆಯಲ್ಲಿ ದೇಶದಾದ್ಯಂತ ಇರುವ ರಾಜಾಪುರ ಸಾರಸ್ವತ ಸಮಾಜದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5ರಿಂದ 7ರ ತನಕ ದಕ್ಷಿಣ ಕನ್ನಡ ಜಿÇÉೆಯ ಸುಪ್ರಸಿದ್ಧ ಕಲಾವಿದರಾದ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ವಿನೂತನ ಶೈಲಿಯ ಕಾರ್ಯಕ್ರಮವಿದೆ. ಕವಳೆ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಜರಗಲಿರುವ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅಧ್ಯಕ್ಷರಾದ ಲಕ್ಷ್ಮಣ್ ವಿನಾಯಕ್ ಹಾಗೂ ಮಂಡಲಿಯ ಸರ್ವ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.