Advertisement
ವಿಭಿನ್ನ ಶೋಧನೆ ಮತ್ತು ಆಂಗಿಕ ಮತ್ತು ಸ್ವರ ಪ್ರಯೋಗದ ಸಮ್ಮಿಲನ ಮಾಡಿ, ಹೆಚ್ಚು ಹೊತ್ತು ಉಸಿರು ಹಿಡಿದು ಹಾಡುವ ಮತ್ತು ಶರೀರಕ್ಕೆ ವಯಸ್ಸಾದರೂ ಶಾರೀರಕ್ಕೆ ವಯಸ್ಸಾಗದಂತೆ ತಡೆದುಕೊಳ್ಳುವ ಶಕ್ತಿ ತುಂಬುವುದಕ್ಕೆ ಯೋಗ ಸಾಧನೆ, ಸ್ವರ ಸಾಧನೆ ಮೂಲಕ ಹೊಸ ಸೂತ್ರಗಳನ್ನು ಶೋಧಿಸಿ ಪ್ರಯೋಗಿಸಿದ್ದಾರೆ ಪಂ| ಕೈವಲ್ಯಕುಮಾರ ಗುರವ.
ಈ ಹಿಂದಿನ ಸಂಗೀತಗಾರರು ಸ್ವರ ತಾಲೀಮು ಅಂದರೆ ರಿಯಾಜ್ ಮಾಡುವುದು. ರಾಗಗಳನ್ನು ಕೂಡಿಸಿಕೊಂಡು ಸತತವಾಗಿ ಅಭ್ಯಾಸ ಮಾಡುತ್ತಲೇ ಹೋಗುವುದು. ಇದು ದಿನವೊಂದಕ್ಕೆ 10-12 ಗಂಟೆ ವರೆಗೂ ನಡೆಯುವ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಹಿಂದುಸ್ಥಾನಿ ಸಂಗೀತ ಕಲಿಕೆ, ಅಭ್ಯಾಸ ವರ್ಷಗಟ್ಟಲೆ ಸಾಗಬೇಕು. ಆದರೆ ಇಂದಿನ ದಿನಗಳಲ್ಲಿ ಅಷ್ಟು ಸಮಯ ಮೀಸಲಿಟ್ಟು ಅಭ್ಯಾಸ ಮಾಡುವುದಕ್ಕೆ ಯುವ ಪೀಳಿಗೆ ಹಿಂದೇಟು ಹಾಕುತ್ತಿದೆ. ಅದೂ ಅಲ್ಲದೆ, ಸಂಗೀತ ಸಾಧನೆಗೂ ಇಂದಿನ ಅವಸರದ ಜಗತ್ತಿನ ಕಾಟ ತಪ್ಪುತ್ತಿಲ್ಲ. 45 ದಾಟಿದ ಯುವಕರಿಗೆ ಸ್ವರ ಬೀಳುತ್ತಿದೆ. ಅದಕ್ಕೆ ಇಂದಿನ ಆಹಾರ, ಒತ್ತಡದ ಜೀವನ, ಸಾಧನೆಯ ಕೊರತೆ ಕಾರಣವಾಗಿದ್ದು, ಇದರಿಂದ ಹೊರಕ್ಕೆ ಬರಲು ಈ ಸೂತ್ರಗಳು ಸಹಾಯಕವಾಗಲಿವೆ ಎನ್ನುತ್ತಿದ್ದಾರೆ ಸಂಗೀತಜ್ಞರು. ಸಂಗೀತಯೋಗ ಸಮ್ಮಿಶ್ರ
ಪಂ| ಕೈವಲ್ಯಕುಮಾರ ಅವರು ಸಂಗೀತ ಅಭ್ಯಾಸಕ್ಕೆ ಮೊದಲು ಸಂಗೀತಗಾರ ದೇಹವನ್ನು ಹೇಗೆ ಸಜ್ಜುಗೊಳಿಸಬೇಕೆನ್ನುವ ಸೂತ್ರಗಳನ್ನು ಹೆಣೆದಿದ್ದಾರೆ. ಇದಕ್ಕಾಗಿ ಪ್ರಾಣಾಯಾಮ, ಕಪಾಲಬಾತಿ ಮಾಡುವುದು ಸಾಮಾನ್ಯ. ಆದರೆ ಹಿಮಾಲಯ ಸೇರಿ ದೇಶದ ವಿವಿಧ ಕಡೆಗಳಲ್ಲಿ ಸಂಗೀತ ಮತ್ತು ಯೋಗ ಸಾಧನೆ ಮಾಡಿದ ಕೆಲವು ಹಠಯೋಗಿಗಳನ್ನು ಸಂದರ್ಶಿಸಿ ಅವರಿಂದ ಹೊಟ್ಟೆ, ಮತ್ತು ಕುಪ್ಪಸಗಳನ್ನು ಶಕ್ತಿಯುತವಾಗಿಸಿಕೊಳ್ಳುವ ಯೋಗಾಸನಗಳನ್ನು, ಉಸಿರಿನ ವ್ಯಾಯಾಮಗಳನ್ನು ಕಲಿತು ಅವುಗಳನ್ನು ತಮ್ಮ ಶಿಷ್ಯವೃಂದಕ್ಕೆ ಕಲಿಸುತ್ತಿದ್ದಾರೆ. ಯೋಗ ಮತ್ತು ಸಂಗೀತವನ್ನು ಹದವಾಗಿ ಬೆರೆಸಿ ಅದನ್ನು ತಮ್ಮ ಶಿಷ್ಯರಿಗೆ ಕಲಿಸಿರುವ ಪಂ| ಗುರವ, ಈಗಾಗಲೇ 15 ದೇಶಗಳು ಸಹಿತ 250ಕ್ಕೂ ಹೆಚ್ಚು ಕಡೆಗಳಲ್ಲಿ ತಮ್ಮ ವಿನೂತನ ಸೂತ್ರಗಳ ಕುರಿತು ಸಂಗೀತ ತರಬೇತಿ ಕಾರ್ಯಾಗಾರ ಮಾಡಿದ್ದಾರೆ.
Related Articles
ಹಿಂದೂಸ್ಥಾನಿ ಸಂಗೀತವು ಗುರುಕುಲ ಪದ್ಧತಿಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಬಂದಿದ್ದು. ಕಿರಾನಾ ಘರಾನಾ, ಗ್ವಾಲಿಯರ್ ಘರಾನಾ, ಜೈಪುರ ಘರಾನಾ, ಮತ್ತು ಆಗ್ರಾ ಘರಾನಾ ಎಂಬ ನಾಲ್ಕು ಮೂಲ ಸಂಗೀತ ಸೆಲೆಗಳಿದ್ದವು. ಅನಂತರ ರಾಂಪೂರ್, ಪಟಿಯಾಲಾ ಘರಾನಾಗಳು ಬಂದವು. ಆದರೆ ಇಂದಿನ ಆಧುನಿಕ ಜಗತ್ತಿನ ಯುವ ಪೀಳಿಗೆಗೆ ಗುರುಕುಲ ಸಂಗೀತ ಅಷ್ಟಾಗಿ ಒಗ್ಗುತ್ತಿಲ್ಲ. ಹೀಗಾಗಿ ಇಲ್ಲಿಯೂ ಹೊಸತನ ಬರಬೇಕಿದೆ. ಹಿಂದುಸ್ಥಾನಿ ಸಂಗೀತ ಕ್ಷೇತ್ರದ ಈ ಹೊಸ ಸೂತ್ರಗಳ ಸಂಶೋಧನೆಯನ್ನು ಗಮನಿಸಿದ ಫ್ರಾನ್ಸ್‌ನ ಸಾರ್ಬನ್ ವಿಶ್ವವಿದ್ಯಾನಿಲಯ ಪಂ| ಗುರವ ಅವರಿಗೆ ಈಗ ಗೌರವ ಡಾಕ್ಟರೆಟ್ ನೀಡಿದೆ.
Advertisement
ಸಂಗೀತ ಸಾಧನೆಗೆ ಶರೀರದಷ್ಟೇ ಶಾರೀರವೂ ಗಟ್ಟಿಯಾಗಿರಬೇಕು. ಆದರೆ ಇಂದಿನ ಆಹಾರ ಕ್ರಮ, ಅಭ್ಯಾಸದ ಕೊರತೆಗಳು ಹಿಂದುಸ್ಥಾನಿ ಸ್ವರಾಲಾಪಗಳನ್ನು ಮಾಡಲು ಬೇಕಾಗುವಷ್ಟು ಶಕ್ತಿ ನೀಡುತ್ತಿಲ್ಲ. ಹೀಗಾಗಿ ಸಂಗೀತಕ್ಕೆ ಯೋಗ, ಪ್ರಾಣಾಯಾಮ ಮಿಶ್ರಿತ ಹೊಸ ಸೂತ್ರಗಳು ಅಗತ್ಯ. ಅದನ್ನು ಇನ್ನಷ್ಟು ಶೋಧಿಸುವ ಹಂಬಲ ನನ್ನದು.-ಪಂ| ಕೈವಲ್ಯ ಕುಮಾರ ಗುರವ, ಸಂಗೀತಗಾರ. – ಡಾ| ಬಸವರಾಜ ಹೊಂಗಲ್