ಆತ ಬಯಸಿದ್ದು ಪ್ರೀತಿ, ಆಕೆ ಕೊಟ್ಟಿದ್ದೂ ಪ್ರೀತಿ. ಅಲ್ಲಿಗೆ ಒಂದು ಮುಗ್ಧ ಪ್ರೇಮಪು ರಾಣ ಶುರು. ಹೂವಿನ ಹಾದಿಯಲ್ಲಿ ಪ್ರೇಮಪಯಣ ಸಾಗುತ್ತಿರುವಾಗ ಮುಳ್ಳೊಂದು ಚುಚ್ಚಿಕೊಳ್ಳುತ್ತದೆ. ತನ್ನಾಕೆಗೆ ಚುಚ್ಚಿದ ಮುಳ್ಳನ್ನು ಬುಡಸಮೇತ ಕಿತ್ತು ಹಾಕಲು ನಾಯಕ ಅಣಿಯಾಗುತ್ತಾನೆ. ಅಲ್ಲಿಂದ ಹೂವಿನ ಹಾದಿಯಲ್ಲಿ ನೆತ್ತರ ಹೆಜ್ಜೆ, ರುದ್ರತಾಂಡವ ಶುರು… ಇದು ಈ ವಾರ ತೆರೆಕಂಡಿರುವ “ಕೈವ’ ಸಿನಿಮಾದ ಒಟ್ಟಾರೆ ಸಾರಾಂಶ.
ಇಷ್ಟು ಹೇಳಿದ ಮೇಲೆ ಸಿನಿಮಾದ “ಬೇರು’ ಹೇಗೆಲ್ಲಾ ಸಾಗಿರಬಹುದು ಎಂದು ನೀವು ಊಹಿಸಬಹುದು. ಹಾಗಂತ ಪ್ರೇಕ್ಷಕರ ಊಹಿಸಿದ್ದೆಲ್ಲಾ ಇಲ್ಲಿ ಆಗುತ್ತದೆ ಎಂದಲ್ಲ. ಆ ಮಟ್ಟಿಗೆ ನಿರ್ದೇಶಕ ಜಯತೀರ್ಥ ಒಂದಷ್ಟು ಟ್ವಿಸ್ಟ್-ಟರ್ನ್ಗಳೊಂದಿಗೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಒಂದು ಮುದ್ದಾದ ಮತ್ತು ಅಷ್ಟೇ ಮುಗ್ಧವಾದ ಲವ್‌ಸ್ಟೋರಿಯನ್ನು ರಕ್ತದಲ್ಲಿ ಮೆತ್ತಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ಜಯತೀರ್ಥ. ಹಾಗೆ ನೋಡಿದರೆ ನಿರ್ದೇಶಕ ಜಯತೀರ್ಥ ಅವರಿಗೆ ಇದು ಹೊಸ ಬಗೆಯ ಸಿನಿಮಾ. ರಕ್ತದಿಂದ ತುಂಬಾನೇ ದೂರವಿದ್ದ ಜಯತೀರ್ಥ ಈ ಬಾರಿ ರಕ್ತದೋಕುಳಿ ಯನ್ನೇ ಹರಿಸಿದ್ದಾರೆ. ಅದಕ್ಕೆ ಕಾರಣ ಕಥೆ, ಅವರೇ ಹೇಳಿದಂತೆ ಇದು 80ರ ದಶಕದಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಮಾಡಿರುವ ಸಿನಿಮಾವಿದು. ಹಾಗಾಗಿ, ನೈಜ ಘಟನೆಯನ್ನು ಹಸಿಹಸಿಯಾಗಿ ತೋರಿಸಬೇಕೆಂಬ ನಿರ್ದೇಶಕರ “ಆಸಕ್ತಿ’ ಎದ್ದು ಕಾಣುತ್ತದೆ. ಜೊತೆಗೆ ತನ್ನ ಪಾಡಿಗೆ ತಾನಿದ್ದ ಒಬ್ಬ ಮುಗ್ಧ ವ್ಯಕ್ತಿಯನ್ನು ಕೆಣ ಕಿದರೆ ಆತ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬ ಅಂಶವನ್ನು ಸಿನಿಮಾದಲ್ಲಿ ಒತ್ತಿ ಒತ್ತಿ ಹೇಳಲಾಗಿದೆ.
ಆರಂಭದಲ್ಲಿ ಒಂದು ಮುಗ್ಧ ಲವ್‌ಸ್ಟೋರಿಯಾಗಿ ತೆರೆದುಕೊಳ್ಳುವ ಕಥೆ ಮುಂದೆ ಸಾಗುತ್ತಾ “ಕೆಂಪು’ ಹಾದಿಯಾಗಿ ಬದಲಾಗುತ್ತದೆ. ಮೊದಲೇ ಹೇಳಿದಂತೆ ಇದು 80ರ ದಶಕದ ಕಥೆಯಾಗಿರುವುದರಿಂದ ಅಂದಿನ ಒಂದಷ್ಟು ಅಂಡರ್‌ವರ್ಲ್ಡ್, ಅಲ್ಲಿನ ವ್ಯಕ್ತಿಗಳನ್ನು ಪಾತ್ರವನ್ನಾಗಿಸಿದ್ದಾರೆ. ಆದರೆ, ಅವೆಲ್ಲವೂ ಪಾಸಿಂಗ್ ಶಾಟ್. ಅಬ್ಬರ ಏನಿದ್ದರೂ “ಕೈವ’ನದ್ದೇ. ಫ್ಯಾಮಿಲಿಗೆ ಲವ್‌ಸ್ಟೋರಿ, ಮಾಸ್‌ಗೆ “ರಾ’ ಸ್ಟೋರಿ ಎಂದು ಹೇಳಿದರೆ ತಪ್ಪಾಗಲಾರದು.
ಒಂದೇ ಸಿನಿಮಾದಲ್ಲಿ ಎರಡು ಶೇಡ್ ನೋಡಬಯಸುವವರಿಗೆ “ಕೈವ’ ಇಷ್ಟವಾಗುತ್ತದೆ. ನಾಯಕ ಧನ್ವೀರ್ ಪ್ರೇಮಿಯಾಗಿ, ತಪ್ಪಿತಸ್ಥರನ್ನು ಬೆನ್ನಟ್ಟುವ “ರಣಬೇಟೆ’ಗಾರನಾಗಿ ಇಷ್ಟವಾಗುತ್ತಾರೆ. ಇಲ್ಲಿ ಅವರ ಪಾತ್ರಕ್ಕೆ ಮಾತು ಕಮ್ಮಿ, ಆದರೆ ಕೆಲಸ ಜಾಸ್ತಿ. ನಾಯಕಿ ಮೇಘಾ ಶೆಟ್ಟಿ ನಗುವಲ್ಲೇ ಗಮನ ಸೆಳೆಯುತ್ತಾರೆ. ಅದಕ್ಕೊಂದು ಕಾರಣವಿದೆ. ಅದನ್ನು ತೆರೆಮೇಲೆಯೇ ನೋಡಬೇಕು. ಉಳಿದಂತೆ ರಮೇಶ್ ಇಂದಿರಾ, ರಾಘು ಶಿವಮೊಗ್ಗ, ಉಗ್ರಂ ಮಂಜು ಸೇರಿದಂತೆ ಇತರರು ನಟಿಸಿದ್ದಾರೆ.
ರವಿಪ್ರಕಾಶ್ ರೈ