ಹೊಸದಿಲ್ಲಿ : ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಈ ಬಾರಿ ನಾಥು ಲಾ ಪಾಸ್ ಮಾರ್ಗವನ್ನು ತೆರೆಯಲಾಗಿದೆ ಎಂದು ಕೇಂದ್ರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಇಂದು ಮಂಗಳವಾರ ಪ್ರಕಟಿಸಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಸುಶ್ಮಾ ಸ್ವರಾಜ್ ಅವರು, “ಕಳೆದ ವರ್ಷ ನಾಥು ಲಾ ಪಾಸ್ ಮಾರ್ಗವನ್ನು ಮುಚ್ಚಲಾಗಿದ್ದಾಗ ನಾನು ಚೀನದ ವಿದೇಶ ಸಚಿವಾಲಯಕ್ಕೆ ಹೇಳಿದ್ದೆ : ಉಭಯ ದೇಶಗಳ ಜನರ ನಡುವೆ ಸಂಪರ್ಕ ಸಂವಹನದ ಮಾರ್ಗವನ್ನು ಮುಕ್ತಗೊಳಿಸದೆ ಸರಕಾರಗಳ ನಡುವಿನ ಸಂಬಂಧ ಸುಧಾರಿಸದು; ನಾಥು ಲಾ ಪಾಸ್ ಮಾರ್ಗವನ್ನು ಮುಚ್ಚಲಾಗಿರುವುದು ಜನರಿಗೆ ದೊಡ್ಡ ಹೊಡೆತವಾಗಿದೆ ಎಂದು. ಈ ಬಾರಿ ಕೈಲಾಶ್ ಮಾನಸ ಸರೋವರ ಯಾತ್ರೆಗಾಗಿ ನಾಥು ಲಾ ಪಾಸ್ ಮಾರ್ಗವನ್ನು ತೆರೆಯಲಾಗಿರುವುದು ನನಗೆ ಅತೀವ ಸಂತಸವನ್ನು ಉಂಟು ಮಾಡಿದೆ’.
ಈ ಬಾರಿ ನಾವು ಲಿಪುಲೇಖ್ ಪಾಸ್ ಮೂಲಕ 60 ಯಾತ್ರಿಕರನ್ನು ಒಳಗೊಂಡ 18 ತಂಡಗಳನ್ನು ಕಳುಹಿಸುವೆವು; 50 ಯಾತ್ರಿಕರನ್ನು ಒಳಗೊಂಡ 10 ತಂಡಗಳನ್ನು ನಾಥು ಲಾ ಪಾಸ್ ಮಾರ್ಗದ ಮೂಲಕ ಕಳುಹಿಸುವೆವು; ಅಂದರೆ ಒಟ್ಟು 1,580 ಯಾತ್ರಿಕರು ಈ ಬಾರಿ ಕೈಲಾಶ್ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವರು’ ಎಂದು ಸುಶ್ಮಾ ಹೇಳಿದರು.
ಕಳೆದ ವರ್ಷ 72 ದಿನಗಳ ಕಾಲ ಭಾರತ – ಚೀನ ಸೇನೆ ವಿವಾದಿತ ಡೋಕ್ಲಾಂ ನಲ್ಲಿ ಮುಖಾಮುಖೀಯಾಗಿ ಸಮರ ಸದೃಶ ಉದ್ವಿಗ್ನತೆ ಗಡಿಯಲ್ಲಿ ಉಂಟಾದುದನ್ನು ಅನುಸರಸಿ ಚೀನ, ಭಾರತೀಯ ಯಾತ್ರಿಕರಿಗೆ ನಾಥು ಲಾ ಪಾಸ್ ಮಾರ್ಗವನ್ನು ಮುಚ್ಚಿತ್ತು.
ಅನಂತರದಲ್ಲಿ ಈಚೆಗೆ ಚೀನದಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆಯ ವಿದೇಶ ಸಚಿವರ ಶೃಂಗಕ್ಕೆ ತೆರಳಿದ್ದಾಗ ಸುಶ್ಮಾ ಸ್ವರಾಜ್ ಅವರು ನಾಥು ಲಾ ಪಾಸ್ ಮಾರ್ಗವನ್ನು ಕೈಲಾಶ್ ಮಾನಸ ಸರೋವರ ಯಾತ್ರಿಕರಿಗಾಗಿ ತೆರೆಯುವಂತೆ ಒತ್ತಾಯಿಸಿದ್ದರು. ಆ ಪ್ರಕಾರ ಚೀನ ಈ ಬಾರಿ ನಾಥು ಲಾ ಪಾಸ್ ಮಾರ್ಗವನ್ನು ತೆರೆದಿದ್ದು ಭಾರತೀಯ ಕೈಲಾಶ್ ಮಾನಸ ಸರೋವರ ಯಾತ್ರೆಗೆ ಅನುಕೂಲವಾಗಿದೆ.