ಕ್ರೈಸ್ಟ್‌ಚರ್ಚ್: ಇಲ್ಲಿನ “ಹ್ಯಾಗ್ಲೀ ಓವಲ್’ ನಲ್ಲಿ ಮೊದಲ್ಗೊಂಡ ನ್ಯೂಜಿಲ್ಯಾಂಡ್-ಪಾಕಿಸ್ಥಾನ ನಡುವಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪೇಸ್ ಬೌಲರ್ ಕೈಲ್ ಜಾಮೀಸನ್ ಮತ್ತು ವನ್‌ಡೌನ್ ಬ್ಯಾಟ್ಸ್‌ಮನ್ ಅಜರ್ ಅಲಿ ಮಿಂಚು ಹರಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕಿಸ್ಥಾನದ ಮೊದಲ ಇನ್ನಿಂಗ್ಸ್ 297ಕ್ಕೆ ಮುಗಿದಿದೆ. ಇಲ್ಲಿಗೆ ಮೊದಲ ದಿನದಾಟವೂ ಕೊನೆಗೊಂಡಿದೆ.
ಆರಂಭಕಾರ ಶಾನ್ ಮಸೂದ್ ಅವರನ್ನು ಸೊನ್ನೆಗೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಪಾಕಿಸ್ಥಾನವನ್ನು ಅಜರ್ ಅಲಿ ಆಧರಿಸಿ ನಿಂತರು. ಅವರ ಕೊಡುಗೆ 93 ರನ್ (172 ಎಸೆತ, 12 ಬೌಂಡರಿ). ಕೀಪರ್ ಮೊಹಮ್ಮದ್ ರಿಜ್ವಾನ್ ಕಪ್ತಾನನ ಆಟದ ಮೂಲಕ ಗಮನ ಸೆಳೆದರು (71 ಎಸೆತಗಳಿಂದ 61 ರನ್, 11 ಬೌಂಡರಿ). ಕೆಳ ಕ್ರಮಾಂಕದ ಫಾಹೀಮ್ ಅಶ್ರಫ್ (48) ಮತ್ತು ಜಾಫರ್ ಗೋಹರ್ (34) ಕೂಡ ಉತ್ತಮ ಹೋರಾಟ ಸಂಘಟಿಸಿದರು.
ಸ್ವಿಂಗ್ ಮತ್ತು ಸೀಮ್‌ಗೆ ನೆರವಾಗುವ ಪಿಚ್ ಮೇಲೆ ಮ್ಯಾಜಿಕ್ ಮಾಡಿದ ಕೈಲ್ ಜಾಮೀಸನ್ 69 ರನ್ ವೆಚ್ಚದಲ್ಲಿ 5 ವಿಕೆಟ್ ಉರುಳಿಸಿದರು. ಅವರು ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತ 3ನೇ ನಿದರ್ಶನ ಇದಾಗಿದೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಕಿತ್ತರು.
ಮೊದಲ ಟೆಸ್ಟ್ ಪಂದ್ಯವನ್ನು 101 ರನ್ನುಗಳಿಂದ ಗೆದ್ದ ನ್ಯೂಜಿಲ್ಯಾಂಡ್ 1-0 ಮುನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ಥಾನ-297 (ಅಜರ್ ಅಲಿ 93, ರಿಜ್ವಾನ್ 61, ಅಶ್ರಫ್ 48, ಗೋಹರ್ 34, ಜಾಮೀಸನ್ 69ಕ್ಕೆ 5, ಸೌಥಿ 61ಕ್ಕೆ 2, ಬೌಲ್ಟ್ 82ಕ್ಕೆ 2).