Advertisement
ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ಯಾರಲ್ಲಿ ಇರುವುದಿಲ್ಲ ಹೇಳಿ? ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದರೆ ಕೆಲವೇ ನಿಮಿಷಗಳಲ್ಲಿ ಗೂಳೂರು ಸಿಗುತ್ತದೆ. ಗೂಳೂರು ಸಹ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿನ ಗಣೇಶ ರಾಜ್ಯದಲ್ಲಿಯೇ ಪ್ರಸಿದ್ಧವಾದುದು. ಮೊದಲು ಗಣೇಶನ ದರ್ಶನ ಪಡೆದನಂತರ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಕೈದಾಳ ಸಿಗುತ್ತದೆ.
Related Articles
Advertisement
ಗರ್ಭಗೃಹದ ಎದುರಿನ ಸಣ್ಣ ದೇವಾಲಯದಲ್ಲಿ ಗರುಡಮೂರ್ತಿಯ ಸುಂದರ ವಿಗ್ರಹವಿದ್ದು ಚನ್ನಕೇಶವನ ನೇರದಲ್ಲಿ ಪ್ರತಿಷ್ಟಾಪಿಸಲಾಗಿದೆ. ಈ ದೇವಾಲಯದ ಪಕ್ಕದಲ್ಲಿಯೇ ಗಂಗಾಧರೇಶ್ವರನ ಮತ್ತೂಂದು ದೇವಾಲಯವನ್ನು ನೋಡಬಹುದು.
ಕೈದಾಳದ ಇನ್ನೊಂದು ವಿಶೇಷತೆ ಎಂದರೆ ಅಮರಶಿಲ್ಪಿ ಜಕಣಾಚಾರಿಗೆ ಜನ್ಮ ನೀಡಿದ ಪುಣ್ಯದೂರು. ಬೇಲೂರಿನಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಓರ್ವ ಯುವಕ ಬಂದು ಈ ದೇವಾಲಯದ ವಿಗ್ರಹವೊಂದರಲ್ಲಿ ಲೋಪವಿದೆ ಎಂದಾಗ ಅಲ್ಲಿದ್ದ ಶಿಲ್ಪಿ ಜಕಣಾಚಾರಿಯು ಕೋಪಗೊಂಡು ದೋಷವನ್ನು ತೋರಿಸಿದರೆ ನನ್ನ ಬಲಗೈಯನ್ನು ಕತ್ತರಿಸಿಕೊಳ್ಳುವನೆಂದು ಯುವಕನಿಗೆ ಸವಾಲೆಸೆಯುತ್ತಾರೆ.
ಆಗ ಯುವಕ ಉಳಿಯನ್ನು ಹಿಡಿದು ಒಂದು ವಿಗ್ರಹದ ಹೊಟ್ಟೆಯ ಭಾಗಕ್ಕೆ ಹೊಡೆದಾಗ ಅದರಲ್ಲಿ ಒಂದು ಕಪ್ಪೆ , ಮರಳು, ನೀರು ಹೊರ ಬಂತು. ತಕ್ಷಣ ಶಿಲ್ಪಿ ಜಕಣಾಚಾರಿ ತನ್ನ ಕೈಯನ್ನು ಕತ್ತರಿಸಿಕೊಂಡರು. ಆನಂತರ ಆ ಶಿಲ್ಪಿಗೆ ಈ ಯುವಕ ತನ್ನ ಮಗ ಡಂಕಣಾಚಾರಿ ಎಂದು ತಿಳಿದಾಗ ಅಚ್ಚರಿಯಾಗಿತ್ತು.
ಕೊನೆಗೆ ಮಗನ ಜೊತೆ ತನ್ನ ಹುಟ್ಟೂರು ಕೈದಾಳಕ್ಕೆ ಬಂದು ಇಲ್ಲಿ ಇಬ್ಬರೂ ಸೇರಿ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದಾಗ ಕತ್ತರಿಸಿದ್ದ ಕೈ ಮತ್ತೆ ಬೆಳೆಯಿತು. ಆದ್ದರಿಂದ ಈ ಹಿಂದೆ ಕ್ರೀಡಾಪುರವೆಂದು ಕರೆಯುತ್ತಿದ್ದ ಈ ಊರಿಗೆ ಕೈದಾಳ ಎಂಬ ಹೆಸರು ಬಂತೆಂದು ಪ್ರತೀತಿ ಇದೆ. ಇಲ್ಲಿನ ದೇವಾಲಯದ ಹೊರಗಡೆಯ ಮೇಲೆ ಇಬ್ಬರು ವ್ಯಕ್ತಿಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಇದು ಆ ತಂದೆ ಮಗನ ಚಿತ್ರಗಳೆಂದು ಊರಿನ ಹಿರಿಯರು ಅನಾದಿಕಾಲದಿಂದ ಹೇಳುತ್ತಾರೆ ಎನ್ನುತ್ತಾರೆ ಅರ್ಚಕರಾದ ಜಯಸಿಂಹ ಭಟ್.
ದಂಡಿನ ಶಿವರ ಮಂಜುನಾಥ್