Advertisement

CM ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ:ಮಂಜುನಾಥ ಭಂಡಾರಿ

08:17 PM Sep 26, 2024 | Team Udayavani |

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ. ಸಿಎಂ ರಾಜೀನಾಮೆ ನೀಡುವ ಅಗತ್ಯವೂ ಇಲ್ಲ. ರಾಜಕೀಯಕ್ಕೆ ಕಳಂಕ ತರಲು ಹೊರಟಿರುವ ಬಿಜೆಪಿ ವಿರುದ್ದ ಸಿಎಂ ಕಾನೂನು ಹೋರಾಟದ ಮೂಲಕ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಚೆಕ್‌ ಮೂಲಕ ಲಂಚ ಸ್ವೀಕಾರ ಮತ್ತು ಎರಡು ಡಿನೋಟಿಫಿಕೇಶನ್‌ ಕುರಿತಂತೆ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರು. 2011ರಲ್ಲಿ ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾದರೂ ಯಡಿಯೂರಪ್ಪ ರಾಜೀನಾಮೆ ನೀಡಿರಲಿಲ್ಲ. ಲೋಕಾಯುಕ್ತ ತನಿಖೆಯಲ್ಲಿ ತಪ್ಪಿತಸ್ಥ ಎಂದ ಬಳಿಕ ರಾಜೀನಾಮೆ ನೀಡಿದ್ದರು ಎಂದರು.

ಯಾವ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿದೆಯೋ ಅಲ್ಲಿ ಸರಕಾರ ಪತನಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ನಡೆಸುತ್ತಲೇ ಬಂದಿದೆ. ಚುನಾವಣೆ ವೇಳೆ ಇ.ಡಿ.ಯನ್ನು ಬಳಸಲಾಗುತ್ತದೆ ಎಂದವರು ಹೇಳಿದರು.

ದೋಸ್ತಿಗಳ ಷಡ್ಯಂತ್ರ: ಹರೀಶ್‌ ಕುಮಾರ್‌
ಕಾಂಗ್ರೆಸ್‌ ದ.ಕ. ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಸಿಎಂ ವಿರುದ್ದ ಆರೋಪ ಮಾಡುತ್ತಿರುವುದು ಬಿಜೆಪಿ, ಜೆಡಿಎಸ್‌ ದೋಸ್ತಿಗಳ ಷಡ್ಯಂತ್ರ. ಸಿಎಂ ವಿರುದ್ಧ ದೂರು ಕೊಟ್ಟದ್ದು ಯಾವುದೇ ತನಿಖಾ ಸಂಸ್ಥೆ, ಪೊಲೀಸರಲ್ಲ. ಬದಲಾಗಿ ಮೂವರು ಖಾಸಗಿ ವ್ಯಕ್ತಿಗಳು. ಅವರ ಹಿನ್ನೆಲೆ ಏನು ಎಂಬುದು ಗೊತ್ತಿದೆ ಎಂದು ಹೇಳಿದ ಅವರು ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ 443 ಶಾಸಕರನ್ನು ಬಿಜೆಪಿ ಖರೀದಿಸಿದೆ. ಇದರಲ್ಲಿ 200 ಕಾಂಗ್ರೆಸ್‌ ಶಾಸಕರು. ಸಾವಿರಾರು ಕೋ.ರೂ.ಗಳ ಆರೋಪಕ್ಕೆ ಒಳಗಾದ ವ್ಯಕ್ತಿ ಬಿಜೆಪಿಗೆ ಸೇರಿದಾಗ ಕಳಂಕ ಮುಕ್ತನಾಗುತ್ತಾನೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಪದ್ಮರಾಜ್‌ ಆರ್‌. ಪೂಜಾರಿ, ಶಾಲೆಟ್‌ ಪಿಂಟೊ, ಮನೋರಾಜ್‌, ಶುಭೋದಯ ಆಳ್ವ, ಮನೋರಾಜ್‌, ಟಿ.ಕೆ. ಸುಧೀರ್‌, ಸುಹಾನ್‌ ಆಳ್ವ, ಲಾರೆನ್ಸ್‌ ಡಿ’ ಸೋಜಾ, ಜಾಕಿಮ್‌ ಡಿ’ ಸೋಜಾ, ವಿಕಾಸ್‌ ಶೆಟ್ಟಿ, ಸುಭಾಶ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Advertisement

ಪರಿಷತ್‌ ಚುನಾವಣೆ; ಉಡುಪಿಗೆ ಸಿಗಲಿದೆ ಕಾಂಗ್ರೆಸ್‌ ಟಿಕೆಟ್‌
ಮುಂಬರುವ ವಿಧಾನ ಪರಿಷತ್‌ ಚುನಾವಣೆ ಸ್ಪರ್ಧೆಗೆ ಕಾಂಗ್ರೆಸ್‌ನಿಂದ ಈ ಬಾರಿ ಉಡುಪಿಗೆ ಪ್ರಾಶಸ್ತ್ಯ ನೀಡಲಾಗುವುದು. ಉಡುಪಿಯಿಂದ ಆರು ಮಂದಿ ಮುಖಂಡರು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ರಾಜು ಪೂಜಾರಿ, ಭುಜಂಗ ಶೆಟ್ಟಿ, ರಾಜು ಕಾರ್ಕಳ ಮುಂತಾದವರ ಹೆಸರು ಪಟ್ಟಿಯಲ್ಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ಸೆ.28ರಂದು ಆಗಮಿಸಲಿದ್ದು, ಎಲ್ಲ ನಾಯಕರು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಜುನಾಥ ಭಂಡಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next