Advertisement

ಶಾಸಕ ರಾಜು ಕಾಗೆ ಮಗಳು, ತಮ್ಮನ ಗೂಂಡಾಗಿರಿ! 13 ಮಂದಿ ವಿರುದ್ಧ FIR

12:12 PM Jan 09, 2017 | Team Udayavani |

ಬೆಳಗಾವಿ: ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜುಕಾಗೆ ಪುತ್ರಿ ವಿರುದ್ಧ ಫೇಸ್ ಬುಕ್ ನಲ್ಲಿ ಅಶ್ಲೀಲ ಕಮೆಂಟ್ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಕಾಗೆ ಸಹೋದರ ಸೇರಿ ಸುಮಾರು 11 ಮಂದಿ ವಿವೇಕ್ ಶೆಟ್ಟಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏತನ್ಮಧ್ಯೆ ಶಾಸಕ ರಾಜು ಕಾಗೆ ಸೇರಿ 13 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Advertisement

ಶಾಸಕರ ಸಹೋದರನಿಂದ ಗೂಂಡಾಗಿರಿ?  
ಶಾಸಕ ರಾಜು ಕಾಗೆ ಮಗಳ ವಿರುದ್ಧ ವಿವೇಕ್ ಶೆಟ್ಟಿ ಫೇಸ್ ಬುಕ್ ನಿಂದ ಅಶ್ಲೀಲ ಕಮೆಂಟ್ ಸಂದೇಶ ಕಳುಹಿಸಿದ್ದಕ್ಕೆ ಶಾಸಕರ ಸಹೋದರ ಸಿದ್ದಗೌಡ ಕಾಗೆ ಸೇರಿ 11 ಮಂದಿ ಕೈಯಲ್ಲಿ ಕಬ್ಬಿಣದ ರಾಡ್, ಕುಡಗೋಲು ಹಿಡಿದುಕೊಂಡು ಬಂದು ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ವಿವೇಕ್ ಹಾಗೂ ತಾಯಿ ಉಜ್ವಾಲ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.

ದೊಣ್ಣೆ, ಕುಡಗೋಲಿನಿಂದ ಥಳಿಸುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾಸಕ ರಾಜು ಕಾಗೆ ಅವರ ಗೂಂಡಾಗಿರಿಗೆ ಹೆದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ವಿವೇಕ್ ಶೆಟ್ಟಿ ತಿಳಿಸಿರುವುದಾಗಿ ಟಿವಿ9 ವರದಿ ಮಾಡಿದೆ.

ಜನವರಿ 1ರಂದು ಈ ಘಟನೆ ನಡೆದಿದ್ದು, ವಿವೇಕ್ ಶೆಟ್ಟಿ ಹಾಗೂ ತಾಯಿ ಮೀರಜ್ ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವೇಕ್ ಶೆಟ್ಟಿಯನ್ನು ಮನೆಯಿಂದ ದರ, ದರ ಎಳೆತಂದು, ರಾಜು ಕಾಗೆ ಅವರ ಗೋದಾಮಿನಲ್ಲಿ ಮನಸ್ಸಿಗೆ ಬಂದಂತೆ ಥಳಿಸಿರುವುದಾಗಿ ವಿವೇಕ್ ಶೆಟ್ಟಿ ಆರೋಪಿಸಿದ್ದಾರೆ.

ನಾನು ಹಲ್ಲೆ ನಡೆಸಿಲ್ಲ: ಶಾಸಕ ರಾಜು ಕಾಗೆ
ವಿವೇಕ್ ಶೆಟ್ಟಿ ನನಗೆ ಗೊತ್ತು, ಆದರೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಮಗಳ ಫೇಸ್ ಬುಕ್ ಬಗ್ಗೆಯೂ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನನ್ನ ಪುತ್ರಿ, ಬೆಂಬಲಿಗರ ಜೊತೆ ಮಾತನಾಡುವೆ ಎಂದು ಶಾಸಕ ರಾಜು ಅವರು ” ಕಾಗೆ’ ಹಾರಿಸುವ ಮೂಲಕ ಜಾಣತನದ ಪ್ರತಿಕ್ರಿಯೆ ನೀಡಿದ್ದಾರೆ.
 

Advertisement

ಫೇಸ್ ಬುಕ್ ಅಶ್ಲೀಲ ಕಮೆಂಟ್ ಸುಳ್ಳು ಆರೋಪ:

ಫೇಸ್ ಬುಕ್ ನಲ್ಲಿ ಅಶ್ಲೀಲ ಕಮೆಂಟ್ ಹಾಕಿದ್ದೇನೆ ಎಂಬುದು ಸುಳ್ಳು ಆರೋಪ. ರಾಜಕೀಯದಲ್ಲಿ ನನ್ನ ಬೆಳವಣಿಗೆ ಸಹಿಸದೇ ರಾಜು ಕಾಗೆ ಈ ರೀತಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಹಲ್ಲೆಗೊಳಗಾದ ವಿವೇಕ್ ಶೆಟ್ಟಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಕಾಗೆ ಸೇರಿ 13 ಜನರ ವಿರುದ್ಧ FIR:

ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ  ಪಿಎಸ್ಐ ಆನಂದ್ ಡೋಣಿ ಅವರು ಮೀರಜ್ ಆಸ್ಪತ್ರೆಗೆ ತೆರಳಿ ದೂರು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ರಾಜು ಕಾಗೆ ಹಾಗೂ ಕುಟುಂಬದ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಗೂಂಡಾಗಿರಿ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಕೇಸ್ ನಲ್ಲಿ ಶಾಸಕ ರಾಜು ಕಾಗೆ 12ನೇ ಆರೋಪಿ ಎಂದು ಹೆಸರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next