ರಿಪ್ಪನ್‌ಪೇಟೆ(ಶಿವಮೊಗ್ಗ): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲಾಯಿತು. ನಾನು ಮಾಡಿದ ಯಾವ ತಪ್ಪಿಗಾಗಿ ಸೋಲಿಸಿದರು ಎಂಬುದನ್ನು ಸಾಬೀತು ಪಡಿಸಿದರೆ ನೇಣು ಹಾಕಿಕೊಳ್ಳುವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತದಾರರಿಗೆ ಸವಾಲು ಹಾಕಿದ್ದಾರೆ.
ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ. ವಿಚಾರದ ಬದಲು ಸುಳ್ಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುತ್ತದೆ. ಇದರ ಪರಿಣಾಮ ಯಾರ್ಯಾರೋ ಗೆಲ್ಲುವಂತಾಗಿರುವುದು ಪ್ರಜಾಪ್ರಭುತ್ವದ ದುರಂತ ಎಂದರು.
ಹಾಲಪ್ಪನೆದರು ನನ್ನ ಸೋಲೇಕೆ?: ಶಾಸಕನಾಗಿ, ಸಭಾಧ್ಯಕ್ಷನಾಗಿ, ಸಚಿವನಾಗಿ ಸಾಗರ ಕ್ಷೇತ್ರ ಮತ್ತು ರಾಜ್ಯಕ್ಕೆ ನಾನೇನೂ ಮಾಡಿಲ್ವಾ? ಅರಣ್ಯವಾಸಿ ರೈತರಿಗೆ ಹಕ್ಕು ಕೊಡಿಸಲು ವಿರಮಿಸದೆ ದುಡಿದಿದ್ದೇನೆ. ಎಷ್ಟೋ ವರ್ಷದಿಂದ ವಾಸವಿದ್ದ, ಭದ್ರತೆಯಿಲ್ಲದ ಜಾಗಗಳಿಗೆ ಹಕ್ಕುಪತ್ರ ನೀಡಿದ್ದೇನೆ. ಕಂದಾಯ ಭೂ ಕಾಯ್ದೆಗೆ ತಿದ್ದುಪಡಿ ತಂದು ಜನರು ನೆಮ್ಮದಿಯಿಂದ ಇರುವಂತೆ ಮಾಡಿದ್ದೇನೆ. ಸುಳ್ಳು ಹೇಳಿಲ್ಲ, ಮೋಸ ಮಾಡಿಲ್ಲ. ಆಸ್ತಿ ಮಾಡಿಲ್ಲ, ಅಕ್ರಮ ಮಾಡಿ ದುಡ್ಡು ತಿಂದಿಲ್ಲ. ಆದರೂ ಹಾಲಪ್ಪನೆದರು ನನ್ನನ್ನು ಸೋಲಿಸಲಾಯಿತು ಏಕೆ? ಎಂದರು.
ಅವನನ್ನ ಹ್ಯಾಂಗೆ ಆರಿಸಿದರೋ ಗೊತ್ತಾಗಿಲ್ಲ: ಜೈಲಿಗೆ ಹೋಗ್ಯಾನೆ, ಊರು ತುಂಬಾ ಆಸ್ತಿ ಮಾಡ್ಯಾನೆ. ಜನರ ತೆರಿಗೆ ಹಣ ವಂಚನೆ ಮಾಡ್ಯಾನೆ. ಈ ಅಪ್ಪ-ಮಕ್ಕಳು ಆಟ ಸುರುಮಾಡ್ಯಾರೆ. ಇವರದು ಏನು ಸಾಧನೆಯಿದೆ ಎಂದು ಆರಿÕದ್ರಿ? ಇಂತವರು ಪ್ರಭುಗಳಾದ್ರೆ ನನಗೆ ನಾಚಿಕೆ ಆಗತೈತಿ ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಕಿಡಿಕಾರಿದರು. ಈ ವ್ಯವಸ್ಥೆ ತೊಲಗಬೇಕಾದರೆ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು ಎಂದರು.