ಕಲಬುರಗಿ: ಸೇಡಂ ತಾಲೂಕಿನ ಬಟಗೇರಾ ಗ್ರಾಮದ ಮುಖ್ಯರಸ್ತೆ ಬಳಿ ಇರುವ ಕಾಗಿಣಾ ಸೇತುವೆ ಜಲಾವೃತಗೊಂಡಿದ್ದು, ಮುಧೋಳ ಹಾಗೂ ಕೊಡಂಗಲ್, ಹೈದರಾಬಾದ್ ಕಡೆಗೆ ಸಂಪರ್ಕ ಸ್ಥಗಿತಗೊಂಡಿದೆ.
ಪ್ರಮುಖವಾಗಿ ಜನರನ್ನು ನೀರಿನ ಪ್ರವಾಹಕ್ಕೆ ಸಿಲುಕದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೇಡಂ ಪೊಲೀಸ್ ಠಾಣೆಯ ಎರಡು ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಜನ ಸಂಚಾರವನ್ನು ತಾತ್ಕಾಲಿಕವಾಗಿ ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಮಳೆ ಬೀಳಲು ಆರಂಭವಾಗಿದೆ. ಶುಕ್ರವಾರ ರಾತ್ರಿ ಹಾಗೂ ಶನಿವಾರ ದಿನವಿಡೀ ಸುರಿದ ಮಳೆಯಿಂದಾಗಿ ಕಾಗಿಣಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದಾಗಿ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾದ್ದರಿಂದ ಪ್ರಮುಖವಾಗಿ ಹೈದರಾಬಾದ್ ಸಂಪರ್ಕ ಕಡಿದುಕೊಂಡಿದೆ.
ರಾತ್ರಿ ಇಡೀ ಹಾಗೂ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಕಾಗಿಣಾ ನದಿಯಿಂದ ಹೊರ ಹರಿವು ಹೆಚ್ವಳದ ಪರಿಣಾಮ ಸೇಡಂ ತಾಲೂಕಿನ ಬಟಗೇರಾ ಬಳಿಯ ರಿಬ್ಬನಪಲ್ಲಿ ಮುಖ್ಯರಸ್ತೆ ಸೇತುವೆ ಮಳೆಗೆ ಮುಳುಗಡೆಯಾಗಿದೆ.