ಲಕ್ನೋ: ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಸಾರ್ವಜನಿಕ ಹೇಳಿಕೆ ನೀಡಿದ್ದ ಕಾರಣಕ್ಕಾಗಿ ಬಂಧಿಸಲ್ಪಟ್ಟಿರುವ ಉತ್ತರ ಪ್ರದೇಶದ ವೈದ್ಯ ಕಾಫಿಲ್ ಖಾನ್ ನನ್ನು ಮಥುರಾ ಜೈಲಿನಿಂದ ಕಳೆದ ಮಧ್ಯರಾತ್ರಿ ಬಿಡುಗಡೆ ಮಾಡಲಾಯಿತು.
ಕೂಡಲೇ ಬಿಡುಗಡೆ ಮಾಡಬೇಕೆಂದು ಅಲಹಾಬಾದ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದ ಹಿನ್ನಲೆಯಲ್ಲಿ ಕಾಫಿಲ್ ಖಾನ್ ಬಿಡುಗಡೆ ಮಾಡಲಾಯಿತು.
ಆಲಿಗಢ ಮುಸ್ಲಿಂ ವಿವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ ಕಾಫೀಲ್ ಖಾನ್ ಸಿಎಎ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಜನವರಿ 29ರಂದು ಬಂಧಿಸಲಾಗಿತ್ತು. ಸಮುದಾಯಗಳ ಮಧ್ಯೆ ಧರ್ಮದ ಆಧಾರದಲ್ಲಿ ದ್ವೇಷ ಬಿತ್ತುವ ಪ್ರಯತ್ನ ಮಾಡಿರುವ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಇದಾದ ಎರಡು ದಿನಗಳ ನಂತರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಬಾಡಿಗೆ ವಿಚಾರದ ಗಲಾಟೆ: ಇಬ್ಬರು ರೂಮ್ ಮೇಟ್ ಗಳನ್ನು ಕೊಂದು ಆರೋಪಿ ಎಸ್ಕೇಪ್
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಫಿಲ್ ಖಾನ್ ಭಾಷಣದಲ್ಲಿ ದ್ವೇಷದ ಅಂಶಗಳಿರಲಿಲ್ಲ. ಅವರ ಬಂಧನ ಕಾನೂನು ಬಾಹಿರ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದಿತ್ತು.