ಕಡೂರು: ತಾಲೂಕಿನ ಎಮ್ಮೆದೊಡ್ಡಿ ಭಾಗದ ಸಾವಿರಾರು ಎಕರೆಯಲ್ಲಿ ಬೆಳೆದಿರುವ ಕಬ್ಬಿಗೆ ಬೆಲೆ ಇಲ್ಲದೆ ರೈತರ ಬಾಳು ಕಹಿಯಾಗಿದೆ. ತಾಲೂಕಿನ ಎಮ್ಮೆದೊಡ್ಡಿಯ ಮುಸ್ಲಾಪುರ, ರಂಗೇನಹಳ್ಳಿ, ಸಿದ್ದರಹಳ್ಳಿ, ಶ್ರೀರಾಂಪುರ ಭಾಗದ ರೈತರು ಈ ಬಾರಿ ಮದಗದಕೆರೆಯ ನೀರಿನ ಆಶ್ರಯದಲ್ಲಿ ಕಬ್ಬು ಬೆಳೆದಿದ್ದು, ಸಮೃದ್ಧವಾಗಿ ಬಂದ ಕಬ್ಬನ್ನು ಭದ್ರಾವತಿ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡುವುದು ಹಿಂದಿನಿಂದಲೂ ನಡೆಯುತ್ತ ಬಂದಿದೆ. ಆದರೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಕೊರೊನಾ ಲಾಕ್‌ಡೌನ್‌ನಿಂದ ಬಂದ್ ಆಗಿರುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.
ಭದ್ರಾವತಿಯ ಆಲೆಮನೆ (ಬೆಲ್ಲ ತಯಾರು ಮಾಡುವುದು)ಗೆ ನೀಡಲು ಹೋದರೆ ಒಂದು ಟನ್ ಕಬ್ಬಿಗೆ 1,500 ರೂ.ಗೆ ಕೇಳುತ್ತಿದ್ದು, ಕಬ್ಬಿನ ದರ ಇದೀಗ 5 ಸಾವಿರ ರೂ. ಇದೆ. ಒಂದು ಎಕರೆ ಕಬ್ಬು ಬೆಳೆಯಲು ರೈತರಿಗೆ ಕನಿಷ್ಟ 35 ಸಾವಿರ ರೂ. ವೆಚ್ಚವಾಗುತ್ತದೆ. ಉತ್ತಮ ಇಳುವರಿ ಬಂದರೆ ಎಕರೆಗೆ 30-35 ಟನ್ ಬರುತ್ತದೆ. ಆದರೆ, ಆಲೆಮನೆಯಲ್ಲಿ ಕಬ್ಬಿಗೆ ಬೆಲೆ ಇಲ್ಲವಾಗಿದೆ ಎಂಬುದು ರೈತರ ಅಳಲಾಗಿದೆ.
ಮಾರುಕಟ್ಟೆಯಲ್ಲಿ ಬೆಲ್ಲದ ದರ ಕೆ.ಜಿ.ಗೆ 45 ರೂ. ಇದೆ. ಬೆಲ್ಲದ ದರದಿಂದಲೇ ಕಬ್ಬಿನ ದರ ನಿಗದಿಯಾಗುವುದು ಎಂಬುದು ಆಲೆಮನೆಯವರಿಗೆ ಗೊತ್ತಿದ್ದರೂ ಸಂಕಷ್ಟದಲ್ಲಿರುವ ರೈತರಿಗೆ ಬರೆ ಹಾಕುವ ಕೆಲಸ ಆಲೆಮನೆಯ ಮಾಲೀಕರು ಮಾಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಆರಂಭಿಸಲಿ ಎಂಬ ಒತ್ತಾಯವನ್ನು ರೈತರು ಮಾಡುತ್ತಿದ್ದಾರೆ.
ಕೊರೊನಾ ಸಮಸ್ಯೆ ಬಾರದೆ ಇದ್ದಿದ್ದರೆ ರೈತ ಸಂಘಟನೆಗಳು ನಮ್ಮ ಪರವಾಗಿ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಿದ್ದವು. ಆದರೆ ಅಧಿಕಾರಿಗಳು ಮುಂದಾಗಿ ಕಬ್ಬಿಗೆ ಉತ್ತಮ ಬೆಲೆ ಕೊಡಿಸಬೇಕೆಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ರೈತ ಮುಖಂಡರಾದ ಲೋಕೇಶ್, ಕುಮಾರ ನಾಯ್ಕ,ಮಂಜುನಾಥ್, ಗಣೇಶ್,ಪ್ರದೀಪ್, ಸಂಜೀವ ನಾಯ್ಕ ಮತ್ತಿತರರು ಇದ್ದರು.
ಸಾವಿರಾರು ಎಕರೆಯಲ್ಲಿ ಬೆಳೆದ ಕಬ್ಬಿಗೆ ಉತ್ತಮ ದರ ಸಿಗುತ್ತಿತ್ತು. ಆದರೆ ಈ ಬಾರಿ ಮದಗದಕೆರೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿದ್ದರಿಂದ ಉತ್ತಮ ಇಳುವರಿ ಬಂದಿತ್ತು. ಭದ್ರಾವತಿಗೆ ಮಾರಾಟ ಮಾಡಲು ಹೋದರೆ ಕನಿಷ್ಟ ಬೆಲೆಗೆ ಆಲೆಮನೆಯ ಮಾಲೀಕರು ಕೇಳುತ್ತಿದ್ದಾರೆ. ಶಿವಮೊಗ್ಗದ ಜಿಲ್ಲಾ ಧಿಕಾರಿಗಳು ಹಾಗೂ ಭದ್ರಾವತಿ ತಹಶೀಲ್ದಾರ್, ರೈತ ಸಂಘಟನೆಗಳು ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕು. ಟನ್‌ಗೆ ಕನಿಷ್ಟ 4 ಸಾವಿರ ರೂ. ಕೊಡಿಸಬೇಕು.
ರಮೇಶ ನಾಯ್ಕ,
ಮುಸ್ಲಾಪುರ ರೈತ
ಪ್ರಕಾಶ್‌ಮೂರ್ತಿ ಏ.ಜೆ.