Advertisement

1.45 ಟಿಎಂಸಿ ನೀರು ಸದ್ಬಳಕೆಯಾಗಲಿ

05:09 PM Dec 09, 2019 | Naveen |

ಕಡೂರು: ತಾಲೂಕಿಗೆ ಕೃಷ್ಣಾ ಕೊಳ್ಳದಿಂದ ಮಂಜೂರಾಗಿರುವ 1.45 ಟಿಎಂಸಿ ನೀರಿನ ಸದುಪಯೋಗ ಸಂಪೂರ್ಣವಾಗಿ ತಾಲೂಕಿಗೆ ಲಭಿಸಲಿ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮ್ಮ ಭಾಗದ ನ್ಯಾಯಯುತ ಹಕ್ಕಿನಲ್ಲಿ ಸರಕಾರದಿಂದ ಕೊಡಲ್ಪಟ್ಟಿರುವ ನೀರಿನ ಸದ್ಬಳಕೆ ಮಾಡಿಕೊಳ್ಳುವಂತೆ ಈ ಹಿಂದೆಯೇ ಯಗಟಿ ಗ್ರಾಮದಲ್ಲಿ ಸೇರಿದ್ದ ಸಮಾನ ಮನಸ್ಕರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಆದರೆ ಇತ್ತೀಚಿನ ಮಾಧ್ಯಮಗಳ ವರದಿ ನೋಡಿದಾಗ ತಾಲೂಕಿನ ಹಕ್ಕಾದ ನೀರಿನ ಬಳಕೆ ಕಡಿತಗೊಳಿಸುವ ಆತಂಕ ಎದುರಾಗಿದೆ. ಕೆಲವರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಈ ಆತಂಕ ಇನ್ನೂ ಹೆಚ್ಚಾಗಿದೆ. ವಾಸ್ತವ ಅವಲೋಕಿಸಿ ವಿಚಾರ ವಿಮರ್ಶೆ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ತಾಲೂಕಿನ ನೀರಾವರಿ ಕನಸಿಗೆ ಹಲವು ವರ್ಷಗಳ ಇತಿಹಾಸವಿದೆ. ತಾವು ಶಾಸಕರಾಗಿದ್ದಾಗ ಗರಿಗೆದರಿದ ಹೆಬ್ಬೆ ನೀರಾವರಿ ಯೋಜನೆ ನಂತರದ ದಿನದಲ್ಲಿ ಕಾರ್ಯಸಾಧುವಲ್ಲ ಎಂದು ಸರಕಾರವೇ ಉತ್ತರ ನೀಡಿದ್ದರಿಂದ ಪರ್ಯಾಯವಾಗಿ ಗೊಂದಿ ಆಣೆಕಟ್ಟು ಯೋಜನೆಯನ್ನು ಸರಕಾರದ ಮುಂದೆ ತಾವು ಪ್ರಸ್ತಾಪಿಸಿದ್ದಲ್ಲದೇ ಯೋಜನೆಗೆ ಸಂಬಂಧಪಟ್ಟಂತೆ ಸರ್ವೇ ಕಾರ್ಯದಿಂದ ಆರಂಭಗೊಂಡು ವಿಸ್ತೃತವಾದ ಡಿಪಿಆರ್‌ ಯೋಜನೆಯನ್ನು ಕರ್ನಾಟಕ ನೀರಾವರಿ ಮಂಡಳಿ ಸಭೆಯವರೆಗೆ ಯೋಜನೆ ಕೊಂಡೊಯ್ದಿದ್ದೆ ಎಂದು ವಿವರಿಸಿದರು.

ಇದೀಗ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಕಚೇರಿಯು ಭದ್ರಾ ಆಣೆಕಟ್ಟಿನ ಕೆಳಭಾಗದಿಂದ ನೀರನ್ನು ಚಿಕ್ಕಮಗಳೂರು ಜಿಲ್ಲೆಯ ಮದಗದಕೆರೆ, ಅಯ್ಯನಕೆರೆ, ಬೆಳವಾಡಿಕೆರೆ ಸೇರಿದಂತೆ ಚಿಕ್ಕಮಗಳೂರು, ತರೀಕೆರೆ ಕಡೂರು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಸೇರಿದಂತೆ ಒಟ್ಟು 167 ಕೆರೆಯನ್ನು ತುಂಬಿಸುವ ಸರ್ವೇ ಮತ್ತಿತರ ಕೆಲಸಕ್ಕೆ 19-10-2019 ರಂದು ಟೆಂಡರ್‌ ಕರೆದಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

Advertisement

ಈ ಮೊದಲು ಸರಕಾರದ ಮುಂದಿದ್ದ ಗೊಂದಿ ಆಣೆಕಟ್ಟು ಯೋಜನೆಯಲ್ಲಿ ಕಡೂರು ತಾಲೂಕಿನ ಮದಗದಕೆರೆ, ದೇವನಕೆರೆ ಹಾಗೂ ವಿಷ್ಣುಸಮುದ್ರ ಕೆರೆಗೆ ನೀರನ್ನು ಹರಿಸಿ ನಂತರ ಅದರ ಸರಣಿ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಸಿದ್ಧಪಡಿಸಲಾಗಿತ್ತು. ಇದರಿಂದ ತಾಲೂಕಿನ ಹಕ್ಕಾದ 1.45 ಟಿಎಂಸಿ ನೀರು ಸಂಪೂರ್ಣವಾಗಿ ತಾಲೂಕಿಗೆ ಲಭಿಸುತ್ತಿತ್ತು. ಆದರೆ ಇದೀಗ ಕರೆದಿರುವ ಟೆಂಡರ್‌ ಆಧಾರದ ಯೋಜನೆಯಲ್ಲಿ ತಾಲೂಕಿನ ಹಕ್ಕಿನ ನೀರು ಮೊಟಕಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೊಸ ಯೋಜನೆಯಲ್ಲಿ ಕಡೂರು ತಾಲೂಕಿನ 87 ಕೆರೆಗಳು, ತರೀಕೆರೆಯ 39, ಚಿಕ್ಕಮಗಳೂರಿನ 37 ಹಾಗೂ ಅರಸೀಕೆರೆ ತಾಲೂಕಿನ 4 ಕೆರೆಗಳು ನೀರನ್ನು ಕಾಣುತ್ತವೆ ಎಂದು ನೀರಾವರಿ ನಿಗಮದ ದಾಖಲೆಗಳು ಹೇಳುತ್ತವೆ. ವಾಸ್ತವವಾಗಿ ಈ ಹಿಂದೆ ಗೊಂದಿ ಆಣೆಕಟ್ಟು ಯೋಜನೆಯಲ್ಲಿ ವಿಷ್ಣುಸಮುದ್ರ ಕೆರೆಗೆ 0.86 ಟಿಎಂಸಿ ನೀರನ್ನು ಮೀಸಲಿಡಲಾಗಿತ್ತು. ಹೊಸ ಯೋಜನೆಯಲ್ಲಿ ಅದು 0.2 ಕ್ಕೆ ಇಳಿದಿದ್ದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆಗಿದೆ ಎಂದು ತಿಳಿಸಿದರು.

ಒಟ್ಟಾರೆ ಒಂದು ತಾರ್ಕಿಕ ಅಂತ್ಯ ಕಂಡಿದ್ದ ಗೊಂದಿ ಆಣೆಕಟ್ಟು ಯೋಜನೆಯನ್ನು ಸಂಪೂರ್ಣವಾಗಿ ತಿರುವು-ಮುರುವು ಮಾಡಿ ಭದ್ರಾ ಉಪಕಣಿವೆ ಯೋಜನೆ ಎಂದು ನಾಮಾಂಕಿತಗೊಳಿಸಿ ಜಾರಿ ಮಾಡಲು ಹೊರಟಿರುವ ಸರಕಾರದ ನಿರ್ಧಾರ ಸರಿಯಲ್ಲ ಎಂದರು.

ವಿಷ್ಣುಸಮುದ್ರ ಕೆರೆ ನೀರಿನ ಬಳಕೆದಾರರ ಹೋರಾಟ ಸಮಿತಿಯ ಶರತ್‌, ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್‌, ವೈ.ಎಸ್‌. ರವಿಪ್ರಕಾಶ್‌, ಗೋವಿಂದಪ್ಪ, ಎ.ಪಿ. ಚಂದನ್‌, ಶ್ರೀರಾಂಪುರ ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next