Advertisement

ಕಡೂರಿಗೆ ವಕ್ಕರಿಸಿದ ಮಹಾಮಾರಿ: ಕೆ.ದಾಸರಹಳ್ಳಿ ಗ್ರಾಮ ಸೀಲ್‌ಡೌನ್‌

01:12 PM Jun 12, 2020 | Naveen |

ಕಡೂರು: ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಪಾಸಿಟಿವ್‌ ಇದೀಗ ಬಯಲು ಸೀಮೆ ಕಡೂರು ತಾಲೂಕಿಗೂ ಕಾಲಿಟ್ಟಿದ್ದು, 15 ವರ್ಷದ ಬಾಲಕನಲ್ಲಿ ಸೋಕಿರುವುದು ದೃಢಪಟ್ಟಿದೆ.

Advertisement

ತಾಲೂಕಿನ ಕಾಮನಕೆರೆ ಸಮೀಪದ ಕೆ.ದಾಸರಹಳ್ಳಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್‌ ಇರುವುದಾಗಿ ದೃಢಪಟ್ಟಿದೆ. ಬಾಲಕನ ಕುಟುಂಬಸ್ಥರು, ಆತನೊಂದಿಗೆ ಆಟವಾಡಿದ್ದ 6 ಜನ ಸ್ನೇಹಿತರು ಸೇರಿದಂತೆ 20 ಜನರನ್ನು ಪರೀಕ್ಷೆಗೆ ಒಳಪಡಿಸಿ, ಕಾಮನಕೆರೆ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಲ್ಲಿಡಲಾಗಿದೆ.

ವಿದ್ಯಾರ್ಥಿಗೆ ಕೋವಿಡ್ ದೃಢಪಟ್ಟ ನಂತರ ತಾಲೂಕು ಆಡಳಿತ, ವೈದ್ಯ ಸಿಬ್ಬಂದಿಯೊಂದಿಗೆ ಕೆ.ದಾಸರಹಳ್ಳಿಗೆ ತೆರಳಿ ಬಾಲಕನ ಮನೆಯ ಬೀದಿ ಮತ್ತು ಗ್ರಾಮದ ಮುಖ್ಯ ಬೀದಿಗಳನ್ನು ಬ್ಯಾರಿಕೇಡ್‌ಗಳ ಮೂಲಕ ಸೀಲ್‌ಡೌನ್‌ ಮಾಡಲಾಗಿದೆ ಎಂದು ತಹಶೀಲ್ದಾರ್‌ ಜೆ.ಉಮೇಶ್‌ ಮಾಹಿತಿ ನೀಡಿದರು.

ಬಾಲಕನಿಗೆ ಜ್ವರ ಬರುತ್ತಿದ್ದು, ಕಡೂರಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರಕ್ಕೆ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ತರೀಕೆರೆಯ ಅಜ್ಜಿ ಮನೆಗೆ ತೆರಳಿದ್ದಾಗ ಶಿವಮೊಗ್ಗದ ಆಸ್ಪತ್ರೆಯಲ್ಲಿ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆ ನಡೆಸಲಾಗಿತ್ತು. ಆಗ ಕೋವಿಡ್ ದೃಢಪಟ್ಟಿದೆ. ಇದೀಗ ಬಾಲಕನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ.

ಬಾಲಕನ ತಂದೆ ಅಡುಗೆ ಕೆಲಸ ನಿರ್ವಹಿಸುತ್ತಿದ್ದು, ಪ್ರಾಥಮಿಕ ಸಂಪರ್ಕಕ್ಕೆ ಒಳಗಾದ 23 ಜನರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಕಡೂರು ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಯ 27 ಜನರ ದ್ರವವನ್ನು ಸಹ ಪಡೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರೆಲ್ಲರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಪಾಸಿಟಿವ್‌ ಬಂದಿರುವ ಬಾಲಕ ಕಾಮನಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದು, ಇದೇ ಜೂನ್‌ 25 ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿತ್ತು ಎಂದು ಮುಖ್ಯಶಿಕ್ಷಕ ತಿಮ್ಮಯ್ಯ ತಿಳಿಸಿದರು.

Advertisement

ಕಳೆದ 75 ದಿನಗಳಿಂದ ಕೊರೊನಾ ಪಾಸಿಟೀವ್‌ ಬಾರದಂತೆ ತಾಲೂಕು ಆಡಳಿತ ಶಾಸಕ ಬೆಳ್ಳಿ ಪ್ರಕಾಶ್‌ ಅವರ ನಿರ್ದೇಶನದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಎಚ್ಚರಿಸುತ್ತ ಬಂದಿತ್ತು. ಸಂಪೂರ್ಣ ಲಾಕ್‌ಡೌನ್‌ನಿಂದ ಪಟ್ಟಣ ಹೊರಬಂದು 4 ದಿನಗಳಿಗೆ ಕೋವಿಡ್ ಪರೀಕ್ಷೆಯಲ್ಲಿ ಕಡೂರು ಸಹ ಸೇರ್ಪಡೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next