Advertisement

ಬರದೂರು ಕಡೂರು; ಹಸಿರು ಚಿಗುರು

12:34 PM Nov 01, 2019 | Naveen |

ಕಡೂರು: ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆ ಬಂದಿದ್ದಕ್ಕೆ ಬರ ಪೀಡಿತ ತಾಲೂಕು ಪಟ್ಟಿಯಿಂದ ಕಡೂರು ತಾಲೂಕನ್ನು ಸರಕಾರ ಕೈಬಿಟ್ಟಿದೆ. ತಾಲೂಕಿನ ಎಲ್ಲಾ ಭಾಗಗಳಲ್ಲಿ ಉತ್ತಮ ಬೆಳೆ ಬಂದು ದಾಖಲೆ ನಿರ್ಮಿಸಿ ಕಳೆದ 10-15 ವರ್ಷಗಳಿಂದ ತುಂಬದ ಕೆರೆಗಳು ತುಂಬಿ ಕೋಡಿ ಬಿದ್ದಿವೆ. 8 ವರ್ಷಗಳಿಂದ ಹರಿಯದ ವೇದಾನದಿ ಮೈದುಂಬಿ ಹರಿಯುತ್ತಿದೆ. ಮದಗ, ಅಯ್ಯನಕೆರೆ, ತಂಗಲಿ, ಕೋಡಿಹಳ್ಳಿ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಮದಗದಕೆರೆಯ ಸರಣಿ ಕೆರೆಗಳು ತುಂಬಲು ಸಹಕಾರಿಯಾಗಿದೆ.

Advertisement

ಹಿಂದೆ ಕಡೂರು ತಾಲೂಕನ್ನು ಬರ ಪೀಡಿತ ತಾಲೂಕು ಘೋಷಿಸಲು ಅನೇಕ ಹೋರಾಟಗಳು ನಡೆದ ಬಗ್ಗೆ ಇತಿಹಾಸವಿದೆ. ಮಾಜಿ ಶಾಸಕ ವೈ. ಎಸ್‌.ವಿ ದತ್ತಾ ಬರ ಪೀಡಿತ ತಾಲೂಕೆಂದು ಘೋಷಿಸಬೇಕೆಂದು ಹೋರಾಟ ಮಾಡಿ ಕಡೂರಿನಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮಾಡಿದ ನಿದರ್ಶನಗಳಿವೆ.

ಆದರೆ ಬದಲಾದ ಪ್ರಕೃತಿ ನಿಯಮದಿಂದ ತಿಂಗಳಿಂದ ಸುರಿದ ಮಳೆ ಮಲೆನಾಡನ್ನೇ ನಾಚಿಸುವಂತಿದೆ. ತಾಲೂಕಿನ ವಾಡಿಕೆ ಮಳೆ 456 ಮಿಮೀ ಬರಬೇಕಿತ್ತು. ಆದರೆ ಅ.31 ಕ್ಕೆ 690 ಮಿಮೀ ಮಳೆ ಸುರಿದು ಶೇ.35ಹೆಚ್ಚಿನ ಮಳೆಯಾಗಿದೆ. ಕಡೂರು ಕಸಾಬ ಹೋಬಳಿಯಲ್ಲಿ ವಾಡಿಕೆ ಮಳೆ 441 ಗುರಿ ಇದ್ದು, ಇದುವರೆಗೂ 602 ಮಿಮೀ ಮಳೆ ಬಂದಿದ್ದು, ಶೇ.36 ಹೆಚ್ಚಿನ ಮಳೆಯಾಗಿದೆ.

ಬೀರೂರು 519 ಮಿಮೀ ವಾಡಿಕೆ ಮಳೆ ಬರಬೇಕಿದ್ದು, ಇಲ್ಲಿ 587 ಮಿಮೀ ಮಳೆ ಸುರಿದು ಶೇ.13ಹೆಚ್ಚಿನ ಮಳೆಯಾಗಿದೆ. ಹಿರೇನಲ್ಲೂರು ಹೋಬಳಿಯಲ್ಲಿ ವಾಡಿಕೆ ಮಳೆ 441 ಮಿಮೀ ಬರಬೇಕಿದ್ದು, 512 ಮಿಮೀ ಹೆಚ್ಚುವರಿಯಾಗಿ ಶೇ.16 ಮಳೆಯಾಗಿದೆ.

ಸಕರಾಯಪಟ್ಟಣ ಹೋಬಳಿ: ವಾಡಿಕೆ ಮಳೆ 423 ಬಂದಿರುವ ಮಳೆ 635 ಮಿಮೀ ಶೇ.34 ಹೆಚ್ಚಿನ ಮಳೆ ಸುರಿದಿದೆ.

Advertisement

ಸಿಂಗಟಗೆರೆ: ವಾಡಿಕೆ ಮಳೆ 429 ಬಂದಿರುವ ಮಳೆ 590 ಶೇ 38 ಹೆಚ್ಚಿನ ಮಳೆ ಬಂದಿದೆ. ಯಗಟಿ ಹೋಬಳಿ: ಬಂದಿರುವ ಮಳೆ 533, ವಾಡಿಕೆ ಮಳೆ 432 ಹೆಚ್ಚಿನ ಮಳೆ 23. ಚೌಳ ಹಿರಿಯೂರು: ವಾಡಿಕೆ ಮಳೆ 448 ಬಂದಿರುವ ಮಳೆ 600 ಹೆಚ್ಚಿನ ಮಳೆ 34, ಪಂಚನಹಳ್ಳಿ: ವಾಡಿಕೆ ಮಳೆ 375. ಬಂದಿರುವ ಮಳೆ 730 ಮಿಮೀ ಹೆಚ್ಚಾಗಿ 95 ಮಳೆ ಸುರಿದ ದಾಖಲಾಗಿದೆ. ಚೌಳಹಿರಿಯೂರು, ಅಂತರಘಟ್ಟೆ, ಆಸಂದಿ, ಅಡಗಲು, ಕಲ್ಕೆರೆ ಭಾಗದಲ್ಲಿ ಭಾರಿ ಮಳೆಯಿಂದ ಅತಿವೃಷ್ಟಿಯಾಗಿದೆ. ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ತಾಲೂಕಿನಲ್ಲಿ 31,500 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ 32.950 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ರಾಗಿ ಫಸಲು ಸಮೃದ್ಧಿಯಾಗಲಿದೆ. ಈರುಳ್ಳಿ ಬೆಳೆದ ರೈತರು ಮಳೆಯಿಂದ ಕಂಗಾಲಾಗಿದ್ದಾರೆ.

ತಾಲೂಕಿನ ಅನೇಕ ಭಾಗಗಳಲ್ಲಿ ಅತಿವೃಷ್ಟಿ ಸಂಭವಿಸಿದ್ದು ಬರಪೀಡಿತ ತಾಲೂಕೆಂದು ಸರಕಾರ ಘೋಷಿಸಿದ್ದರೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿನ ಮೂಲ
ಸೌಕರ್ಯಕ್ಕೆ ಸರಕಾರ ಹೆಚ್ಚು ಹಣ ನೀಡಲೆಂಬ ಬೇಡಿಕೆ ಇದೀಗ ಗ್ರಾಮೀಣ ಭಾಗಗಳಿಂದ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next