ಕಡೂರು: ಜಿಲ್ಲೆಯ ಬಯಲು ಸೀಮೆಯ ರೈತರಿಗೆ ತೆಂಗಿನ ತೋಟವೇ ಜೀವನಾಧಾರವಾಗಿದ್ದು ಹೆಚ್ಚಾಗಿ ಕೊಬ್ಬರಿಯನ್ನು ಶೇಖರಿಸಿ ಮಾರಾಟ ಮಾಡುವುದರಿಂದ ಅವರಿಗೆ ಬೆಂಬಲ ಬೆಲೆ ಜೊತೆಗೆ ಖರೀದಿ ಕೇಂದ್ರಕ್ಕೆ ಕೊಬ್ಬರಿ ನೀಡುವುದರಿಂದ ಉತ್ತಮ ಬೆಲೆ ದೊರಕುತ್ತದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಕೊಬ್ಬರಿ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದರು. ಇದನ್ನು ಅರಿತ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಬೆಂಬಲ ಬೆಲೆ ನೀಡುವ ಮೂಲಕ ಖರೀದಿ ಕೇಂದ್ರವನ್ನು ತೆರೆದಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಶಾಸಕ ಬೆಳ್ಳಿಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಬ್ಬರಿ ಖರೀದಿ ಕೇಂದ್ರ ಈ ಹಿಂದೆ ಬಹಳ ಸದ್ದು ಮಾಡಿತ್ತು. ಯಾವ ಯಾವ ಬೆಲೆಗೆ ಬೆಂಬಲ ಬೆಲೆ ನೀಡಬೇಕೆಂದು ತೀರ್ಮಾನ ಮಾಡುವುದು ಎಂಬುದನ್ನು ಕೇಂದ್ರ ಸರ್ಕಾರ ಮೊದಲು ತಿಳಿದುಕೊಳ್ಳಬೇಕೆಂದರು.
ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ವ್ಯವಸ್ಥಾಪಕ ಮಲ್ಲಿಕಾರ್ಜುನ ಮಾಹಿತಿ ನೀಡಿ, ಒಂದು ಎಕರೆಗೆ 6 ಕ್ವಿಂಟಾಲ್ ಕೊಬ್ಬರಿಯನ್ನು ರೈತರಿಂದ ಖರೀದಿಸಲಿದ್ದು ಗರಿಷ್ಟ 20 ಕ್ವಿಂಟಾಲ್ ಒಬ್ಬರಿಂದ ಪಡೆಯಲಾಗುವುದು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಫ್ರೂಟ್ ನಂಬರ್ ಪಡೆದು ಖರೀದಿ ಕೇಂದ್ರಕ್ಕೆ ಬರಬೇಕು. ಪಹಣಿಯಲ್ಲಿ ತೆಂಗು ಎಂದು ನಮೂದಾಗಿರಬೇಕೆಂಬ ನಿಯಮಗಳನ್ನು ವಿವರಿಸಿದರು.
ಎಪಿಎಂಸಿ ಅಧ್ಯಕ್ಷ ಲಕ್ಕಣ್ಣ, ಜಿಪಂ ಸದಸ್ಯ ಕೆ.ಆರ್. ಮಹೇಶ್ ಒಡೆಯರ್, ತಹಶೀಲ್ದಾರ್ ಜೆ. ಉಮೇಶ್, ಕಾರ್ಯದರ್ಶಿ ಕೃಷ್ಣಪ್ಪ, ದೇವರಾಜು ಮತ್ತಿತರರು ಇದ್ದರು.