ಕದ್ರಿ: ಇಲ್ಲಿಯ ಉದ್ಯಾನವನದಲ್ಲಿ ಮಕ್ಕಳ ಮನರಂಜನೆಗಾಗಿ ಇರುವ ಮಕ್ಕಳಾಟದ ಸಲಕರಣೆಗಳು ಇನ್ನು ಕೆಲವೇ ಸಮಯದಲ್ಲಿ ಹೊಸ ಲುಕ್ ಪಡೆಯಲಿವೆ. ಹಳೆಯದಾಗಿ ತುಕ್ಕು ಹಿಡಿದು ಅಪಾಯಕಾರಿಯಾಗಿದ್ದ ಇವುಗಳನ್ನು ದುರಸ್ತಿ ಪಡಿಸುವ ಕೆಲಸ ನಡೆಯುತ್ತಿದ್ದು, ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಶೇ. 10ರಷ್ಟು ಬಾಕಿ ಉಳಿದಿದೆ.
ಕದ್ರಿ ಪಾರ್ಕ್‌ನಲ್ಲಿ ಮಕ್ಕಳ ಮನೋರಂಜನೆ ಮತ್ತು ಸಂಜೆಯ ಹೊತ್ತಿನ ಆಟಕ್ಕೆ ಜತೆಯಾಗುತ್ತಿದ್ದ ಜಾರು ಬಂಡಿ, ತೂಗುಯ್ನಾಲೆ ಮತ್ತು ಇತರ ಆಟದ ಸಲಕರಣೆಗಳು ಮಕ್ಕಳ ಖುಷಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತಿದ್ದವು. ರಚ್ಚೆ ಹಿಡಿಯುವ, ಹಠ ಮಾಡುವ ಮಕ್ಕಳನ್ನು ಸಮಾಧಾನ ಪಡಿಸಲು ಸಂಜೆ ಹೊತ್ತಿನಲ್ಲಿ ಹೆತ್ತವರು ಇಲ್ಲಿ ಕರೆ ತಂದು ಆಟದಲ್ಲಿ ಮೈಮರೆಯುವಂತೆ ಮಾಡುತ್ತಿದ್ದರು.
ಆದರೆ ಈ ಆಟದ ಸಲಕರಣೆಗಳು ತೀರಾ ಹಳೆಯದಾದ್ದರಿಂದ ತುಕ್ಕು ಹಿಡಿದು ಕಳೆದ ಕೆಲವು ಸಮಯಗಳಿಂದ ಅಲ್ಲಲ್ಲಿ ಬಿರುಕು ಬಿಟ್ಟು ಮಕ್ಕಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದನ್ನು ಗಮನಿಸಿದ ತೋಟಗಾರಿಕಾ ಇಲಾಖೆಯು ಇದೀಗ ಮಕ್ಕಳ ಸಲಕರಣೆಗಳ ದುರಸ್ತಿ ಕಾರ್ಯ ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಈ ಆಟದ ಉಪಕರಣಗಳು ಮಕ್ಕಳಾಟಕ್ಕೆ ಲಭ್ಯವಾಗಲಿವೆ. ನಿರ್ಮಿತಿ ಕೇಂದ್ರದ ಮೂಲಕ ಈ ಸಲಕರಣೆಗಳನ್ನು ಸರಿಪಡಿಸಲಾಗುತ್ತಿದ್ದು, ಈಗಾಗಲೇ ಕೆಲಸ ಬಹುತೇಕ ಪೂರ್ಣಗೊಂಡಿದೆ.
ತುಂಡಾಗಿದ್ದ ತೂಗುಯ್ನಾಲೆ
ಮಕ್ಕಳಿಗೆ ಆಟವಾಡಲು ಇದ್ದ ತೂಗುಯ್ನಾಲೆಯ ಒಂದು ಬದಿಯ ಕಬ್ಬಿಣದ ಸಂಕೋಲೆ ತುಂಡಾಗಿ ಮಕ್ಕಳಿಗೆ ಅಪಾಯವನ್ನು ಆಹ್ವಾನಿಸುವಂತಿತ್ತು. ಅಲ್ಲದೆ ಬೇರೆ ಆಟಿಕೆಗಳ ಕಬ್ಬಿಣದ ರಾಡ್‌ಗಳೂ ತುಕ್ಕು ಹಿಡಿದು, ಬಾಯ್ದೆರುದುಕೊಂಡಿದ್ದವು.