Advertisement

ಕದ್ರಿ ಹೊಸ ಮಾರುಕಟ್ಟೆ : ಕಾಮಗಾರಿ ಆರಂಭಿಸಲಿಕ್ಕೇ ನೂರೆಂಟು ಸಂಕಷ್ಟ

01:59 AM Apr 17, 2021 | Team Udayavani |

ಕದ್ರಿ ಬಹಳ ಪ್ರಮುಖವಾದ ಭಾಗ. ಅಲ್ಲಿಯ ಮಾರುಕಟ್ಟೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಮೂರು ವರ್ಷಗಳಿಂದ ನಡೆಯುತ್ತಿದೆ. ಹೊಸ ಮಾರುಕಟ್ಟೆ ಇಷ್ಟರೊಳಗೆ ನಿರ್ಮಾಣವಾಗಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಈಗಲಾದರೂ ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿ ಆದಷ್ಟು ಬೇಗ ಆರ್ಥಿಕ ನೆರವು ಪಡೆದು ಕಾಮಗಾರಿ ಆರಂಭಿಸಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

Advertisement

ಮಹಾನಗರ: ಕದ್ರಿ ಮಾರುಕಟ್ಟೆ ನೂತನ ಕಟ್ಟಡ ಕಾಮಗಾರಿ ಮತ್ತೆ ಆರಂಭಗೊಳ್ಳಬಹುದು ! ಈ ಆಶಾವಾದದೊಂದಿಗೇ ಈ ಮಾರುಕಟ್ಟೆಯ ಸ್ಥಿತಿಯನ್ನು ಅವಲೋಕಿಸಬೇಕು. ಯಾಕೆಂದರೆ, ಶಿಲಾನ್ಯಾಸವಾಗಿ ಮೂರು ವರ್ಷಗಳು ಸಂದಿವೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಾಮಗಾರಿ ಈಗಾಗಲೇ ಪೂರ್ಣ ಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕಿತ್ತು. ಆದರೆ, ಯೋಜನೆಗೆ ಆರಂಭಿಕ ಹಂತದಲ್ಲೇ ಎದುರಾದ ತಾಂತ್ರಿಕ ಅಡಚಣೆ ಯಿಂದಾಗಿ ಕಾಮಗಾರಿ ಅರ್ಧದಲ್ಲೇ ಬಾಕಿ ಯಾಗಿದೆ. ಸದ್ಯದ ಆರ್ಥಿಕ ಅಡಚಣೆ ನಿವಾರಣೆಯಾಗುವ ಲಕ್ಷಣ ಸರಕಾರದಿಂದ ಗೋಚರಿಸಿದೆ. ಅದು ನನಸಾದರೆ ಮತ್ತೆ ಕಾಮಗಾರಿ ಆರಂಭಗೊಳ್ಳಲಿದೆ.

ಕದ್ರಿ ಮಾರುಕಟ್ಟೆ ನಗರದ ಪ್ರಮುಖ ಮಾರುಕಟ್ಟೆಗಳ ಪೈಕಿ ಒಂದು. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಒಟ್ಟು 45 ಮಳಿಗೆಗಳಿದ್ದವು. ಕದ್ರಿ, ಶಿವಬಾಗ್‌, ಬಿಕರ್ನಕಟ್ಟೆ, ಪದವು, ಕದ್ರಿ ಕಂಬÛ ಸಹಿತ ಸುತ್ತ-ಮುತ್ತಲ ಪ್ರದೇಶಗಳ ಜನರಿಗೆ ಇದೇ ಮಾರುಕಟ್ಟೆ. ಆಗ ಇದ್ದ ಜನಸಂಖ್ಯೆಗಿಂತ ಹಲವು ಪಟ್ಟು ಈಗ ಹೆಚ್ಚಾಗಿದೆ.

ಗ್ರಾಹಕರ ದಟ್ಟಣೆಗೆ ಅನುಗುಣವಾಗಿ ಮಾರುಕಟ್ಟೆ ಪ್ರದೇಶ ವಿಸ್ತಾರವಾಗದ್ದರಿಂದ ಸ್ಥಳಾವಕಾಶ ಕೊರತೆ ತಲೆದೋರಿತ್ತು. ಇನ್ನೊಂದೆಡೆ, ಕಟ್ಟಡ ಕೂಡ ಶಿಥಿಲಾವಸ್ಥೆ ತಲುಪಿತ್ತು. ಹಾಗಾಗಿ ಹಳೆಯ ಕಟ್ಟಡವನ್ನು ಕೆಡವಿ ಇಂದಿನ ಅವಶ್ಯಕ್ಕೆ ಅನುಗುಣವಾಗಿ 12.30 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ನೂತನ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಯಿತು. 2018ರ ಮಾರ್ಚ್‌ 26ರಂದು ಶಂಕುಸ್ಥಾಪನೆಯೂ ನೆರವೇರಿಸಿ, 45 ಮಳಿಗೆಗಳ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಳಿಗೆಗಳನ್ನೂ ನೀಡಲಾಯಿತು. ಕಾಮಗಾರಿಯೂ ಆರಂಭವಾಯಿತು. ಆದರೆ ಆರ್ಥಿಕ ಸಂಪನ್ಮೂಲ ಹೊಂದಿಕೆಯಲ್ಲಿ ಗೊಂದಲ ಎದುರಾದ ಕಾರಣ 10 ತಿಂಗಳ ಹಿಂದೆಯೇ ನೆಲ ಅಂತಸ್ತು ಹಂತದಲ್ಲೇ ಕಾಮಗಾರಿ ಸœಗಿತಗೊಳಿಸಲಾಗಿದೆ.

ಆರ್ಥಿಕ ಸ್ವರೂಪದ ಗೊಂದಲ
ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಯುಐಡಿಎಫ್‌ಸಿ), ಮಹಾನಗರ ಪಾಲಿಕೆ ಹಾಗೂ ಬ್ಯಾಂಕ್‌ಗಳ ಅರ್ಥಿಕ ನೆರವಿನೊಂದಿಗೆ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಆಲೋಚಿಸಲಾಗಿತ್ತು. ಶೇ.50 ಭಾಗ ಕೆಯುಐಡಿಎಫ್‌ಸಿ, ಶೇ.30 ಬ್ಯಾಂಕ್‌ ಸಾಲ ಹಾಗೂ ಶೇ.20 ಭಾಗವನ್ನು ಮಹಾನಗರ ಪಾಲಿಕೆ ಭರಿಸಬೇಕಿತ್ತು. ಟೆಂಡರ್‌ ಪ್ರಕ್ರಿಯೆ ಮುಗಿದು ಕೆಳಗಿನ ಅಂತಸ್ತಿನ ಕಾಮಗಾರಿ ಮುಕ್ತಾಯ ಹಂತದಲ್ಲಿರುವಾಗ ಕೊರೊನಾ ಸೋಂಕು ಹಾಗು ಮಳೆಗಾಲ ಎದುರಾಯಿತು. ಹಾಗಾಗಿ ಕಾಮಗಾರಿ ಸ್ಥಗಿತಗೊಳಿಸಲಾಯಿತು. ಇದೇ ವೇಳೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸ್ವರೂಪದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದವು. ಈ ಗೊಂದಲದಿಂದಾಗಿ ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬವಾಗಿ, ಕಾಮಗಾರಿ ಸ್ಥಗಿತಗೊಂಡಿತು.

Advertisement

ಒಟ್ಟು 6,920 ಚ.ಮೀ.ವಿಸ್ತೀರ್ಣ
ಹಿಂದಿನ ಮಾರುಕಟ್ಟೆ ಕಟ್ಟಡದ ಭಾಗದಲ್ಲಿ 25 ಸೆಂಟ್ಸ್‌ ಹಾಗೂ ಪಕ್ಕದಲ್ಲಿ ಲಭ್ಯವಿರುವ ಪಾಲಿಕೆಯ 45 ಸೆಂಟ್ಸ್‌ ಜಾಗ ವನ್ನು ಉಪಯೋಗಿಸಿ ಎರಡು ನೆಲ ಅಂತಸ್ತುಗಳೂ ಸಹಿತ 5 ಅಂತಸ್ತುಗಳ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಒಟ್ಟು 6,920 ಚ.ಮೀಟರ್‌ ವಿಸ್ತೀರ್ಣದಲ್ಲಿ ಕಾರು ಪಾರ್ಕಿಂಗ್‌, ಕಚೇರಿ, ವಾಣಿಜ್ಯ ಮಳಿಗೆಗಳು ಇರಲಿವೆ.

ಕನಿಷ್ಠ ಎರಡು ವರ್ಷ ಕಾಯಬೇಕು
ಕಾಮಗಾರಿಗೆ ಶೀಘ್ರ ಆರ್ಥಿಕ ಸಂಪನ್ಮೂಲ ಬಿಡುಗಡೆಯಾದರೂ ಮಾರುಕಟ್ಟೆ ಬಳಕೆಗೆ ಸಿದ್ಧವಾಗಲು ಕನಿಷ್ಠ ಎರಡು ವರ್ಷಗಳು ಬೇಕು. ಪ್ರಸ್ತುತ ಕಾಮಗಾರಿ ಆರಂಭಗೊಂಡರೂ ಎರಡು ತಿಂಗಳುಗಳ ಬಳಿಕ ಮಳೆಗಾಲವಾದ್ದರಿಂದ ನಿಲ್ಲಿಸಬೇಕಾಗಬಹುದು. ಅದಾದ ಬಳಿಕ ಎರಡು ವರ್ಷ ಅಂದರೆ 2023ರ ಹೊತ್ತಿಗೆ ಮಾರುಕಟ್ಟೆ ಸಾರ್ವಜನಿಕರಿಗೆ ಲಭ್ಯವಾಗಬಹುದು.

– ಕೇಶವ ಕುಂದರ್

Advertisement

Udayavani is now on Telegram. Click here to join our channel and stay updated with the latest news.

Next