Advertisement

ಕದ್ರಿ: ಶ್ಮಶಾನಕ್ಕೆ ಸಿಕ್ಕಿತು ಹೈಟೆಕ್‌ ಸ್ಪರ್ಶ

10:06 AM Mar 15, 2018 | Team Udayavani |

ಮಹಾನಗರ: ಸಾಮಾನ್ಯವಾಗಿ ಶ್ಮಶಾನ ಅಂದರೆ, ಅದು ಜನವಾಸವಿರುವ ಪ್ರದೇಶದಿಂದ ಸ್ವಲ್ಪ ದೂರದಲ್ಲಿದ್ದು, ಅತ್ತ ಸುಳಿಯುವುದಕ್ಕೂ ಜನರು ಹಿಂದೇಟು ಹಾಕುತ್ತಾರೆ. ಅಷ್ಟೇ ಅಲ್ಲ, ಸರಿಯಾದ ನಿರ್ವಹಣೆಯೂ ಕಾಣದೆ ಪೊದೆ- ಗಿಡಗಳಿಂದ ಆವರಿಸಿರುತ್ತದೆ. ಅವೆಲ್ಲಕ್ಕಿಂತಲೂ ಶ್ಮಶಾನ ಅಂದಾಗ ಒಂದು ರೀತಿಯ ನಕಾರಾತ್ಮಕ ಭಾವನೆಯೂ ಮೂಡುತ್ತದೆ. ಆದರೆ, ನಗರದ ಹೃದಯ ಭಾಗದಲ್ಲಿರುವ ಈ ಶ್ಮಶಾನ ಮಾತ್ರ ಇದಕ್ಕಿಂತ ಭಿನ್ನವಾಗಿದೆ.

Advertisement

ವರ್ಷಗಳ ಹಿಂದೆ ಕದ್ರಿ ಶ್ಮಶಾನದತ್ತ ತೆರೆಳುವುದೆಂದರೆ ಸ್ಥಳೀಯರೇ ಭಯ ಪಡುತ್ತಿದ್ದರು. ಆದರೆ, ಈಗ ನವೀಕರಣಗೊಂಡ ಶ್ಮಶಾನಕ್ಕೆ ಹೈಟೆಕ್‌ ಟಚ್‌ ದೊರೆತಿದೆ. ಕದ್ರಿಯ 98 ಸೆಂಟ್ಸ್‌ ಜಾಗದಲ್ಲಿದ್ದ ಹಿಂದೂ ರುದ್ರಭೂಮಿಯನ್ನು ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದ್ದು, ಶ್ಮಶಾನದಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳೊಂದಿಗೆ ಉದ್ಯಾನವನ ನಿರ್ಮಾಣ, ಕಾವಲು ಗಾರನಿಗೆ ವಾಸಕ್ಕೆ ಮನೆಯ ವ್ಯವಸ್ಥೆಯನ್ನು ಮಾಡಲಾಗಿದೆ.

ನಾನಾ ರೀತಿಯ ತೊಂದರೆ
ಹಲವು ವರ್ಷಗಳ ಹಿಂದೆ ಜೋಗಿ ಮಠದ ಅಧೀನದಲ್ಲಿದ್ದ ಈ ಶ್ಮಶಾನದ ಜಾಗವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಇದಾದ ಬಳಿಕ ಹಿಂದೂ ಧರ್ಮದ ಎಲ್ಲ ಸಮುದಾಯಗಳ ಶವ ಸಂಸ್ಕಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಇಲ್ಲಿ ಸೂಕ್ತ ಮೂಲ ಸೌಕರ್ಯಗಳ ಕೊರತೆಯಿಂದ ಶವ ಸಂಸ್ಕಾರಕ್ಕೆ ಬರುತ್ತಿದ್ದ ನಾನಾ ರೀತಿಯ ತೊಂದರೆ ಜನ ಅನುಭವಿಸುತ್ತಿದ್ದರು.

ಅಲ್ಲದೆ ಶ್ಮಶಾನದ ಸುತ್ತ-ಮುತ್ತ ಪೊದೆ, ಸೂಕ್ತ ಭದ್ರತೆಗಳಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿತ್ತು. 2013- 14ರಲ್ಲಿ ಸ್ಥಳೀಯ ಕಾರ್ಪೊರೇಟರ್‌ ಡಿ.ಕೆ. ಅಶೋಕ್‌ ಅವರು ಮಹಾನಗರ ಪಾಲಿಕೆಯ ನಗರ ಯೋಜನೆ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದಾಗ ಪಾಲಿಕೆ ನಿಧಿಯಿಂದ 70 ಲಕ್ಷ ರೂ. ವೆಚ್ಚ ಅನುದಾನವನ್ನು ಪಡೆದಿದ್ದರು.

ಹಣ ಮಂಜೂರಾದ ಬಳಿಕ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಕದ್ರಿ ಹಿಂದೂ ರುದ್ರಭೂಮಿ ನವೀಕರಣ ಅಭಿವೃದ್ಧಿ ಸಮಿತಿಯನ್ನು ಮಾಡಿ ಆ ಮೂಲಕ ಶ್ಮಶಾನದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗಿತ್ತು. 

Advertisement

ಅಭಿವೃದ್ಧಿ ಕಾರ್ಯ
ಶ್ಮಶಾನದ ಎಲ್ಲ ಭಾಗಗಳಿಗೂ ಇಂಟರ್‌ಲಾಕ್‌ ಅಳವಡಿಸಲಾಗಿದೆ. ಮೂರು ಶೌಚಾಲಯ, ಕಟ್ಟಿಗೆ ಹಾಕಲು ಕೋಣೆ, ಕಾವಲುಗಾರನಿಗೆ ಮನೆ, ಕಚೇರಿ ನಿರ್ಮಿಸಲಾಗಿದ್ದು, ಬಹುತೇಕ ಭಾಗಗಳಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ. ಶವದೊಂದಿಗೆ ಬರುವ ಕುಟುಂಬಸ್ಥರ ವಿಶ್ರಾಂತಿಗಾಗಿ ಒಂದು ಕೋಣೆಯನ್ನು ನಿರ್ಮಿಸಲಾಗಿದೆ.

ಶ್ಮಶಾನದ ಒಂದು ಭಾಗದಲ್ಲಿ ಹೂಳುವ ವ್ಯವಸ್ಥೆ ಮಾಡಿದರೆ, ಇನ್ನೊಂದು ಭಾಗದಲ್ಲಿ ಸುಡುವ ವ್ಯವಸ್ಥೆ ಇದೆ. ಈ ಹಿಂದೆ ಸುಡಲು ಎರಡು ಪೆಟ್ಟಿಗೆಗಳಿತ್ತು. ನವೀಕರಣಗೊಂಡ ಶ್ಮಶಾನದಲ್ಲಿ ನಾಲ್ಕು ಪೆಟ್ಟಿಗೆಗಳಿವೆ. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದರೂ ಇನ್ನೂ ಕೆಲವು ಕೆಲಸಗಳು ಬಾಕಿ ಇರುವುದರಿಂದ ಮುಂದಿನ ಹಂತದಲ್ಲಿ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಕದ್ರಿ ಹಿಂದೂ ರುದ್ರಭೂಮಿ ಸಮಿತಿ ತಿಳಿಸಿದೆ. 

ಇನ್ನಷ್ಟು ಸುಂದರವಾಗಲಿದೆ
‘ಕೆಲವು ವರ್ಷಗಳ ಹಿಂದೆ ಕದ್ರಿ ಶಶ್ಮಾನ ಮೂಲ ಸೌಕರ್ಯಗಳಿಂದ ವಂಚಿತಗೊಂಡಿತ್ತು. ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಸ್ಥಳೀಯರು ಆರೋಪಿಸಿದ್ದರು. ಇಂದು ಶ್ಮಶಾನ ನವೀಕರಣಗೊಳಿಸಲಾಗಿದ್ದು, ಎಲೆಕ್ಟ್ರಿಕಲ್‌ ಶವಾಗಾರ, ಸಿಸಿ ಕೆಮರಾ ಅಳವಡಿಕೆ ಸೇರಿದಂತೆ ಕೆಲವು ಕೆಲಸಗಳು ಬಾಕಿ ಇದೆ. ಅವುಗಳನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು. ಶ್ಮಶಾನಾಕ್ಕೆ 24 ಗಂಟೆಯೂ ಕಾವಲುಗಾರನನ್ನು ನೇಮಿಸಲಾಗುತ್ತದೆ. ಅವರಿಗೆ ಮನೆಯನ್ನೂ ನಿರ್ಮಿಸಲಾಗಿದ್ದು, ಪಾಲಿಕೆಯಿಂದ ಗೌರವ ಧನ ನೀಡುವ ಬಗ್ಗೆಯೂ ಚಿಂತಿಸಲಾಗಿದೆ.
– ಡಿ.ಕೆ. ಅಶೋಕ್‌, ಸ್ಥಳೀಯ ಕಾರ್ಪೊರೇಟರ್‌

ಮಾ. 18: ಉದ್ಘಾಟನೆ 
ಅಭಿವೃದ್ಧಿ ಕಾಮಗಾರಿಗಳು ಹತ್ತು ತಿಂಗಳಿನಿಂದ ನಡೆಯುತ್ತಿದ್ದು, ಶ್ಮಶಾನದ ಒಂದು ಭಾಗದಲ್ಲಿ ಹೂಳುವ ಅವಕಾಶವನ್ನು ನವೆಂಬರ್‌ ವರೆಗೆ ನೀಡಲಾಗಿತ್ತು. ಆದಾದ ಬಳಿಕ ಕಾಮಗಾರಿ ಪೂರ್ಣಗೊಳಿಸಲು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಮಾ. 18ರಂದು ನವೀಕೃತ ಶ್ಮಶಾನ ಉದ್ಘಾಟನೆಯಾಲಿದೆ.

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next