ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿರುವ ಕದಿಕ್ಕಾರು ಬೀಡಿನಲ್ಲಿ ನಿರ್ಮಿಸಲಾದ ದೈವಸ್ಥಾನದಲ್ಲಿ ಶುಕ್ರವಾರ ರಾಜನ್ ದೈವ ಶ್ರೀ ಕಲ್ಕುಡ, ಉಪ್ಪಿನಂಗಡಿಯ ಗ್ರಾಮ ದೈವಗಳು, ಬೀಡಿನ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಿತು.
ಬೆಳಗ್ಗೆ 11.12ರ ಮಿಥುನ ಲಗ್ನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ದೈವಜ್ಞ ಮಂಜುನಾಥ್ ಭಟ್ ಅಂತರ ಇವರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀನಿವಾಸ ಬಡೆಕ್ಕಿಲ್ಲಾಯರ ನೇತೃತ್ವದಲ್ಲಿ ವೇದಮೂರ್ತಿ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳುಕ್ಕುರಾಯರು ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಸಕಿ, ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ, ಯೋಜನಾಧಿಕಾರಿ ಧರ್ನಪ್ಪ ಮೂಲ್ಯ, ವಲಯ ಮೇಲ್ವಿಚಾರಕ ರವಿ, ಕಾರ್ಯಕ್ರಮದ ಸಂಚಾಲಕ ಎ. ಮಿತ್ರಸೇನ ಜೈನ್, ಕದಿಕ್ಕಾರು ಬೀಡಿನ ಪ್ರವೀಣ್ ಕುಮಾರ್, ಪ್ರಮುಖರಾದ ಮಹೇಂದ್ರವರ್ಮ ಮೇಲೂರು, ಬಾಲಕೃಷ್ಣ ಶೆಟ್ಟಿ ಕಜೆಕ್ಕಾರ್, ನವೀನ್ ಕಲ್ಯಾಟೆ, ಧನ್ಯಕುಮಾರ್ ರೈ, ಕರುಣಾಕರ ಸುವರ್ಣ, ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಮಣಿಯಾಣಿ, ಡಾ| ನಿರಂಜನ್ ರೈ, ಆದರ್ಶ ಶೆಟ್ಟಿ ಕಜೆಕ್ಕಾರು, ಕಂಗ್ವೆ ವಿಶ್ವನಾಥ ಶೆಟ್ಟಿ, ಕೇಶವ ರಂಗಾಜೆ, ಮಹಾಬಲ ಶೆಟ್ಟಿ ಕಜೆಕ್ಕಾರು, ವಿದ್ಯಾಧರ, ಸುಶಾನ್ ಕಜೆಕ್ಕಾರ್, ಅಭಯ್ ಜೈನ್, ರೋಶನ್ ರೈ ಬನ್ನೂರು, ವೆಂಕಪ್ಪ ಪೂಜಾರಿ ಮರುವೇಲು, ಲೊಕೇಶ್ ಬೆತ್ತೋಡಿ ಉಪಸ್ಥಿತರಿದ್ದರು.
ದೈವಗಳ ಪ್ರತಿಷ್ಠೆ, ನೇಮ
ಬೆಳಗ್ಗೆ 7ಕ್ಕೆ ಮಹಾಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ನವಗ್ರಹ ಶಾಂತಿ ಹೋಮ, ಚತುರ್ಮೂತಿ ಆರಾಧನೆ ನಡೆಯಿತು. ಬಳಿಕ ಮಿಥುನ ಲಗ್ನದಲ್ಲಿ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ಮಹಾಪೂಜೆ, ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ಭಂಡಾರ ಇಳಿಸಿ ರಾತ್ರಿ 8ರಿಂದ ದೈವಗಳ ನೇಮ ಜರಗಿತು.