ಪ್ರತಿವರ್ಷದಂತೆ ಈ ವರ್ಷ ಕೂಡ ಇತ್ತೀಚೆಗಷ್ಟೆ ಬಸವನ ಗುಡಿಯಲ್ಲಿ ಕಡಲೆ ಕಾಯಿ ಪರಿಷೆ ಜೋರಾಗಿ ನಡೆದಿದ್ದು ನಿಮಗೆ ನೆನಪಿರಬಹುದು. ಜನ ತಮ್ಮ ಮನೆಮಂದಿಯ ಜೊತೆಗೆ ಹೋಗಿ ಕಡಲೆ ಕಾಯಿ ಪರಿಷೆಯನ್ನು ಎಂಜಾಯ್ ಕೂಡ ಮಾಡಿದ್ದರು. ಈಗ ಅದೇ ಜಾಗದಲ್ಲಿ ಮತ್ತೆ ಕಡಲೆ ಕಾಯಿ ಪರಿಷೆ ಶುರುವಾಗಿದೆ. ಹೌದು, ಇಲ್ಲಿಯವರೆಗೆ ಕಡಲೆಕಾಯಿ ಪರಿಷೆ ಬಸವನಗುಡಿಯ ಬಸವನಿಗಾಗಿ ನಡೆಯುತ್ತಿದ್ದರೆ, ಈ ಬಾರಿ “ಸಲಗ’ನಿಗಾಗಿ ನಡೆಯುತ್ತಿದೆ.
ಅದು ಚಿತ್ರೀಕರಣದ ಸಲುವಾಗಿ. ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ಜೊತೆಗೆ ನಾಯಕರಾಗಿಯೂ ನಟಿಸುತ್ತಿರುವ “ಸಲಗ’ ಚಿತ್ರದ ಕ್ಲೈಮಾಕ್ಸ್ ದೃಶ್ಯಗಳನ್ನು ಇತ್ತೀಚೆಗೆ ನಡೆದ ಕಡಲೆಕಾಯಿ ಪರಿಷೆಯಲ್ಲಿ ನೈಜವಾಗಿ ಸೆರೆಹಿಡಿಯಲಾಗಿತ್ತು. ಆದರೆ ಕ್ಲೈಮ್ಯಾಕ್ಸ್‌ನ ಕೆಲ ಭಾಗದ ಶೂಟಿಂಗ್‌ನಲ್ಲಿ ಅತಿಯಾದ ಜನಜಂಗುಳಿಯಿದ್ದ ಕಾರಣ ಕೆಲ ದೃಶ್ಯಗಳನ್ನು ಚಿತ್ರೀಕರಿಸಲು ಸಾಧ್ಯವಾಗಿರಲಿಲ್ಲ.
ಹಾಗಾಗಿ ಈಗ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ಮತ್ತೂಮ್ಮೆ ಕಡಲೆ ಕಾಯಿ ಪರಿಷೆ ಸೆಟ್ ನಿರ್ಮಿಸಿರುವ ಚಿತ್ರತಂಡ, ಬಿಟ್ಟು ಹೋಗಿರುವ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸುವ ಕೆಲಸದಲ್ಲಿ ನಿರತವಾಗಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್, “ಚಿತ್ರದ ಕ್ಲೈಮ್ಯಾಕ್ಸ್ ಆದಷ್ಟು ರಿಯಾಲಿಸ್ಟಿಕ್ ಆಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಬಸವನಗುಡಿಯ ಪ್ರಸಿದ್ದ ಕಡಲೆ ಕಾಯಿ ಪರಿಷೆಯಲ್ಲಿ ಕ್ಲೈಮ್ಯಾಕ್ಸ್ ಬಾಗವನ್ನು ಶೂಟಿಂಗ್ ಮಾಡಲು ನಿರ್ಧರಿಸಿದ್ದೆವು.
ಅದರಂತೆ ಬಹುತೇಕ ದೃಶ್ಯಗಳನ್ನು ಅಲ್ಲಿಯೇ ಚಿತ್ರೀಕರಿಸಿದ್ದೆವು. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಕೆಲ ಆ್ಯಕ್ಷನ್ ದೃಶ್ಯಗಳನ್ನು ಕಡಲೆ ಕಾಯಿ ಪರಿಷೆಯಲ್ಲಿ ಜನಜಂಗುಳಿ ಜಾಸ್ತಿಯಿದ್ದ ಕಾರಣ ಶೂಟಿಂಗ್ ಮಾಡಲು ಆಗಿರಲಿಲ್ಲ. ಅದಕ್ಕಾಗಿ ಆಗ ಬಿಟ್ಟು ಹೋಗಿದ್ದ ಕೆಲ ದೃಶ್ಯಗಳನ್ನು ಅದೇ ಲೊಕೇಶನ್‌ನಲ್ಲಿ ಕಡಲೆ ಕಾಯಿ ಪರಿಷೆಯನ್ನು ರೀ-ಕ್ರಿಯೆಟ್ ಮಾಡಿ ಚಿತ್ರೀಕರಿಸುತ್ತಿದ್ದೇವೆ. ಕಳೆದ ಮೂರು ದಿನಗಳಿಂದ ಈ ಚಿತ್ರೀಕರಣ ನಡೆಯುತ್ತಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಇಲ್ಲಿಗೆ ಮುಗಿಯುತ್ತದೆ.
ಇನ್ನು ಈ ಮೊದಲು ಕಡಲೆ ಕಾಯಿ ಪರಿಷೆಗೆ ದೀಪಾಲಂಕಾರ ಮಾಡಿದ್ದವರೇ, ಈ ಸೆಟ್ಗೂ ಅಲಂಕಾರ ಮಾಡಿದ್ದಾರೆ. 60ಕ್ಕೂ ಹೆಚ್ಚು ಅಂಗಡಿಗಳನ್ನು ಮತ್ತೆ ಹಾಕಲಾಗಿದೆ’ ಎಂದು ಮಾಹಿತಿ ಕೊಡುತ್ತಾರೆ. “ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್ ಅವರಿಗೆ ಸಂಜನಾ ಆನಂದ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ಡಾಲಿ ಧನಂಜಯ್ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣದಲ್ಲಿರುವ “ಸಲಗ’ ಹೊಸವರ್ಷದಲ್ಲಿ ತೆರೆಗೆ ಬರಲಿದೆ.