Advertisement

Kadalekai Parishe: ಕಡಲೆಕಾಯಿ ಗಮ್ಮತ್ತಿಗೆ ಸಿಟಿ ಜನ ಫಿದಾ

12:08 PM Dec 12, 2023 | Team Udayavani |

ಬೆಂಗಳೂರು: ಮೋಡ ಮುಸುಕಿದ ತಂಪಿನ ವಾತಾವರಣದ ನಡುವೆ ಆಗಾಗ ಅಲ್ಲಲ್ಲಿ  ಶಾಲಾ-ಕಾಲೇಜು ವಿದ್ಯಾರ್ಥಿಗಳ ಗುಂಪಿನ ಪೀಪಿ ಶಬ್ದ. ಅಲಂಕಾರಿಕ ಹಾಗೂ ಆಭರಣಗಳ ಅಂಗಡಿಗಳ ಮುಂದೆ ಯುವತಿಯರದ್ದೇ ಸದ್ದು. ರಸ್ತೆ ಇಕ್ಕೆಲಗಳಲ್ಲೇ ಹಸಿ, ಬಿಸಿ ಹುರಿದ ಕಡಲೆಗಳ ಜತೆಗೆ ಬೆಂಡು ಬತಾಸ್‌ ಸೇರಿದಂತೆ ಸಿಹಿತಿಂಡಿಗಳ ಭರ್ಜರಿ ಮಾರಾಟ. ಸುತ್ತಮುತ್ತ ಸಂಚಾರ ದಟ್ಟಣೆಯದ್ದೇ ಕಾಟ. ಪರಿಷೆಯಲ್ಲಿ ನೆರೆದ ಜನಸ್ತೋಮಕ್ಕಂತೂ ಹಳ್ಳಿ ಸೊಗಡಿನ ರಸದೂಟ.

Advertisement

– ಇದು ಸೋಮವಾರ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದ ಪರಿಷೆಯಲ್ಲಿ ಕಂಡು ಬಂದ ದೃಶ್ಯ.

ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಸೋಮವಾರ ಪರಿಷೆಗೆ ಚಾಲನೆ ನೀಡಲಾಯಿತು. ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ಪ್ರತಿ ವರ್ಷ ಸಂಪ್ರದಾಯದಂತೆ ಕಾರ್ತಿಕ ಕಡೆ ಸೋಮವಾದಂದೇ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ  ಅವರು ಭಾನುವಾರವೇ ದೊಡ್ಡ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಪರಿಷೆಯ ಅಧಿಕೃತ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. “ಪರಿಷೆಗೆ ಬನ್ನಿ , ಕೈಚೀಲ ತನ್ನಿ’ ಎಂಬ ಘೋಷವಾಕ್ಯದಡಿ ಪರಿಷೆ ಆಚರಿಸಲಾಗುತ್ತಿದೆ.

ಕಡಲೆಕಾಯಿ ಪರಿಷೆಯಲ್ಲಿ ಹಳ್ಳಿ ತನ ಮೇಳೈಸಿದೆ. ನಗರಿಕರಣದ ಹಿನ್ನೆಲೆಯಲ್ಲಿ  ಹಳ್ಳಿತನ ಮರೆಯುತ್ತಿರುವ ಸಿಲಿಕಾನ್‌ ಸಿಟಿ ಜನರಿಗೆ ಕಾಡಲೇ ಕಾಯಿ ಪರಿಷೆ ಗ್ರಾಮೀಣ ಸೊಗಡನ್ನು ಕಟ್ಟಿಕೊಟ್ಟಿತು. ರಾಜಧಾನಿ ಸುತ್ತಮುತ್ತಲ ಪ್ರದೇಶದ ಜನರು ಪರಿಷೆಯಲ್ಲಿ ಪಾಲ್ಗೊಂಡು ಗ್ರಾಮೀಣ ಸೊಗಡಿಗೆ ಮಾರು ಹೋದರು. ಕಾರಂಜಿ ಆಂಜನೇಯ ದೇವಾಲಯ, ರಾಮಕೃಷ್ಣ ಆಶ್ರಮ, ಬುಲ್‌ ಟೆಂಪಲ್‌ ರಸ್ತೆ ಇಕ್ಕೆಲಗಳ ಸಾಲು, ಸಾಲು ಅಂಗಡಿಗಳಲ್ಲಿ ಜನರು ಖರೀದಿ ಸಂಭ್ರಮದಲ್ಲಿದ್ದರು.

Advertisement

ಬಾದಾಮಿ, ಬೆಳಗಾಂ ಕಾಯ್‌, ಸಾಮ್ರಾಟ್‌  ಸೇರಿದಂತ ಹಲವು ತಳಿಗಳ ಕಡಲೆಕಾಯಿಗಳ ಸವಿದು ಸಂಭ್ರಮಸಿದರು. ಕೆಲ ಭೋಜನಾ ಪ್ರಿಯರು ಬಗೆ ಬಗೆಯ ತಿನಿಸುಗಳ ಅಂಗಡಿ ಒಳಹೊಕ್ಕರೆ ಮಾನಿನಿಯರು ಆಭರಣಗಳ ಅಂಗಡಿಗಳಲ್ಲಿ ನೆರೆದಿದ್ದರು.

ತೆಂಗಿನ ಹೂವಿನ ಮಾರಾಟ: ತಮಿಳುನಾಡಿನಲ್ಲಿ ತೆಂಗಿನ ಹೂವಿಗೆ ಹೆಚ್ಚಿನ ಬೇಡಿಕೆಯಿದೆ. ಹಲವು ಪೋಷಕಾಂಶಗಳನ್ನು ಹೊಂದಿದ ತೆಂಗಿನ ಹೂವು ಕೂಡ ಕಡ ಲೆಕಾಯಿ ಪರಿಷೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ರಾಜಧಾನಿಯಲ್ಲಿ ನೆಲೆಸಿರುವ ತಮಿಳು ಮೂಲ ದವರು ತಳ್ಳು ಬಂಡಿಯಲ್ಲಿ ತೆಂಗಿನ ಹೂವಿನ ಮಾರಾಟಕ್ಕೆ ಇರಿಸಿದ್ದು ಪರಿಷೆಯಲ್ಲಿ ಜನರು ತೆಂಗಿನ ಹೂವಿನ ಬಗ್ಗೆ ಮಾಹಿತಿ ಪಡೆದದ್ದು ಕಂಡುಬಂತು.  ಒಂದು ತೆಂಗಿನ ಹೂವು 60 ರೂ.ಗೆ ಖರೀದಿಯಾಯಿತು. ತೆಂಗಿನ ಹೂವಿನಲ್ಲಿ ಅಧಿಕ ಪೋಷಕಾಂಶಗಳು ಇವೆ. ಜತೆಗೆ ರೋಗ ನಿರೋಧಕ ಶಕ್ತಿಯಿದೆ. ವ್ಯಾಯಾಮ ಮತ್ತು ಜಿಮ್‌ನಲ್ಲಿ ವರ್ಕ್‌ ಮಾಡಿದವರೆ ತೆಂಗಿನ ಹೂವಿನ ಸೇವನೆ ಶಕ್ತಿ ನೀಡುತ್ತದೆ. ಮಧುಮೇಹ ಹಾಗೂ ರಕ್ತದೊತ್ತಡ ಇರುವವರು ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತೆಂಗಿನ ಹೂವು ವ್ಯಾಪಾರಿ ಆನಂದನ್‌ ಹೇಳಿದರು.

ತೆಂಗಿನ ಹೂವು ಅಷ್ಟು ಜನಪ್ರಿಯವಾಗಿಲ್ಲ. ತೆಂಗಿನ ಹೂವು ತೆಂಗಿನಕಾಯಿಯ ಒಳಗಡೆ ಇರುತ್ತೆ. ಇದನ್ನು ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದು. ತಿನ್ನಲು ರುಚಿಕರವಾಗಿದೆ ಜತೆಗೆ ಆರೋಗ್ಯಕ್ಕೂ ಸಹ ಉತ್ತಮವಾಗಿದೆ ಎನ್ನುತ್ತಾರೆ.

ಭತ್ತದ ಹಾರಗಳಿಗೆ ಮನಸೋತ ಜನ:

ಪರಿಷೆಯಲ್ಲಿ ಸುತ್ತಾಡಿದರೆ ಹೊಸ ಹೊಸ ವಸ್ತುಗಳು ಗಮನ ಸೆಳೆಯುತ್ತವೆ. ಅದರಲ್ಲಿ ಮಂಗಳೂರು ಮತ್ತು ಮಲೆನಾಡಿ ಭಾಗದಲ್ಲಿ ಭತ್ತದಿಂದ ಮಾಡಿದ ಹಾರ ಕೂಡ ಒಂದಾಗಿದೆ. ಭತ್ತದಿಂದ ತಯಾರು ಮಾಡಲಾಗಿರುವ ಬಾಗಿಲಿನ ಹಾರ ಖರೀದಿಗೆ ಪರಿಷೆಯಲ್ಲಿ ಜನರು ಆಸಕ್ತಿ ತೋರಿದ್ದು ಕಂಡು ಬಂತು. ಮಂಗಳೂರು, ಶಿವಮೊಗ್ಗ, ಸಾಗರ ಭಾಗದಿಂದ ಭತ್ತದದಿಂದ ಮಾಡಿದ ಹಾರವನ್ನು ತಂದಿದ್ದು ಅಧಿಕ ಸಂಖ್ಯೆಯಲ್ಲಿ ಜನರು ಖರೀದಿಸಿದ್ದಾರೆ ಎಂದು ವ್ಯಾಪಾರಿ ಚಂದ್ರಶೇಖರ್‌ ತಿಳಿಸಿದರು. ಜಯ ಭತ್ತ, ಸಾವಿರ ಒಂದು ಎಂಬ ಭತ್ತದ ತಳಿಯಿಂದ ಹಾರಗಳನ್ನು ತಯಾರಿಸಲಾಗಿದೆ. 1 ಹಾರಕ್ಕೆ 250 ರೂ.ಅಂತೆ ಮಾರಾಟ ಮಾಡಿದ್ದೇನೆ. ಭಾನುವಾರವೇ  50ಕ್ಕೂ ಅಧಿಕ ಭತ್ತದ ಹಾರಗಳು ಮಾರಾಟವಾಗಿವೆ ಎಂದು ಖುಷಿ ಪಟ್ಟರು. ಗ್ರಾಮೀಣ ಸೊಗಡಿನ ಭತ್ತದ ಹಾರ ಇದಾಗಿದ್ದು ಮಲೆನಾಡಿನ ಭಾಗದಲ್ಲಿ ಮನೆಗಳ ಬಾಗಿನಲ್ಲಿ ಹೆಚ್ಚಾಗಿ ಅಲ್ಲಿನ ನಿವಾಸಿಗಳು ತೂಗು ಹಾಕುತ್ತಾರೆ. ಈಗ ಆ ಭತ್ತದ ಹಾರಕ್ಕೆ  ಸಿಟಿ ಜನರು ಕೂಡ ಮನಸೋತಿದ್ದಾರೆ ಎಂದು ಹೇಳುತ್ತಾರೆ.

ಲಕ್ಷಾಂತರ ಮಂದಿ ಭಾಗಿ, ಕೋಟ್ಯಂತರ ರೂ.ವ್ಯಾಪಾರ:

ಬೆಂಗಳೂರು: ಕಡಲೆಕಾಯಿ ಪರಿಷೆ ಅಂತಹ ಆಚರಣೆಗಳಿಂದ ಈ ನೆಲದ ಸಂಸ್ಕೃತಿ  ಜೀವಂತ ವಾಗಿ ಉಳಿದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಬಸವನ ಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಸೋಮವಾರ ನಡೆದ ಕಡಲೆ ಕಾಯಿ ಪರಿಷೆ ಚಾಲನೆ ಕಾರ್ಯ ಕ್ರಮದಲ್ಲಿ  ಮಾತನಾಡಿದರು.

ಕಡಲೆಕಾಯಿ ಪರಿಷೆ ಹಲವು ವರ್ಷಗಳಿಂದ ವಿಜೃಂಭಣೆ ಯಿಂದ ನಡೆದು ಕೊಂಡು ಬಂದಿದೆ. ಈ ವರ್ಷ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗಿ ಯಾಗಲಿದ್ದಾರೆ. ಪ್ರಧಾನಿ ಮೋದಿ ಅವರು  ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕತೆ ಉತ್ತೇಜನ ನೀಡುವಲ್ಲಿ ಮುಂದಾಗಿದ್ದಾರೆ. ಕಡಲೆಕಾಯಿ ಪರಿಷೆ ಸಾಕಷ್ಟು ವ್ಯಾಪಾರಿಗಳಿಗೆ ಆದಾಯ ತಂದುಕೊಡಲಿದೆ. ಕೋಟ್ಯಂತರ ರೂ. ವ್ಯಾಪಾರ ವಹಿವಾಟು ನಡೆಯಲಿದೆ ಎಂದರು.

ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಸಂಪ್ರ ದಾಯದಂತೆ ಕಡಲೆಕಾಯಿ ಉತ್ಸವ ಆಚರಿಸ ಲಾಗುತ್ತಿದೆ. ಹಿಂದೆ ಈ ಪ್ರದೇಶ ರೈತರ ಜಮೀ ನುಗಳಿಂದ ಸುತ್ತುವರಿದಿತ್ತು. ವಿವಿಧ ಭಾಗ ಗಳಿಂದ ಇಲ್ಲಿಗೆ ಕಡಲೆ ಕಾಯಿ ತಂದು ಮಾರುತ್ತಿದ್ದರು. ಆದರೆ, 2008ರಿಂದ ಪರಿಷೆಗೆ ಹೊಸ ಆಯಾಮ ನೀಡಲಾಗಿದೆ. ವಿಶೇ ಷವಾಗಿ ಒಂದು ವಾರ ಜಾತ್ರೆ ನಡೆಯಲಿದೆ. ಪರಿಷೆಗೆಂದು ಬರುವವರ ಸಂಖ್ಯೆ  ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ತಿಳಿಸಿದರು.

ಪರಿಷೆ  ವೇಳೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ಕೂಡ ನಡೆಯಲಿದೆ. ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ  ಎಂದರು. ಈ ವೇಳೆ ಶಾಸಕ ಉದಯ್‌ ಗರುಡಾಚಾರ್‌ ಮತ್ತಿತರರಿದ್ದರು.

ಪುಡಿ ಬೆಲ್ಲಕ್ಕೆ ಭಾರೀಡಿಮ್ಯಾಂಡ್‌:

ದೊಡ್ಡಗಣಪತಿ ದೇವಸ್ಥಾನದ ಬಳಿಯೇ ಮಂಡ್ಯ ಕೃಷಿ ಇಲಾಖೆ ಮಳಿಗೆ ತೆರೆದಿದ್ದು, ಭಿನ್ನ ಭಿನ್ನ ಬೆಲ್ಲದ ಅಚ್ಚುಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಮಂಡ್ಯ ಭಾಗದ ವಿವಿಧ ಹಳ್ಳಿಯ ರೈತರು ಭಿನ್ನ ಬಗೆಯ ಬೆಲ್ಲದ ಅಚ್ಚುಗಳನ್ನು ಮಾರಾಟ ಮಾಡುತ್ತಿದ್ದು, ಪುಡಿ ಬೆಲ್ಲದ ಪ್ಯಾಕೇಟ್‌ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಸಿದರು. ಪರಿಷೆಯಲ್ಲಿ  ಹಲವು ರೀತಿಯ ಅಚ್ಚು ಬೆಲ್ಲವನ್ನು ಜನರು ಖರೀದಿಸುತ್ತಿದ್ದಾರೆ. ಅದರಲ್ಲೂ ಪುಡಿ ಬೆಲ್ಲದ ಪ್ಯಾಕೇಟ್‌ಗೆ ಹೆಚ್ಚು ಡಿಮ್ಯಾಂಡ್‌ ಇದೆ ಎಂದು ಮಂಡ್ಯ ರೈತರು ಮಾಹಿತಿ ನೀಡಿದರು. ಕಡಲೆಕಾಯಿ ಪರಿಷೆಯಲ್ಲಿ ಇದೇ ಮೊದಲ ಬಾರಿಗೆ ಬೆಲ್ಲದ ಪರಿಷೆ ಆಯೋಜಿಸಲಾಗಿದೆ. ಜನರು ಕೂಡ ಬೆಲ್ಲದ ಪರಿಷೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪರಂಪರೆ ಹೀಗೆ ಮುಂದುವರಿಯಬೇಕಾಗಿದೆ ಎಂದು ಹೇಳಿದರು.

ನಾನು ಜೆಪಿ ನಗರದಿಂದ ಅಮ್ಮನ ಜತೆ ಬಂದಿದ್ದೇನೆ. ನನಗೆ ಈ ಪರಿಷೆ ಹಳ್ಳಿಯ ಜಾತ್ರೆ ನೆನಪಿಸಿದ್ದು ಮತ್ತೆ ನಮ್ಮೂರಿಗೆ ಹೋಗಿ ಬಂದ ಅನುಭವ ನೀಡಿದೆ. ಕಡಲೆಕಾಯಿಗಳಲ್ಲಿ ಇಷ್ಟೊಂದು ವಿಧಗಳಿವೆ ಎಂಬುವುದು ಗೊತ್ತಿರಲಿಲ್ಲ. ನನಗಂತೂ ಪರಿಷೆ ತುಂಬಾ ಖುಷಿ ಕೊಟ್ಟಿದೆ.-ಸುನೀತಾ, ಎಂಬಿಎ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next