Advertisement

ಕಾಡಬೆಟ್ಟು: ತುಳು ಜನಪದ ಆಚರಣೆ ಕಂಬಳ ಕೋರಿ

11:10 AM Nov 24, 2018 | |

ಪುಂಜಾಲಕಟ್ಟೆ: 500 ವರ್ಷಗಳ ಇತಿಹಾಸದ ಬಲು ಅಪರೂಪದ ಕಂಬಳ ಕೋರಿ ಆಚರಣೆಯನ್ನು ವರ್ಷಂಪ್ರತಿ ನಡೆಸುವಂತೆ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ನ. 19ರಂದು ಗ್ರಾಮಸ್ಥರ ಹಾಗೂ ಗುತ್ತಿನ ಮನೆಯವರ ಸೇರುವಿಕೆಯೊಂದಿಗೆ ಸಂಭ್ರಮದಿಂದ ನಡೆದಿದೆ.

Advertisement

ಆಚರಣೆಯ ವಿಶೇಷತೆ
ಮಳೆಗಾಲ ಕಳೆಯುತ್ತಿದ್ದಂತೆ ಕಂಬಳ ಕೋರಿ ನಡೆಸಲು ಗುತ್ತಿನ ಮನೆಯ ಯಜಮಾನರು ದಿನ ನಿಗದಿಪಡಿ ಸುತ್ತಾರೆ. ಕಂಬಳ ಕೋರಿ ಆರಂಭವಾಗುವ ಮೂರು ದಿನಗಳ ಮೊದಲು ಕೊರಗಜ್ಜ ದೈವ ಪಾತ್ರಿ ಗುತ್ತಿನ ಮನೆಯಿಂದ ಹೊರಟು, ಗ್ರಾಮದ ಪ್ರತಿ ಮನೆಗೂ ತೆರಳಿ ಕಂಬುಲದ ಕೋರಿಗ್‌ ದಿನ ಆತುಂಡ್‌. ಎಂಕ್‌ ಗ್ರಾಮ ದೈವ ಪಂಜುರ್ಲಿನ ಅಪ್ಪಣೆ ಆತುಂಡ್‌. ಎರುಮಾಣಿ ಬರೊಡುಗೆ (ಕಂಬಳ ಕೋರಿಗೆ ದಿನ ನಿಗದಿಯಾಗಿದೆ. ನನಗೆ ಗ್ರಾಮ ದೈವ ಪಂಜುರ್ಲಿಯ ಅಪ್ಪಣೆ ಆಗಿದೆ. ಜೋಡಿ ಕೋಣ ಹಾಗೂ ಉಳುಮೆಗಾರ ಬರಬೇಕಂತೆ) ಎಂದು ಆಮಂತ್ರಣವನ್ನು ನೀಡುತ್ತಾರೆ. ಮನೆ ಬಾಗಿಲಿಗೆ ಸುದ್ದಿ ಹೊತ್ತು ತಂದ ಕೊರಗಜ್ಜ ಪಾತ್ರಿಗೆ ಮನೆ ಮಂದಿ ಭತ್ತ, ಅಕ್ಕಿ, ವೀಳ್ಯದೆಲೆ ನೀಡಿ ಗೌರವಿಸಿ ಕಳುಹಿಸುತ್ತಾರೆ.

ಕಂಬಳ ಕೋರಿಗೆ 2 ದಿನ ಮೊದಲು ಡೆಕ್ಕೋರಿ ಎಂಬ ಪೂರ್ವ ಸಿದ್ಧತ ಕಾರ್ಯಕ್ರಮವಿರುತ್ತದೆ. ಮೊದಲ ದಿನ ತಡೆವು ಎಂಬ ಆಚರಣೆ ಇರುತ್ತದೆ. ಕೊಂಬು, ವಾಲಗ, ನಲಿಕೆ (ಜನಾಂಗದ ಹೆಸರು)ಯವರು ಗುತ್ತಿನ ಮನೆಗೆ ಬಂದು ಮನೆಯ ಯಜಮಾನನೊಂದಿಗೆ ಕಂಬಳ ಗದ್ದೆಗೆ ತೆರಳಿ, ಅಲ್ಲಿ ವಾದ್ಯ ನುಡಿಸಿ ಶುಭ ಹಾರೈಸುತ್ತಾರೆ.

ಪೂಕರೆ ಬಂಡಿ
ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿ ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿ ಎಳೆಯುವಂತೆ ನಾಗಬ್ರಹ್ಮ ದೈವ ಪಾತ್ರಿ ಅಪ್ಪಣೆ ನೀಡುತ್ತಾರೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಪಾತ್ರಿ ಎಲ್ಲರ ಜತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತಾರೆ.

ದೈವದ ಜತೆ ಓರ್ವ ವೇಷಧಾರಿ ಇದ್ದು ಎಲ್ಲ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡಲಾ ಗುತ್ತದೆ. ಫಸಲಿಗೆ ಕೀಟ ಬಾಧೆ ಬಾರದಂತೆ ತಡೆಯಲು ಉರವೆ ಎಂಬ ತೆಂಗಿನ ಗರಿಯಿಂದ ತಯಾರಿಸಿದ ಹಾವಿನಾಕೃತಿಯ ರಕ್ಷಾದಾರವನ್ನು ಗದ್ದೆ ಬದಿಯ ತೆಂಗಿನ ಮರಕ್ಕೆ ಕಟ್ಟಲಾಗುತ್ತದೆ. ನಾಗಬ್ರಹ್ಮ ದೈವದ ವಾಹನವಾಗಿ ಕುದುರೆಯನ್ನು ತೆಂಗಿನ ಹಸಿ ಸೋಗೆ ಯಿಂದ ಸಾಂಕೇತಿಕವಾಗಿ ನಿರ್ಮಿಸುತ್ತಾರೆ. ಅದನ್ನು ನಾಗಬನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ಗ್ರಾಮಸ್ಥರ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ನೀಡುತ್ತದೆ. ಬಳಿಕ ಹಬ್ಬದೂಟ ಮಾಡುತ್ತಾರೆ.

Advertisement

ದೈವ ಪಾತ್ರಿಗಳು, ಬ್ಯಾಂಡ್‌, ವಾಲಗದವರ ಸಹಿತ ಎಲ್ಲ ಕಾರ್ಯ ಕಾಡಬೆಟ್ಟು ಗ್ರಾಮದವರೇ ನಿರ್ವಹಿಸುವುದು ವಿಶೇಷ. ದೈವಾರಾಧನೆ ಮೂಲಕ ಕೃಷಿ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಒಂದಾಗಿ ಭಾಗವಹಿಸುವುದು ಕಾಡಬೆಟ್ಟು ಗ್ರಾಮಸ್ಥರಿಗೆ ಸಂಭ್ರಮವಾಗಿದೆ.

ಕಂಬಳ ಕೋರಿ ಎಂದರೆ 
ಭೂದೇವಿಯನ್ನು ಆರಾಧಿಸುವುದು ಕೃಷಿ ಸಂಸ್ಕೃತಿಯ ಅವಿಭಾಜ್ಯ ಕ್ರಮ. ಅದರ ಒಂದು ಅಂಗವೇ ಕಂಬಳ ಕೋರಿ ಎನ್ನುವ ಗದ್ದೆ ಪೂಜೆ. ಈ ಹಿನ್ನೆಲೆಯಲ್ಲಿ ನಿಗದಿಪಡಿಸಿದ ದಿನದಂದು ರೈತರೆಲ್ಲ ಗ್ರಾಮದ ಪ್ರಮುಖನ ಮನೆಯಲ್ಲಿ ಸೇರಿ ಜಾತಿ, ಪಂಗಡದ ಭೇದವಿಲ್ಲದೆ ಕಂಬಳಕೋರಿ ಆಚರಿಸುತ್ತಾರೆ. ದೈವಗಳ ಆರಾಧನೆಯೂ ಇದರಲ್ಲಿ ಪ್ರಧಾನವಾಗಿರುವುದರಿಂದ ಗ್ರಾಮಸ್ಥರೆಲ್ಲ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. 

ಕೋಣಗಳಿಂದ ಉಳುಮೆ
ಕಂಬಳ ಕೋರಿಯ ದಿನ ಮುಂಜಾನೆ ಗುತ್ತಿನ ಮನೆಯಿಂದ ಹೊರಟ ಕೊರಗಜ್ಜ ದೈವ ಪಾತ್ರಿ ಗ್ರಾಮದ ವಿವಿಧ ಮನೆಗಳಿಂದ ಬಂದ ಕೋಣಗಳೊಂದಿಗೆ ಕಂಬಳ ಗದ್ದೆಗೆ ಬಂದು ಕೋಣಗಳನ್ನು ಗದ್ದೆಗೆ ಇಳಿಯಲು ಅಪ್ಪಣೆ ನೀಡುತ್ತಾರೆ. ಎಲ್ಲ ಕೋಣಗಳನ್ನೂ ಒಮ್ಮೆಲೆ ಗದ್ದೆಗೆ ಇಳಿಸಿ ಮಧ್ಯಾಹ್ನದ ತನಕ ಗದ್ದೆ ಉಳುತ್ತಾರೆ. ಈಗ ಕೋಣ ಸಾಕುವವರ ಸಂಖ್ಯೆ ವಿರಳವಾಗಿ, ಕೋಣಗಳನ್ನು ಸಾಂಕೇತಿಕವಾಗಿಯಷ್ಟೇ ಗದ್ದೆಗೆ ಇಳಿಸಲಾಗುತ್ತದೆ. ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಲಾಗುತ್ತದೆ. ಇತ್ತ ಗುತ್ತಿನ ಮನೆಯಲ್ಲಿ ಗ್ರಾಮ ದೈವಗಳಿಗೆ ಪರ್ವ (ವಿಧಿಪೂರ್ವಕ ಆಹಾರ) ಹಾಕಿಸಿ, ಪಂಜುರ್ಲಿ ದೈವದ ಹಗಲು ನೇಮ (ನರ್ತನ ಸೇವೆ) ನಡೆಯುತ್ತದೆ. ಒಂದು ಗಂಟೆ ಕಾಲ ನೇಮ ನಡೆದು, ದೈವ ಅಂಗಿ ಏರಿಸುವ (ತೊಡುವ) ಸಂದರ್ಭ ದೈವದ ಮುಕ್ಕಾಲ್ದಿ (ಪಾತ್ರಿ), ನಾಗಬ್ರಹ್ಮ ದೈವ (ವೇಷಧಾರಿ ಪಾತ್ರಿ), ಗುತ್ತಿನ ಯಜಮಾನ, ತಂತ್ರಿ ಬಳಗ ಹಾಗೂ ಗ್ರಾಮಸ್ಥರೊಂದಿಗೆ ಕೊಂಬು ವಾಲಗದ ಹಿಮ್ಮೇಳ ದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next