Advertisement

Kadaba: ಈ ದೇವಸ್ಥಾನದಲ್ಲಿ ತ್ರಿಶೂಲಕ್ಕೇ ಪೂಜೆ!

01:13 PM Oct 10, 2024 | Team Udayavani |

ಕಡಬ: ಕಡಬ ತಾಲೂಕಿನ ಬಳ್ಪದ ಪ್ರಕೃತಿ ರಮಣೀಯ ಪ್ರದೇಶದಲ್ಲಿರುವ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂಲ ವಿಗ್ರಹವೇ ತ್ರಿಶೂಲ! ಅದಕ್ಕೇ ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ. 1200 ವರ್ಷಗಳ ಇತಿಹಾಸವಿರುವ ಶಿಲಾಮಯ ದೇಗುಲ ತನ್ನ ಭವ್ಯ ನಿರ್ಮಾಣ ಮತ್ತು ಐತಿಹ್ಯಗಳಿಂದ ಗಮನ ಸೆಳೆಯುತ್ತಿದ್ದು, ನವರಾತ್ರಿ ಸಂದರ್ಭದಲ್ಲಿ ಸಾಕಷ್ಟು ಭಕ್ತರನ್ನು ಸೆಳೆಯುತ್ತಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು ಮುಖ್ಯರಸ್ತೆಯಲ್ಲಿ ಅಡ್ಡಬೈಲು ಎಂಬಲ್ಲಿಂದ 3 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ಗರ್ಭಗುಡಿಯಲ್ಲಿ ಸಿಂಹ ಲಾಂಛನವಿರುವ ಸಾಲಿಗ್ರಾಮ ಶಿಲೆಯ ಪಾಣಿಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿಲಾಮಯ ತ್ರಿಶೂಲ ಇಲ್ಲಿನ ಮೂಲ ವಿಗ್ರಹ.

ಇಲ್ಲಿನ ಶಿಲಾಕಂಭಗಳು ಹಾಗೂ ಕಲ್ಲುಹಾಸಿನ ನೆಲದಲ್ಲಿ ಉತ್ತರ ಭಾರತದ ಪುರಾತನ ಲಾಕುಲೀಶ ಶೈಲಿಯ ಸುಂದರ ಶಿಲ್ಪಗಳ ಕೆತ್ತನೆಯನ್ನು ಕಾಣಬಹುದು. ಇತಿಹಾಸದ ದಾಖಲೆಗಳಲ್ಲಿ ಈ ದೇವಾಲಯವನ್ನು ಬಳಪ ತ್ರಿಶೂಲಿನೀ ಎಂದು ಹೆಸರಿಸಲಾಗಿದೆ. ಕದಂಬರು, ಅಳುಪ ಅರಸರು, ಕೊಡಗು ರಾಜರು ಹಾಗೂ ಇಕ್ಕೇರಿ ಅರಸರ ಕಾಲದಲ್ಲಿ ಇಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತಿತ್ತಂತೆ.

ಪುರಾತತ್ವ ಇಲಾಖೆಯ ಸಂರಕ್ಷಿತ ಪ್ರಾಚೀನ ಸ್ಮಾರಕವೆಂದು ಗುರುತಿಸಲ್ಪಟ್ಟಿರುವ ಈ ದೇವಾಲಯ 2017ರಲ್ಲಿ ಜೀರ್ಣೋದ್ಧಾರಗೊಂಡಿದೆ. ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಉಪಸ್ಥಿತಿ ಯಲ್ಲಿ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕುಂಭಾಭಿಷೇಕ ನೆರವೇರಿಸಿದ್ದರು. ಈಗ ಮೊರೋಜ ವಂಶಸ್ಥರಿಂದ ಊರವರ ಸಹಕಾರದೊಂದಿಗೆ ಆಡಳಿತ ನಡೆಯುತ್ತಿದೆ. ಶ್ರೀವತ್ಸ ಎಂ.ವಿ. ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರು ಮತ್ತು ಪ್ರಧಾನ ಅರ್ಚಕರಾಗಿದ್ದಾರೆ.

ತ್ರಿಶೂಲಿನಿ ಎಂಬ ಹೆಸರು ಹೇಗೆ ಬಂತು?
ದೈವ ಭಕ್ತೆಯೊಬ್ಬಳು ಪಾರ್ವತಿಯ ದರ್ಶನಾಕಾಂಕ್ಷಿಯಾಗಿ ಭೋಜನ ಸಿದ್ಧಪಡಿಸಿ ಬಂಡೆಗಳ ಬಳಿ ಊಟ ಬಡಿಸಿ ಬರುವಂತೆ ಪ್ರಾರ್ಥನೆ ಮಾಡುತ್ತಿದ್ದಳು. ಹಿಂಭಾಗದ ವನದಲ್ಲಿ ಕ್ರೋಢ ಮುನಿಗಳು ತಪಸ್ಸು ಮಾಡುತ್ತಿದ್ದರು. ಏಕಾಂತದಲ್ಲಿರುವಾಗ ಶಿವ ಈ ವಿಷಯ ತಿಳಿದು ಪಾರ್ವತಿಗೆ ಹೋಗಿ ಅನುಗ್ರಹಿಸಿ ಬರುವಂತೆ ಸೂಚಿಸುತ್ತಾನೆ. ಈ ನಡುವೆ, ದೈತ್ಯನೊಬ್ಬನ ಉಪಟಳ ಸಹಿಸಲಾಗದೆ ದೇವತೆಗಳು ಮೊರೆ ಇಟ್ಟಾಗ ಆ ಕೆಲಸಕ್ಕೂ ಪಾರ್ವತಿಯನ್ನೇ ನಿಯೋಜಿಸುತ್ತಾನೆ ಶಿವ. ದೇವಿಯು ತ್ರಿಶೂಲ ಧರಿಸಿ ದೈತ್ಯನೊಂದಿಗೆ ಕಾದಾಡುತ್ತಾ ಕಾಲಗಳೇ ಕಳೆಯುತ್ತವೆ. ಆಕಾಶದಲ್ಲಿ ನಡೆದ ಯುದ್ಧದ ನಡುವೆ ಕೆಳಗೆ ನೋಡಿದಾಗ ಭಕ್ತೆ ಕಾಯುತ್ತಿರುವುದು ಗೋಚರವಾಗುತ್ತದೆ. ಆಗ ಪಾರ್ವತಿ ಯುದ್ಧಕ್ಕೆ ತ್ರಿಶೂಲವನ್ನು ನಿಯೋಜಿಸಿ ಕೆಳಗಿಳಿಯುತ್ತಾಳೆ. ಇತ್ತ ದೈತ್ಯ ಮತ್ತು ತ್ರಿಶೂಲಗಳ ಯುದ್ಧದ ಸದ್ದಿನಿಂದ ಎಚ್ಚರಗೊಳ್ಳುವ ಕ್ರೋಢ ಮುನಿ ತಪೋಬಲದಿಂದ ತ್ರಿಶೂಲವನ್ನು ಅಲ್ಲೇ ಪ್ರತಿಷ್ಠಾಪಿಸುತ್ತಾರೆ. ಭಕ್ತೆ ಮನಸ್ಸಿನಿಚ್ಛೆ ಪೂರೈಸಿ ಬಂದ ಪಾರ್ವತಿಗೆ ತ್ರಿಶೂಲ ಕಾಣಿಸುವುದಿಲ್ಲ. ಇದು ಕ್ರೋಢ ಮುನಿಯ ಶಕ್ತಿ ಎಂದು ತಿಳಿದು ಪ್ರಶ್ನಿಸುತ್ತಾಳೆ. ಕ್ರೋಢ ಮುನಿ ತ್ರಿಶೂಲವನ್ನು ತೆಗೆದುಕೊಡದೆ ಇದ್ದಾಗ ಏನು ವರ ಬೇಕು ಎಂದು ಕೇಳುತ್ತಾಳೆ ಪಾರ್ವತಿ. ಆಗ ಕ್ರೋಢ ಮುನಿ ಇಲ್ಲೇ ನೆಲೆಸಿ ಭೂಮಿಯನ್ನು ಪಾವನಗೊಳಿಸಬೇಕು ಎಂದು ಕೇಳುತ್ತಾರೆ. ಹಾಗೆ ಪಾರ್ವತಿ ಅಲ್ಲಿ ತ್ರಿಶೂಲಿನಿಯಾಗಿ ನೆಲೆ ನಿಲ್ಲುತ್ತಾಳೆ ಎಂಬುದು ಪುರಾಣ ಕಥೆ. ಅದಕ್ಕೆ ಸಾಕ್ಷ್ಯವೆಂಬಂತೆ ದೇವಸ್ಥಾನದ ಅನತಿ ದೂರದಲ್ಲಿ ಪೂರ್ಣರೂಪದ ನಿಂತ ಭಂಗಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ದೇವಿಯ ದೇವಾಲಯವಿದೆ.

Advertisement

ಇನ್ನೊಂದು ಕಥೆಯೂ ಇದೆ
ನಾಡಿ ಗ್ರಂಥದ ದಾಖಲೆಯಲ್ಲಿ ಈ ಕ್ಷೇತ್ರವು ಸತಿ ಕ್ಷೇತ್ರವೆಂಬ ಉಲ್ಲೇಖವಿದೆ. ದಾಕ್ಷಾಯಿಣಿಯು ಶಿವನನ್ನು ಒಲಿಸಿಕೊಂಡ ಜಾಗವಿದು ಎಂಬ ಕಾರಣಕ್ಕಾಗಿ ಇಲ್ಲಿ ವಿವಾಹ ಭಾಗ್ಯಕ್ಕಾಗಿ ತಾಳಿ ಮತ್ತು ಮೂಗುತಿ ಹರಕೆ ಒಪ್ಪಿಸುವುದು ವಿಶೇಷವಾಗಿದೆ.

ಪಾಂಡವರು ನಿರ್ಮಿಸಿದ ದೇವಾಲಯವೆಂಬ ನಂಬಿಕೆ
ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಬಳ್ಪದ ಬೋಗಾಯನ ಕೆರೆಯಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಇರಿಸಿ ಈ ದೇವಾಲಯವನ್ನು ಒಂದೇ ದಿನದಲ್ಲಿ ನಿರ್ಮಿಸಿದ್ದಾರೆ ಎನ್ನುವ ನಂಬಿಕೆಯಿದೆ. ಬೆಳಗ್ಗೆ ದೇಗುಲವನ್ನು ನಿರ್ಮಿಸಲು ಆರಂಭಿಸಿದ ಪಾಂಡವರು ಸಂಜೆಗೆ ಪೂರ್ಣಗೊಳಿಸಿ ಬಾಕಿ ಉಳಿದ ಬಂಡೆಗಳನ್ನು ಹಾಗೆಯೇ ಬಿಟ್ಟರು ಎನ್ನುವ ಮಾತಿದೆ.

ಶುಕ್ರವಾರ ವಿಶೇಷ ಪೂಜೆ
ತ್ರಿಶೂಲಿನಿ ಸನ್ನಿಧಿಯಲ್ಲಿ ಗಣಪತಿ, ಆಂಜನೇಯ, ನಾಗ, ದೈವಗಳು ಇವೆ. ಸಂತಾನ ಭಾಗ್ಯಕ್ಕಾಗಿ ತುಲಾಭಾರ ಸೇವೆ, ವಿವಾಹ ಭಾಗ್ಯಕ್ಕಾಗಿ ತಾಳಿ, ಮೂಗುತಿ ಸಮರ್ಪಣೆ, ಸುಮಂಗಲಿ ಪೂಜೆ, ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ.

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next