Advertisement
ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ವಿಷಯ ಸೂಚಿಯಡಿ ಪ್ರಸ್ತಾವಿಸಿದ ಅವರು, ಈ ಎರಡು ಗ್ರಾಮಗಳು ಕಡಬ ತಾಲೂಕಿನಿಂದ 5ರಿಂದ 12 ಕಿ.ಮೀ. ದೂರದಲ್ಲಿವೆ. ಈ ಹಿಂದಿನ ಸಭೆಯಲ್ಲೂ ಸೇರ್ಪಡೆಗೆ ಆಗ್ರಹಿಸಿ ನಿರ್ಣಯಿಸಲಾಗಿತ್ತು. ಜನರ ಅನುಕೂಲಕ್ಕಾಗಿ ಶಾಸಕರು ಸೇರ್ಪಡೆ ಆಗ್ರಹವನ್ನು ಉದ್ಘಾಟನ ಸಭೆಯಲ್ಲಿ ಮಂಡಿಸಬೇಕು. ಜತೆಗೆ ವಿಧಾನಸಭೆಯಲ್ಲಿಯೂ ಪ್ರಸ್ತಾವಿಸಬೇಕು ಎಂದು ಅಬ್ದುಲ್ ಗಫೂರ್ ಹೇಳಿದರು.
ಆಶೋಕ್ ನೆಕ್ರಾಜೆ ಮಾತನಾಡಿ, ನನ್ನ ತಾ.ಪಂ. ಕ್ಷೇತ್ರದ ಎಲ್ಲ ಗ್ರಾಮಗಳು ಹಾಗೂ ಮಡಪ್ಪಾಡಿ ಕ್ಷೇತ್ರದ ಐನೆಕಿದು ಗ್ರಾಮ, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸುಳ್ಯ ತಾಲೂಕಿನಿಂದ ಕಡಬ ತಾಲೂಕಿಗೆ ಸೇರ್ಪಡೆಗೊಂಡಿವೆ. ಹೊಸ ತಾಲೂಕಿನ ಉದ್ಘಾಟನೆ ನ. 25ಕ್ಕೆ ನಡೆಯಲಿದ್ದು, ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುವಂತೆ ವಿನಂತಿಸಿದರು. ತಹಶೀಲ್ದಾರ್ ಕೆಲಸ ಇಒ ಮಾಡಬೇಕಾ?
ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಇಒ ಅವರ ವ್ಯಾಪ್ತಿಗೆ ವರ್ಗಾಯಿಸುತ್ತಿರುವ ಬಗ್ಗೆ ಮಧ್ಯಪ್ರವೇಶಿಸಿ ಗರಂ ಆದ ತಾ.ಪಂ. ಇಒ ಮಧು ಕುಮಾರ್, ಯಾವ ಪ್ರಶ್ನೆಗೂ ನಿಮ್ಮಲ್ಲಿ ಸಮರ್ಪಕ ಉತ್ತರ ಇಲ್ಲ. ತಹಶೀಲ್ದಾರ್ ಮಾಡುವ ಕೆಲಸ ಇಒ ಮಾಡಬೇಕಾ ಎಂದು ಪ್ರಶ್ನಿಸಿದರು. ಎಲ್ಲ ಸಮಸ್ಯೆಗಳಿಗೂ ಎಸಿ, ಡಿಸಿಗೆ ಬರೆದಿದ್ದೇವೆ ಎಂದು ಪಾಲನ ವರದಿಯಲ್ಲಿ ಉತ್ತರಿಸುವ ಬದಲು ಅದರ ಉಲ್ಲೇಖವನ್ನು ದಾಖಲಿಸಿ. ಮಾಹಿತಿ ಇದ್ದರೆ ನಾವಾದರೂ ಫಾಲೋಅಪ್ ಮಾಡಬಹುದು. ಸಭೆಗೆ ಬರುವಾಗ ಮಾಹಿತಿ ಅರಿತು ಬರಬೇಕು ಎಂದರು. ಎಡಮಂಗಲ ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿ ಸಮರ್ಪಕ ಅಲ್ಲದ ಮಾಹಿತಿ ನೀಡಿರುವುದಕ್ಕೆ ಉಪಾಧ್ಯಕ್ಷೆ ಶುಭದಾ ಎಸ್. ರೈ ಹಾಗೂ ಕಲ್ಮಡ್ಕ ಅಂಬೇಡ್ಕರ್ ಭವನದ ಬಗ್ಗೆ ಉಲ್ಲೇಖ ಇರದ ಬಗ್ಗೆ ಅಬ್ದುಲ್ ಗಫೂರ್ ಅವರು ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
Related Articles
ಕಲಾಪ ಆರಂಭಕ್ಕೆ ಮೊದಲು ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಸದಸ್ಯ ಆಶೋಕ್ ನೆಕ್ರಾಜೆ ತೀವ್ರ ಆಕೋಶ ವ್ಯಕ್ತಪಡಿಸಿದರು. ಪ್ರತಿ ಬಾರಿಯು ಈ ಬಗ್ಗೆ ಚರ್ಚೆ ಆಗುತ್ತದೆ. ಆದರೂ ನಮ್ಮ ಮಾತಿಗೆ ಬೆಲೆ ಇಲ್ಲ. ನಮ್ಮ ಸಮಸ್ಯೆಗಳಿಗೆ ಉತ್ತರ ಕೊಡುವವರು ಇಲ್ಲ ಎಂದಾದರೆ ನಾವು ಸಭೆ ನಡೆಸುವುದು ಏಕೆ ಎಂದರು. ಅಬ್ದುಲ್ ಗಫೂರ್, ರಾಧಾಕೃಷ್ಣ ಬೊಳ್ಳೂರು ಮೊದಲಾವರು ಅಧಿಕಾರಿಗಳ ಗೈರಿನ ಬಗ್ಗೆ ಅಸಮಾಧಾನ ತೋಡಿಕೊಂಡರು.
Advertisement
ಒಂದು ಹಂತದಲ್ಲಿ ಸಭೆ ಮೊಟಕುಗೊಳಿಸಿ ಹೋಗೋಣ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮಧ್ಯ ಪ್ರವೇಶಿಸಿದ ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಜಿಲ್ಲಾಡಳಿತ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಸಭೆಗೆ ಬರಬೇಕಾದರೆ 15 ದಿವಸಕ್ಕೆ ಮೊದಲು ನೋಟಿಸ್ ನೀಡಬೇಕು. ಅದು ಪಾಲನೆ ಆಗಿದೆಯಾ? ಬಾರದಿದ್ದರೆ ಇಒ ಅವರ ಬಳಿ ಉತ್ತರ ಕೇಳಿದ್ದೀರಾ ಎಂದು ಪ್ರಶ್ನಿಸಿದರು. ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಈ ಹಿಂದೆ ಇಒ ಅವರ ಬಳಿ ತೆರಳಿ ವಿಷಯ ತಿಳಿಸಲಾಗಿದೆ. ಅವರಿಂದಲೂ ಸಮಸ್ಯೆ ಬಗೆಹರಿಸಲಾಗಿಲ್ಲ. ಇನ್ನೂ ಅವರ ವಿರುದ್ಧವೇ ನಿರ್ಣಯ ಕೈಗೊಳ್ಳಬೇಕಷ್ಟೆ ಎಂದರು.
ಹರೀಶ್ ಕಂಜಿಪಿಲಿ ಮಾತನಾಡಿ, 15 ದಿವಸದ ಮೊದಲು ನೋಟಿಸ್ ಮತ್ತು ಲಿಖೀತ ಪ್ರಶ್ನೆ ಕಳುಹಿಸಬೇಕು. ಅದು ಪಾಲನೆ ಆಗಿರುವ ಬಗ್ಗೆ ಪರಿಶೀಲಿಸಬೇಕು. ಈ ಸಭೆಯಲ್ಲಿ ತಾ.ಪಂ. ವ್ಯಾಪ್ತಿಯ ಅಧಿಕಾರಿಗಳು ಇರುವ ಕಾರಣ ಸಭೆ ನಡೆಸೋಣ. ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಗಮನಕ್ಕೆ ತರೋಣ ಎಂದರು. ಅಶೋಕ್ ನೆಕ್ರಾಜೆ ಮಾತನಾಡಿ, ಸಭೆ ಆರಂಭಿಸಿ, ಇಲ್ಲಿ ಅಧಿಕಾರಿಗಳು ಇಲ್ಲ. ಆದರೆ ಸಭೆ ನಡೆಸಲಾಗುತ್ತಿದೆ. ನಮ್ಮ ಎಲ್ಲ ಪ್ರಶ್ನೆಗಳಿಗೆ ಅಧ್ಯಕ್ಷರೇ ಉತ್ತರ ನೀಡಬೇಕು. ಉತ್ತರ ಸಿಗದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದರು. ಆ ಬಳಿಕ ಸಭೆ ಮುಂದುವರಿಯಿತು.
ಮನೆ ಕಳಕೊಂಡವರಿಗೆ ಪೂರ್ಣ ನಷ್ಟ ಭರಿಸಿಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಡಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕೊಡಗು ಮಾದರಿಯಲ್ಲಿ ಪರಿಹಾರ ಸಿಗದಿರುವುದರಿಂದ ಅವರಿಗೆ ಸಮಸ್ಯೆ ಉಂಟಾಗಿದೆ ಎಂದರು. ಇದಕ್ಕೆ ಅಬ್ದುಲ್ ಗಫೂರ್ ಧ್ವನಿಗೂಡಿಸಿದರು. ಮನೆ ಕಳೆದುಕೊಂಡವರಿಗೆ ಪೂರ್ತಿ ನಷ್ಟ ಪರಿಹಾರ ಮೊತ್ತ ಭರಿಸುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. ಸುಳ್ಯದಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಲಾಯಿತು. ಸುಬ್ರಹ್ಮಣ್ಯದಲ್ಲಿ 108 ಆ್ಯಂಬುಲೆನ್ಸ್ ಸಮಸ್ಯೆ, ಕುಮಾರಧಾರೆಯಲ್ಲಿ ತ್ಯಾಜ್ಯ ಎಸೆಯುವಿಕೆ, ತಾಲೂಕು ಕಚೇರಿಯಲ್ಲಿ ಸಿಬಂದಿ ಕೊರತೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಿತು.