Advertisement

ಕಡಬ: ಅಧಿಕಾರಿಗಳಿಂದ ಬಸ್‌ ನಿಲ್ದಾಣಕ್ಕೆ ಕಾದಿರಿಸಿದ ಜಮೀನು ಪರಿಶೀಲನೆ

03:22 PM Mar 17, 2017 | |

ಕಡಬ: ಸರಕಾರಿ ಬಸ್‌ ನಿಲ್ದಾಣ ನಿರ್ಮಾಣದ ಉದ್ದೇಶದಿಂದ ಅಂಬೇಡ್ಕರ್‌ ಭವನದ ಬಳಿ ಕಾದಿರಿಸಲಾಗಿರುವ ಸರಕಾರಿ ಜಮೀನನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ವೆಂಕಟೇಶ್‌ ನೇತೃತ್ವದ ಅಧಿಕಾರಿಗಳ ತಂಡ  ಗುರುವಾರ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್‌ ಅವರು, ತಾಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟಿ ರುವ ಕಡಬದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಜಮೀನು ಒದಗಿಸುವಂತೆ ಸರಕಾರಕ್ಕೆ ಬರೆದುಕೊಳ್ಳಲಾಗಿತ್ತು. ಅದರಂತೆ ಇದೀಗ 1.73 ಎಕ್ರೆ  ಜಮೀನನ್ನು ಕಂದಾಯ ಇಲಾಖೆಯವರು ಕಾದಿರಿಸಿದ್ದಾರೆ. ಜಮೀನನ್ನು ನಿಗಮಕ್ಕೆ ವರ್ಗಾಯಿಸಿದ ಬಳಿಕ ಮುಂದಿನ ಕಾರ್ಯ ಚಟುವಟಿಕೆಗಳು ನಡೆಯಲಿವೆ. ಅದಕ್ಕೂ ಮೊದಲು ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.
 
ನಿಗಮದ ಪುತ್ತೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಿವಾಕರ ಎಸ್‌. ಯರಗೊಪ್ಪ ಅವರು ಮಾತನಾಡಿ, ಮುಖ್ಯವಾಗಿ ಬಸ್‌ ನಿಲ್ದಾಣವನ್ನು  ಸಂಪರ್ಕಿಸಲು  ಎರಡು ಬಸ್‌ಗಳು ಸುಗಮವಾಗಿ ಸಂಚರಿಸುವಷ್ಟು ಅಗಲದ (60 ಫೀಟ್‌) ರಸ್ತೆ ಆಗತ್ಯ. ಮುಖ್ಯ ರಸ್ತೆಯಿಂದ ಬಸ್‌ ನಿಲ್ದಾಣದ ಜಾಗದ ತನಕ ರಸ್ತೆಗೆ ಅಗತ್ಯವಿರುವ ಜಮೀನನ್ನು ಗುರುತಿಸಿ ಕೊಡುವ ಕೆಲಸವೂ ಕಂದಾಯ ಇಲಾಖೆಯಿಂದ ಆಗಬೇಕಿದೆ ಎಂದರು.
  
ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ. ವರ್ಗೀಸ್‌ ಅವರು ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಕಡಬದಲ್ಲಿ ಸುಸಜ್ಜಿತ ಸರಕಾರಿ ಬಸ್‌ ನಿಲ್ದಾಣ ನಿರ್ಮಿಸಲು ಹಲವು ವರ್ಷಗಳಿಂದ ಪ್ರಸ್ತಾವನೆ ಇದೆ. ಆದರೆ ಸೂಕ್ತ ಜಮೀನಿನ ಕೊರತೆ ಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೀಗ ಜಮೀನನ್ನು ಗುರುತಿಸಲಾಗಿದೆ. ಶೀಘ್ರ  ಅಗತ್ಯ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದರು.

ನಿಗಮದ ಪುತ್ತೂರು ವಿಭಾಗದ ವಿಭಾಗ ನಿಯಂತ್ರಣಾಧಿಕಾರಿ ನಾಗರಾಜ್‌ ಎಲ್‌., ಕಡಬ ತಾ.ಪಂ. ಕ್ಷೇತ್ರದ ಸದಸ್ಯ ಫಝಲ್‌ ಕೋಡಿಂಬಾಳ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ, ಕಾರ್ಯದರ್ಶಿ ಆನಂದ ಗೌಡ, ಸದಸ್ಯರಾದ ಅಶ್ರಫ್‌ ಶೇಡಿಗುಂಡಿ, ಶರೀಫ್‌ ಎ.ಎಸ್‌., ಹನೀಫ್‌ ಕೆ.ಎಂ., ನೀಲಾವತಿ ಶಿವರಾಮ್‌,  ಕುಟ್ರಾಪ್ಪಾಡಿ ಗ್ರಾ.ಪಂ. ಸದಸ್ಯ ಬಿನೋಜ್‌, ಗ್ರಾಮ ಕರಣಿಕ ನಬೀ ಸಾಬ್‌, ಕಡಬ ವರ್ತಕ ಸಂಗದ ಅಧ್ಯಕ್ಷ ಶಿವರಾಮ ಎಂ.ಎಸ್‌., ಸತೀಶ್‌ ನಾೖಕ್‌ ಮೇಲಿನಮನೆ, ಸುಧೀರ್‌ ದೇವಾಡಿಗ ಹೊಸ್ಮಠ ಹಾಜರಿದ್ದರು.

ಕಡಬ-ಉಪ್ಪಿನಂಗಡಿ
ಸಂಜೆ ಬಸ್‌ಗೆ ಮನವಿ

ಕಡಬದಿಂದ ಉಪ್ಪಿನಂಗಡಿ ಭಾಗಕ್ಕೆ ಸಂಜೆ 6.15ರ ಬಳಿಕ ಸರಕಾರಿ ಬಸ್‌ ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ವರ್ತಕ ಸಂಘದ ಅಧ್ಯಕ್ಷ ಶಿವರಾಮ್‌ ಎಂ.ಎಸ್‌. ಅವರು ನಿಗಮದ ಸಂಚಾರ ಅಧಿಕಾರಿ ವೆಂಕಟೇಶ್‌ ಅವರ ಗಮನ ಸೆಳೆದು ರಾತ್ರಿ 7.30 ಅಥವಾ 8 ಗಂಟೆಯ ವೇಳೆಗೆ ಕಡಬದಿಂದ ಉಪ್ಪಿನಂಗಡಿಯತ್ತ ಸಂಚರಿಸುವಂತೆ ಬಸ್‌ ಓಡಿಸಲು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಅಧಿಕಾರಿ 1 ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next