Advertisement
ಕಡಬ ತಾಲೂಕು ಕೇಂದ್ರವಾದರೂ ಕಂದಾಯ ಇಲಾಖೆಗೆ ಸಂಬಂಧಿಸಿದ ಬೇರೆ ಬೇರೆ ಕಚೇರಿಗಳು ಒಂದೇ ಸೂರಿನಡಿ ಬಾರದೇ ಇದ್ದುದರಿಂದ ಜನರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡಬೇಕಾದ ಅನಿವಾರ್ಯತೆ ಮಾತ್ರ ತಪ್ಪಿರಲಿಲ್ಲ. ಕೆಲ ವರ್ಷಗಳ ಹಿಂದೆ ಕಡಬ ಎಪಿಎಂಸಿ ಉಪ ಪ್ರಾಂಗಣದ ಬಳಿಯ ಸ್ವಂತ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರವಾದರೂ ಭೂಮಿ ಕೇಂದ್ರ, ಕಂದಾಯ ನಿರೀಕ್ಷಕರ ಕಚೇರಿ ಹಾಗೂ ದಾಖಲೆಗಳ ಕೊಠಡಿ ಈ ಹಿಂದೆ ತಹಶೀಲ್ದಾರ್ ಕಚೇರಿ ಇದ್ದ ಪಟ್ಟಣ ಪಂಚಾಯತ್‌ನ ಬಾಡಿಗೆ ಕಟ್ಟಡದಲ್ಲಿಯೇ ಉಳಿದಿತ್ತು. ಭೂಮಾಪನಾ ಇಲಾಖಾ ಕಚೇರಿಯೂ ಕಡಬ ಪೇಟೆಯ ಬಾಡಿಗೆ ಕೊಠಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದುದರಿಂದ ಕಂದಾಯ ಇಲಾಖಾ ಕೆಲಸಕಾರ್ಯಗಳಿಗೆ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಬರುವ ಜನಕ್ಕೆ ಅಲೆದಾಟ ತಪ್ಪಿರಲಿಲ್ಲ. ಇದೀಗ ಸುಸಜ್ಜಿತವಾದ ನಿರ್ಮಾಣಗೊಂಡಿರುವ ತಾಲೂಕು ಆಡಳಿತ ಸೌಧದಲ್ಲಿ ಒಂದೇ ಸೂರಿನಡಿ ವಿವಿಧ ಇಲಾಖೆಗಳ ಕಚೇರಿಗಳು ತೆರೆದುಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ನೂತನ ಕಟ್ಟಡ
ಜನಸಾಮಾನ್ಯರಿಗೆ ಅನುಕೂಲ ವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ತೆರೆಯಲ್ಪಡಬೇಕು ಎನ್ನುವ ಸರಕಾರದ ಆಶಯದಂತೆ ಕಡಬದಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರುಗೊಂಡು ತಹಶೀಲ್ದಾರ್‌ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2 ರಲ್ಲಿ ಇರುವ 1.60 ಎಕ್ರೆ ಜಮೀನಿನಲ್ಲಿ ಕರ್ನಾಟಕ ಗೃಹ ಮಂಡಳಿಯ ಮೂಲಕ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದೆ. ನೂತನ ಸೌಧದಲ್ಲಿ ತಹಶೀಲ್ದಾರರ ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಶಾಸಕರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೆ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಜೂನ್ ವೇಳೆಗೆ ಲಭ್ಯ
ನೂತನ ಕಟ್ಟಡದ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿ ತಾಂತ್ರಿಕ ತೊಡಕುಗಳಿದ್ದ ಕಾರಣದಿಂದಾಗಿ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಶೀಘ್ರ ವಿದ್ಯುತ್ ಸಂಪರ್ಕದ ಕೆಲಸ ಪೂರ್ಣಗೊಳ್ಳಲಿದೆ. ವಿದ್ಯುತ್ ಸಂಪರ್ಕದ ಕೆಲಸ ಪೂರ್ಣಗೊಂಡ ಕೂಡಲೇ ಕಟ್ಟಡ ನಮ್ಮ ಸುಪರ್ದಿಗೆ ಬರಲಿದೆ. ಮುಂದಿನ ತಿಂಗಳ (ಜೂನ್) ಪ್ರಥಮ ವಾರದಲ್ಲಿ ಸಂಬಂಧಪಟ್ಟ ಕಚೇರಿಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಸಾರ್ವಜನಿಕರಿಗೆ ಸೇವೆ ನೀಡಲಿದೆ.
-ರಮೇಶ್ ಬಾಬು, ತಹಶೀಲ್ದಾರರು, ಕಡಬ ತಾಲೂಕು
Related Articles
Advertisement