ಕಾಬೂಲ್: ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನ ಪಶ್ಚಿಮ ಭಾಗದ ಬರ್ಚಿ ಎಂಬಲ್ಲಿನ ಹೆರಿಗೆ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಎರಡು ನವಜಾತ ಶಿಶು ಸೇರಿದಂತೆ ಒಟ್ಟಾರೆ 14 ಮಂದಿ ಸಾವಿಗೀಡಾಗಿದ್ದಾರೆ. ಮೂವರು ಉಗ್ರರ ಒಳಗೊಂಡ ತಂಡ ಪೊಲೀಸ್ ಸಮವಸ್ತ್ರ ಧರಿಸಿ ಆಸ್ಪತ್ರೆಯೊಳಗೆ ನುಗ್ಗಿ ದಾಳಿ ನಡೆಸಿದೆ. ಆಸ್ಪತ್ರೆ ಒಳಗಿದ್ದ 80ಕ್ಕೂ ಹೆಚ್ಚು ಮಹಿಳೆಯರ ಹಾಗೂ ಪುಟ್ಟ ಮಕ್ಕಳನ್ನು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ. ಪೂರ್ವ ನಂಗಾರ್ಹರ್ ಪ್ರಾಂತ್ಯದಲ್ಲಿ ಆತ್ಮಾಹುತಿ ದಾಳಿ ನಡೆಸಿರುವ ಉಗ್ರರು 21 ಜನರನ್ನು ಕೊಂದಿದ್ದಾರೆ, ಘಟನೆಯಲ್ಲಿ 55 ಮಂದಿ ಗಾಯಗೊಂಡಿದ್ದಾರೆ. ಪೂರ್ವ ಖೋಸ್ಟ್ ಪ್ರಾಂತ್ಯದ ಮಾರ್ಕೆಟ್‌ನಲ್ಲಿ ನಡೆದ ಮತ್ತೂಂದು ಬಾಂಬ್ ದಾಳಿಯಲ್ಲಿ ಓರ್ವ ಬಾಲಕ ಮೃತನಾಗಿದ್ದು 10 ಮಂದಿ ಗಾಯ ಗೊಂಡಿದ್ದಾರೆ ಎಂದು ವರದಿಯಾಗಿದೆ.