ಮುಂಬಯಿ:ಭಾರತವನ್ನು ನೂರಾರು ವರ್ಷಗಳ ಕಾಲ ಆಳಿದ್ದ ಮೊಘಲರನ್ನು ದುಷ್ಟರಂತೆ ಬಿಂಬಿಸಿರುವ ಸಿನಿಮಾಗಳನ್ನು ವೀಕ್ಷಿಸಲು ತುಂಬಾ ಗೊಂದಲಕಾರಿಯಾಗುತ್ತದೆ. ಯಾಕೆಂದರೆ ಕೇವಲ ಜನಪ್ರಿಯತೆಗಾಗಿ ಸಿನಿಮಾ ಕಥೆಯನ್ನು ಹೆಣೆದಿರುತ್ತಾರೆಯೇ ಹೊರತು, ಐತಿಹಾಸಿಕ ಪುರಾವೆಗಳನ್ನು ಆಧರಿಸಿದ ಸಿನಿಮಾ ಕಥೆ ಆಗಿರುವುದಿಲ್ಲ ಎಂದು ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಮೀದ್ ಕರ್ಜೈ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ಹಿಡಿತ.!? : ಪೆಂಟಗನ್ ಹೇಳಿದ್ದೇನು..?
ಬಜರಂಗಿ ಭಾಯಿಜಾನ್, ಏಕ್ ಥಾ ಟೈಗರ್ ಸಿನಿಮಾ ನಿರ್ದೇಶಕ ಕಬೀರ್ ಖಾನ್ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ, ಮೊಘಲರನ್ನು ಕೆಟ್ಟದಾಗಿ ಬಿಂಬಿಸಿರುವ ಸಿನಿಮಾಗಳನ್ನು ನಾನು ಯಾವತ್ತೂ ಗೌರವಿಸುವುದಿಲ್ಲ. ಯಾಕೆಂದರೆ ಮೊಘಲರೇ ನಿಜವಾಗಿ ಈ ದೇಶವನ್ನು ಕಟ್ಟಿದ್ದು ಎಂಬುದಾಗಿ ವಿಶ್ಲೇಷಿಸಿದ್ದಾರೆ.
ಕೆಟ್ಟ ರಾಜಕೀಯದಿಂದಾಗಿ ಯಾವುದೇ ಸಿನಿಮಾವನ್ನು ನಿರ್ಮಿಸಿದರೂ ಕೂಡಾ ನನ್ನಲ್ಲಿ ಆಕ್ರೋಶ ಹುಟ್ಟಿಸುತ್ತದೆ. ಬಹುತೇಕ ಜನರು ಕೆಲವೊಮ್ಮೆ ತಪ್ಪಾಗಿ ತಿಳಿದುಕೊಂಡಿರುತ್ತಾರೆ. ರಾಜಕೀಯ ಅಂದ ಕೂಡಲೇ ಅದೊಂದು ರಾಜಕೀಯ ಪಕ್ಷವಲ್ಲ. ರಾಜಕೀಯದ ಮೂಲಕ ನಾವು ಈ ಜಗತ್ತನ್ನು ನೋಡುವ ಒಂದು ಮಾರ್ಗವಾಗಿದೆ ಎಂದು ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸಿನಿಮಾದಲ್ಲಿ ಮೊಘಲರನ್ನು ಚಿತ್ರಿಸಿರುವ ಬಗ್ಗೆ ಹಾಗೂ ಹೇಗೆ ತಮ್ಮ ಮೂಗಿನ ನೇರಕ್ಕೆ ಕಥೆಯನ್ನು ಸಿದ್ದಪಡಿಸುತ್ತಿದ್ದಾರೆ ಎಂಬ ಕುರಿತು ಮಾತನಾಡಿರುವ ಖಾನ್, ಕೇವಲ ಜನಪ್ರಿಯತೆಯ ನಿರೂಪಣೆಯೊಂದಿಗೆ ಸಿನಿಮಾವನ್ನು ನಿರ್ಮಿಸುತ್ತಿರುವುದು ನನ್ನನ್ನು ಅಸಮಾಧಾನಗೊಳಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಸಿನಿಮಾ ನಿರ್ಮಾಪಕರು ಚಿತ್ರ ನಿರ್ಮಿಸುವ ಮೊದಲು ಕಥೆಯ ಬಗ್ಗೆ ಸಂಶೋಧನೆ ನಡೆಸಬೇಕು. ಒಂದು ವೇಳೆ ನಿಮಗೆ ಮೊಘಲರನ್ನು ದುಷ್ಟರಂತೆ ತೋರಿಸಬೇಕಿದ್ದರೂ ಕೂಡಾ ದಯವಿಟ್ಟು ಇತಿಹಾಸದ ಬಗ್ಗೆ ಅಧ್ಯಯನ ನಡೆಸಿ, ಯಾಕೆ ಅನಗತ್ಯವಾಗಿ ಮೊಘಲರನ್ನು ವಿಲನ್ ಗಳಂತೆ ಬಿಂಬಿಸುತ್ತೀರಿ ಎಂದು ಖಾನ್ ಪ್ರಶ್ನಿಸಿದ್ದಾರೆ.