ಪುತ್ತೂರು: ಭಾರತ ಕಬಡ್ಡಿ ತಂಡದ ಸೀನಿಯರ್ ವಿಭಾಗದ ಸಂಭಾವ್ಯ ಆಟಗಾರರ ಯಾದಿಯಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಏಕೈಕ ಕಬಡ್ಡಿಪಟು ಸುಳ್ಯದ ಸಚಿನ್ ಪ್ರತಾಪ್ ಅವರಿಗೆ ತರಬೇತಿ ಶಿಬಿರಕ್ಕೆ ಆಹ್ವಾನ ನೀಡದೆ ತಡೆ ಒಡ್ಡಿರುವ ವಿಚಾರದ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ದೆಹಲಿ ಮಟ್ಟದಲ್ಲಿ ಕಬಡ್ಡಿ ಅಸೋಸಿಯೇಶನ್ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್ ಪ್ರತಾಪ್ ಅವರನ್ನು ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ, ಕಬಡ್ಡಿ ಆಟಗಾರ ಸಚಿನ್ ಪ್ರತಾಪ್ ಮೊದಲಾದವರ ತಂಡ ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಸಚಿವ ಡಿವಿಎಸ್ ಅವರನ್ನು ಭೇಟಿ ಮಾಡಿ ವಿಚಾರ ಗಮನಕ್ಕೆ ತಂದರು. ದೆಹಲಿಯಲ್ಲಿರುವ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವ ಬಗ್ಗೆ ಈ ಸಂದರ್ಭ ಸಚಿವರು ಭರವಸೆ ನೀಡಿದ್ದಾರೆ.
ತರಬೇತಿಗೆ ಪಾಲ್ಗೊಳ್ಳಲು ದೆಹಲಿಯಲ್ಲಿರುವ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪ್ರತಾಪ್ ಅವರ ಹೆಸರು ಕೈ ಬಿಡಲಾಗಿತ್ತು. ಉಳಿದ ಎಲ್ಲ ರಾಜ್ಯಗಳಿಂದ ಆಯ್ಕೆಗೊಂಡ 27 ಆಟಗಾರರ ಹೆಸರು ಇದೆ. ಈ ಬಗ್ಗೆ ಅಸೋಶಿಯೇಷನ್ ಬಳಿ ವಿಚಾರಿಸಿದರೆ ಆಯ್ಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂಬ ಉತ್ತರ ಬಂದಿತ್ತು. ಈ ಬಗ್ಗೆ ಸೆ.25 ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ಈಗಾಗಲೇ ಸಚಿವ ಸಿ.ಟಿ.ರವಿ, ಶಾಸಕ ಹರೀಶ್ ಪೂಂಜ ಅವರು ಕೂಡ ಕ್ರೀಡಾಪಟುವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.
ರಾಷ್ಟ್ರೀಯ ಸಂಭ್ಯಾವ ತಂಡದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ಏಕೈಕ ಆಟಗಾರನಾಗಿ ಆಯ್ಕೆಯಾಗಿದ್ದೆ. ಮೊದಲ ಹಂತದಲ್ಲಿ ಆನ್‌ಲೈನ್ ಮೂಲಕ ತರಬೇತಿ ಹಾಗೂ ಎರಡನೇ ಹಂತದಲ್ಲಿ ಶಿಬಿರದ ತರಬೇತಿ ನಿಗದಿ ಆಗಿತ್ತು. ಆನ್‌ಲೈನ್ ತರಬೇತಿಯು ಮುಗಿದಿದೆ. ಆದರೆ ನನಗೆ ತರಬೇತಿಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಆಯ್ಕೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎನ್ನುವ ಉತ್ತರವಷ್ಟೇ ಬಂದಿದೆ. ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ..
– ಸಚಿನ್ ಪ್ರತಾಪ್, ಕಬಡ್ಡಿ ಆಟಗಾರ