ಶಿವಮೊಗ್ಗ: ಶಿವಮೊಗ್ಗ ಬಿಜೆಪಿಯ ಶಕ್ತಿ ಕೇಂದ್ರ. ಏಳರಲ್ಲಿ ಆರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಘಟಾನುಘಟಿ ನಾಯಕರೇ ಇದ್ದಾಗಲೂ ಭದ್ರಾವತಿ ಕ್ಷೇತ್ರವನ್ನು ಈವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ವ್ಯಕ್ತಿ ಕೇಂದ್ರಿತ ರಾಜಕೀಯ ವ್ಯವಸ್ಥೆ. 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಬ್ಬರು ಧ್ರುವಗಳಿಂತಿದ್ದ ದಿ| ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಹಾಗೂ ಬಿ.ಕೆ. ಸಂಗಮೇಶ್ವರ್ ಅವರೇ ಗೆಲುವು ಸಾ ಧಿಸಿರುವುದು ವಿಶೇಷ. ಕಬಡ್ಡಿ ಘಟನೆ ಮೂಲಕ ಬಿಜೆಪಿ ನೆಲೆಯೂರಲು ಹವಣಿಸುತ್ತಿದೆ. ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಕಣವಾಗಿದೆ.
12 ದಿನಗಳ ಹಿಂದೆ ನಡೆದ ಕಬಡ್ಡಿ ಪಂದ್ಯಾವಳಿ ಗಲಾಟೆ ಈಗ ರಾಜಕೀಯ ತಿರುವು ಪಡೆದಿದ್ದು ರಾಜ್ಯದ ಗಮನ ಸೆಳೆದಿದೆ. ಶಾಸಕ ಬಿ.ಕೆ. ಸಂಗಮೇಶ್ ಹಾಗೂ ಮಕ್ಕಳ ಮೇಲೆ ಅಟ್ರಾಸಿಟಿ, ಕೊಲೆ ಯತ್ನ ದೂರು ದಾಖಲಾಗಿದ್ದು ಈ ವಿಚಾರ ಸದನದಲ್ಲೂ ಪ್ರಸ್ತಾಪ ಆಗಿ ಅಂತಿಮವಾಗಿ ಸಂಗಮೇಶ್ ಅವರನ್ನು ಸದನದಿಂದ ಹೊರಹಾಕಲಾಗಿದೆ. ಇದೇ ಘಟನೆ ಹಿಡಿದು ಈಗ ಕಾಂಗ್ರೆಸ್ ಶಿವಮೊಗ್ಗದಲ್ಲಿ ಬೃಹತ್ ಜನಾಕ್ರೋಶ ಸಮಾವೇಶ ಏರ್ಪಡಿಸಿದ್ದು ರಾಜ್ಯದ ಎಲ್ಲ ನಾಯಕರು ಭಾಗವಹಿಸುತ್ತಿದ್ದು, ಸಿಎಂ ತವರಲ್ಲೇ ಸರಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ.
ಹಿಂದುತ್ವ ಪ್ರತಿಪಾದಕರೇ: ಹಾಗೆ ನೋಡಿದರೆ ಬಿ.ಕೆ. ಸಂಗಮೇಶ್ ಹಾಗೂ ಎಂ.ಜೆ.ಅಪ್ಪಾಜಿ ಹಿಂದೂ ಧರ್ಮ ವಿರೋ ಧಿಗಳಲ್ಲ. ಪ್ರತಿ ವರ್ಷದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರೂ ಭಾಗವಹಿಸುತ್ತಿದ್ದು ಬಿಜೆಪಿಗೆ ಇಲ್ಲಿ ಬೇರೂರಲು ಅವಕಾಶ ಸಿಗದಂತಾಗಿತ್ತು. ಹೀಗಾಗಿ ಬಿಜೆಪಿ ಪ್ರತಿ ಚುನಾವಣೆಯಲ್ಲೂ ಠೇವಣಿ ಪಡೆಯಲು ಹೆಣಗಾಡಬೇಕಿತ್ತು. ಎಂ.ಜೆ.ಅಪ್ಪಾಜಿ ನಿಧನದ ನಂತರ ಬಿಜೆಪಿ ಈಗ ಬೇರೂರುವ ತವಕದಲ್ಲಿದೆ. ಭದ್ರಾವತಿಯಲ್ಲಿ ಗಲಾಟೆಗಳು ಹೊಸದೇನಲ್ಲ. ಆದರೆ ಇದೇ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಖುದ್ದು ಶಾಸಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ರಾಜ್ಯ ವ್ಯಾಪಿ ಸದ್ದು ಮಾಡಿದೆ.
ನೇರ ಅಖಾಡಕ್ಕೆ: ಈವರೆಗ ಸಂಗಮೇಶ್ ಹಾಗೂ ಅಪ್ಪಾಜಿ ವಿರುದ್ಧ ಪ್ರಬಲ ಸ್ಪ ರ್ಧಿ ಹಾಕದೆ ಇದ್ದ ಬಿಜೆಪಿ ಹೊಂದಾಣಿಕೆ ರಾಜಕಾರಣ ನಡೆಸಿತ್ತು. ಲೋಕಸಭೆ ಚುನಾವಣೆ ವೇಳೆ ಹಾಲಿ ಮತ್ತು ಮಾಜಿ ಶಾಸಕರ ಜತೆ ಹೊಂದಾಣಿಕೆ ಮಾಡಿಕೊಂಡು ಹೆಚ್ಚು ಮತ ಪಡೆಯುತ್ತಿದ್ದದು ಗುಟ್ಟಾಗಿ ಉಳಿದಿಲ್ಲ. ಇದೇ ಮೊದಲ ಬಾರಿಗೆ ಸಂಗಮೇಶ್ ವಿರುದ್ಧ ಬಿಜೆಪಿ ತೊಡೆ ತಟ್ಟಿದೆ. ಪಂಚಾಯ್ತಿ ರಾಜಕಾರಣಕ್ಕೆ ಹೆಸರುವಾಸಿಯಾದ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ರಾಜಕಾರಣ ಫಲ ನೀಡುವುದೇ ಕಾಲವೇ ಹೇಳಬೇಕಿದೆ.
ಶರತ್ ಭದ್ರಾವತಿ