ಜಶ್‌ಪುರ: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಪಂದ್ಯದ ವೇಳೆ ಗಂಭೀರ ಗಾಯಗೊಂಡಿದ್ದ 28ರ ಹರೆಯದ ಕಬಡ್ಡಿ ಆಟಗಾರ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಕಳೆದೊಂದು ತಿಂಗಳಲ್ಲಿ ರಾಜ್ಯ ಸರಕಾರದ ಆಶ್ರಯದಲ್ಲಿ ಛತ್ತೀಸ್‌ಗಢ ಒಲಿಂಪಿಕ್ಸ್‌ನ ಅಂಗವಾಗಿ ನಡೆದ ಕಬಡ್ಡಿ ಪಂದ್ಯಗಳ ವೇಳೆ ಆಟಗಾರರು ಮೃತಪಟ್ಟ ಮೂರನೇ ನಿದರ್ಶನವಾಗಿದೆ. ಅ. 17ರಂದು ಜಶ್‌ಪುರದ ಸಂಧ್ರು ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯದ ವೇಳೆ ಸಮರು ಕರ್ಕೆಟ್ಟ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
ಬೆನ್ನುಹುರಿಗೆ ಗಂಭೀರ ಗಾಯಗೊಂಡ ಕರ್ಕೆಟ್ಟ ಅವರನ್ನು ತತ್‌ಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿನ ವೈದ್ಯರ ಸೂಚನೆಯಂತೆ ರಾಯಗಢದ ಜಿಂದಾಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಒಂದು ತಿಂಗಳ ಚಿಕಿತ್ಸೆಯ ಅನಂತರ ಬುಧವಾರ ಅವರು ಮೃತಪಟ್ಟರು ಎಂದು ಜಶ್‌ಪುರ ಜಿಲ್ಲಾಧಿಕಾರಿ ರವಿ ಮಿಟ್ಟಲ್ ಹೇಳಿದ್ದಾರೆ.
ಛತ್ತೀಸ್‌ಗಢ ಒಲಿಂಪಿಕ್ಸ್‌ನ ಅಂಗವಾಗಿ ಕೊಂಡಗಾನ್ ಜಿಲ್ಲೆಯಲ್ಲಿ ಅ. 15ರಂದು ನಡೆದ ಕಬಡ್ಡಿ ಪಂದ್ಯದ ವೇಳೆ ಮಹಿಳಾ ಆಟಗಾರ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇನ್ನೊಂದು ಘಟನೆಯಲ್ಲಿ ರಾಯ್‌ಗಢ ಜಿಲ್ಲೆಯಲ್ಲಿ ನಡೆದ ಪಂದ್ಯದ ವೇಳೆ ಗಂಭೀರ ಗಾಯಗೊಂಡಿದ್ದ 32ರ ಹರೆಯದ ವ್ಯಕ್ತಿಯೊಬ್ಬರು ಅ. 11ರಂದು ಮೃತಪಟ್ಟಿದ್ದರು.
ಸ್ಥಳೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು 22ರ ಅ. 6ರಿಂದ 2023ರ ಜ. 6ರ ವರೆಗೆ ಛತ್ತೀಸ್‌ಗಢ ಒಲಿಂಪಿಕ್ಸ್ ಕೂಟವನ್ನು ಆಯೋಜಿಸುತ್ತಿದೆ. ಗ್ರಾಮ ಪಂಚಾಯತ್, ಅಭಿವೃದ್ಧಿ ಬ್ಲಾಕ್, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕಬಡ್ಡಿ ಅಲ್ಲದೇ ಖೋ-ಖೋ, ಕ್ರಿಕೆಟ್, ವಾಲಿಬಾಲ್, ಹಾಕಿ ಅಲ್ಲದೇ ಗ್ರಾಮೀಣ ಕ್ರೀಡೆಯಾದ ಪಿಟ್ಟುಲ್ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಇಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ವಯೋಮಿತಿಯ ನಿರ್ಬಂಧವಿಲ್ಲ.