ಬೆಂಗಳೂರು: ಅಮಿತ್ ಶಾಗೆ ಆಪರೇಷನ್ ಕಮಲ ಮಾಡಲು ಹೋಗಿ ಎಚ್1 ಎನ್1 ಸೋಂಕು ತಗುಲಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ .ಹರಿಪ್ರಸಾದ್ ಅವರು ನೀಡಿದ್ದ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಗುರುವಾರ ಮೌರ್ಯ ಸರ್ಕಲ್‌ನಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುವ ವೇಳೆ ಹರಿಪ್ರಸಾದ್ ಅವರು ತೀವ್ರ ವಾಗ್ಧಾಳಿ ನಡೆಸಿದ್ದರು.
ಬಿಜೆಪಿ ರಫೇಲ್ ಡೀಲ್‌ನಲ್ಲಿ 30 ಸಾವಿರ ಕೋಟಿ ಹಣ ಹೊಡೆದಿದೆ. ಇದೇ ಹಣದ ಅಹಂಕಾರದಲ್ಲಿ ಸರಕಾರ ಬೀಳಿಸಲು ಮುಂದಾಗಿತ್ತು. ಲಕ್ಷ ಕೋಟಿ ಹಣ ಬಂದರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಹೋಗಿ ಶಾ ಗೆ ಹಂದಿ ಜ್ವರ ಬಂದಿದೆ. ಸಾಮಾನ್ಯ ಜ್ವರ ಅಲ್ಲ. ಮೈತ್ರಿ ಸರ್ಕಾರದ ಪತನಕ್ಕೆ ಯತ್ನಿಸಿದ್ದಕ್ಕೆ ವಾಂತಿ, ಬೇಧಿಯೂ ಶುರುವಾಗುತ್ತದೆ ಎಂದು ಕಿಡಿ ಕಾರಿದ್ದರು.
ಬಿಜೆಪಿಯ ನಾಯಕರು ಹರಿಪ್ರಸಾದ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೆ.ವಿಜಯವರ್ಗೀಯ ಮಾತನಾಡಿ , ಇದು ಅಮಾನವೀಯ ವರ್ತನೆ. ನಾನು ಕೇಳಲೆ ಸೋನಿಯಾ ಅವರಿಗೆ ಯಾವ ಸಮಸ್ಯೆ ಇದೆ ಎಂದು. ಅವರು ಅನಾರೋಗ್ಯಕ್ಕೀಡಾಗಿದ್ದಾರೆ, ನಮಗೆ ಹೇಳಿಲ್ಲ.ಈ ರೀತಿಯ ಹೇಳಿಕೆ ಒಳ್ಳೆಯದಲ್ಲ. ಯಾರೇ ಆಗಲಿ, ಇನ್ನೊಂದು ಸಿದ್ಧಾಂತಿಯೇ ಆಗಿದ್ದರೂ ಅವರ ಬಗ್ಗೆ ಕರುಣೆ ಇರಬೇಕು ಮತ್ತು ಅವರಿಗಾಗಿ ಪ್ರಾರ್ಥಿಸಬೇಕು. ನಾನು ಈ ರೀತಿಯ ಪದ ಬಳಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಏಮ್ಸ್ ಆಸ್ಪತ್ರೆಗೆ ನಿನ್ನೆ ಬುಧವಾರ ದಾಖಲಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆರೋಗ್ಯ ಸುಧಾರಿಸುತ್ತಿದ್ದು ಅವರು ಇನ್ನೊಂದು ದಿನ ಅಥವಾ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ಇಂದು ಗುರುವಾರ ತಿಳಿಸಿವೆ.