Advertisement
ನಿಸಾರ್ ಅಹಮದರು ಹೊಸದಾಗಿ ನಮ್ಮ ಕಾಲೇಜಿಗೆ ಭೂವಿಜ್ಞಾನದ ಅಧ್ಯಾಪಕರಾಗಿ ಬಂದಿದ್ದರು. ಅವರ ಹೆಸರು ಆಗ ದುರ್ಗದಲ್ಲೆಲ್ಲ ಮನೆಮಾತಾಗಿತ್ತು. ಅದ್ಭುತ ವಾಗ್ಮಿ ! ಒಳ್ಳೆಯ ಕವಿ! ಎಂದು ಸಾಹಿತ್ಯಾಸಕ್ತರು ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ಕಾಲವದು. ನಾನೂ, ಅವರು ಕವಿತೆ ಓದುವ ಸಭೆಗೆ ಹೋಗಿ ಅವರ ಮಾತು ಮತ್ತು ಕವಿತಾವಾಚನ ಕೇಳಿಸಿಕೊಳ್ಳುತ್ತಿದ್ದೆ ! ಅವರನ್ನು ಮಾತಾಡಿಸುವ ಧೈರ್ಯ ಇರಲಿಲ್ಲ. ಹಳ್ಳಿಯಿಂದ ಬಂದ ಹುಡುಗರಿಗೆ ಸಾಮಾನ್ಯವಾಗಿ ಇರುವ ಸಂಕೋಚ; ಹಿಂಜರಿಕೆ. ಕಾಲೇಜಿನ ಕಾರ್ಯಕ್ರಮದ ದಿನ ಬಂದೇಬಿಟ್ಟಿತು. ಸ್ಟೇಜ್ ಮೇಲೆ ಹೋಗಿ ಬಹುಮಾನ ಸ್ವೀಕರಿಸುವುದಕ್ಕೂ ನನಗೆ ಸಂಕೋಚ. ಗುಂಡಣ್ಣನವರು ನನ್ನ ಹೆಸರು ಹೇಳಿದಾಗ “ಹೋಗೋ ಹೋಗೋ’ ಎಂದು ಗೆಳೆಯರು ನನ್ನನ್ನು ವೇದಿಕೆಯತ್ತ ನೂಕಿದರು. ನಿಸಾರ್ ಅಹಮದ್ ಯಥಾಪ್ರಕಾರ ಸೂಟಾಂಬರಧಾರಿಯಾಗಿದ್ದರು! ನನ್ನ ಕೈ ಕುಲುಕಿ, “ಪದ್ಯ ಬರಿತಿಯೇನಪ್ಪಾ… ನಿನ್ನ ಪದ್ಯಗಳನ್ನು ನನಗೆ ತಂದು ತೋರಿಸು…’ ಎಂದರು.
.
.
ಪಿಯುಸಿ ಮುಗಿಸಿ ನಾನು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾಕ್ಕಾಗಿ ಭದ್ರಾವತಿಯ ಎಸ್. ಜೆ. ಪಾಲಿಟೆಕ್ನಿಕ್ ಸೇರಿದೆ. ನನ್ನ ಬದುಕಿನ ದಿಕ್ಕುದೆಸೆ ಬದಲಾಯಿತು. ಆದರೆ, ಕಾವ್ಯದ ಹುಚ್ಚು ಮಾತ್ರ ನನ್ನನ್ನು ಸಂಪೂರ್ಣ ಆವರಿಸಿತ್ತು. ನಿಸಾರರೊಂದಿಗೆ ಪತ್ರವ್ಯವಹಾರವೂ ಮುಂದುವರೆದಿತ್ತು. ಅವರು ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಯಾವುದೋ ಕೆಲಸಕ್ಕೆ ಶಿವಮೊಗ್ಗಕ್ಕೆ ಹೋಗಿದ್ದ ನಾನು ಹೇಗೋ ಪತ್ತೆ ಮಾಡಿ ಸಂಜೆ ಅವರ ಮನೆಗೆ ಹೋದೆ. ಒಂದು ಸಣ್ಣ ಬ್ರಹ್ಮಚಾರಿ ಮನೆಯಲ್ಲಿ ನಿಸಾರರ ವಾಸ್ತವ್ಯ. ಅವರ ಮನೆಯ ಪಕ್ಕದಲ್ಲಿ ದೊಡ್ಡ ವಾಟರ್ ಟ್ಯಾಂಕ್ ಇತ್ತು ಎಂಬುದಷ್ಟೇ ಈಗ ನೆನಪಿನಲ್ಲಿ ಉಳಿದಿದೆ. ನಿಸಾರ್ ತಾವೇ ಟೀಮಾಡಿ ಕೊಟ್ಟರು. “ಏನ್ರೀ ಹ್ಯಾಗಿದ್ದೀರಿ?’ ಎಂದು ಬಹುವಚನದಲ್ಲಿ ಮಾತಾಡಿಸಿದರು. “ಏನಪ್ಪಾ$ಮತ್ತೇನಾದರೂ ಬರೆದೆಯಾ?’ ಎಂದು ಏಕವಚನಕ್ಕೆ ಬಂದರು. “ಓಹೋ… ಪರವಾಗಿಲ್ಲಾ ಕಣ್ರೀ ಕವಿತೆಯ ಹುಚ್ಚು ಬಿಟ್ಟಿಲ್ಲ ನಿಮಗೆ’ ಎಂದು ಮತ್ತೆ ಬಹುವಚನ. ಈಗಲೂ ಹಾಗೆ. ನಿಸಾರ್ ಯಾವಾಗ ಏಕವಚನ ಬಳಸುತ್ತಾರೆ, ಯಾವಾಗ ಬಹುವಚನ ಬಳಸುತ್ತಾರೆ ಹೇಳಲಿಕ್ಕೇ ಬರುವುದಿಲ್ಲ.
Related Articles
.
.
ನಾನು ಮಲ್ಲಾಡಿಹಳ್ಳಿಯಲ್ಲಿದ್ದಾಗ ಕೆಲವು ಪದ್ಯಗಳನ್ನು ಹಿಡಿದುಕೊಂಡು ಅವನ್ನು ಅಚ್ಚು ಮಾಡಿಸಬೇಕೆಂದು ಬೆಂಗಳೂರಿಗೆ ಹೋದೆ. ಈಶ್ವರಚಂದ್ರ ನಾನು ಬಾಲ್ಯದ ಗೆಳೆಯರು. ಪುಸ್ತಕ ಯಾವ ಪ್ರಸ್ಸಿಗೆ ಕೊಡುವುದೆಂದು ಇಬ್ಬರೂ ಚರ್ಚಿಸಿದೆವು. ನಿಸಾರರ ಮನಸು ಗಾಂಧಿಬಜಾರ್ ನನಗೆ ತುಂಬ ಪ್ರಿಯವಾದ ಪುಸ್ತಕ. ಅದರಂತೆಯೇ ಅಚ್ಚಾಗಬೇಕೆಂಬ ನನ್ನ ಆಸೆಯನ್ನು ಗೆಳೆಯನಿಗೆ ಹೇಳಿದೆ. ಅದು ಅಚ್ಚಾಗಿದ್ದು ಅವಿನ್ಯೂ ರೋಡಿನ ಯಾವುದೋ ಪ್ರಸ್‌ನಲ್ಲಿ. ಅದನ್ನು ಹುಡುಕಿಕೊಂಡು ಇಬ್ಬರೂ ಅಲೆದೂ ಅಲೆದೂ ಕೊನೆಗೆ ಸಣ್ಣ ಅಂಗಡಿಯ ಮಳಿಗೆಯಂತಿದ್ದ ಆ ಮುದ್ರಣಾಲಯವನ್ನು ಪತ್ತೆ ಹಚ್ಚಿದೆವು. ಆರುನೂರು ರೂಪಾಯಿ-ಒಂದು ಸಾವಿರ ಪ್ರತಿಗೆ. ಪ್ರಸ್ಸಿಗೆ ಹಣಕೊಟ್ಟು ನಾನು ಊರಿಗೆ ಹಿಂದಿರುಗಿದೆ. ಈಶ್ವರಚಂದ್ರನ ಮೇಲ್ವಿಚಾರಣೆಯಲ್ಲಿ ಪುಸ್ತಕ ಸಿದ್ಧವಾಯಿತು. ಮುಖಚಿತ್ರವನ್ನೂ ಅವನೇ ಬರೆದಿದ್ದ. ರೈಲ್ವೇ ಮೂಲಕ ಒಂದು ಸಾವಿರ ಪ್ರತಿಗಳ ಬಂಡಲ್ ಹೊಳಲಕೆರೆ ರೈಲ್ವೇಸ್ಟೇಷನ್ನಿಗೆ ಬಂದೇ ಬಿಟ್ಟಿತು. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಷಡಕ್ಷರಪ್ಪಎಂಬ ಗೆಳೆಯರನ್ನು ಸ್ಟೇಷನ್‌ಗೆ ಕಳಿಸಿ ಬಂಡಲ್ ತರಿಸಿಕೊಂಡೆ. ಬಂಡಲ್ ಬಿಚ್ಚಿ ನೋಡಿ ರೋಮಾಂಚಿತನಾದೆ. ಹೊಸ ಪುಸ್ತಕದ ಗಂಧ ಮತ್ತೇರಿಸುವಂತಿತ್ತು. ಅಲ್ಲಿ ಇಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪುಸ್ತಕವನ್ನು ಇಟ್ಟು ನೋಡಿ ನೋಡಿ ಸಂತೋಷಪಟ್ಟೆ. ನಿಸಾರರಿಗೆ ಮಾರನೆಯ ದಿವಸವೇ ಒಂದು ಗೌರವ ಪ್ರತಿ ಕಳಿಸಿಕೊಟ್ಟೆ. ಒಂದೇ ವಾರದಲ್ಲಿ ಕವಿಗಳ ಉತ್ತರ ಬಂತು. “ಸಹಜ ಕವಿ ಮಾತ್ರ ಇಂಥ ಸಾಲುಗಳನ್ನು ಬರೆಯಲು ಸಾಧ್ಯ’ ಎಂದು ಬಾಯ್ತುಂಬ ಪ್ರಶಂಸಿಸಿದ್ದರು.
Advertisement
ಇದು ಸರಿಯಾಗಿ ಐವತ್ತು ವರ್ಷಗಳ ಹಿಂದಿನ ಮಾತು. ನಿಸಾರ್ ಅಹಮದರಿಗೆ ಈವತ್ತೂ ನನ್ನ ಬಗ್ಗೆ ಅದೇ ಅಭಿಮಾನ. ಅವರಿಗೆ ಎಲ್ಲೇ ಸನ್ಮಾನವಾದರೂ ನಾನು ಅವರ ಬಗ್ಗೆ ಮಾತಾಡಬೇಕು. ಮೈಸೂರಿಗೆ ನಾನೂ ನರಹಳ್ಳಿ ಬಾಲಸುಬ್ರಹ್ಮಣ್ಯರೂ ಹೋಗಿ ನಿಸಾರ್ ಅಹಮದರ ಸನ್ಮಾನ ಸಂದರ್ಭದಲ್ಲಿ ಮಾತಾಡಿದ್ದು ಇತ್ತೀಚೆಗೆ! ಸನ್ಮಾನ ಕಾರ್ಯಕ್ರಮ ಆದ ಮೇಲೆ ಸುತ್ತೂರಿಗೆ ನಮ್ಮ ಪ್ರಯಾಣ. ರಾತ್ರಿ ಮಠದಲ್ಲಿ ಪ್ರಸಾದ ಸ್ವೀಕಾರ. ಸುತ್ತೂರಿಂದ ಬಂದ ಮೇಲೆ ನಿಸಾರ್ ನನಗೆ ಫೋನ್ ಮಾಡಿದರು. “ಸುತ್ತೂರಲ್ಲಿ ಹುರುಳೀ ಕಟ್ಟು ಅದೆಷ್ಟು ಅದ್ಭುತವಾಗಿತ್ತು. ಮೈಸೂರಲ್ಲಿ ನೀವಿಬ್ಬರೂ ನನ್ನ ಬಗ್ಗೆ ಮಾತಾಡಿದ್ದು ಅದೆಷ್ಟು ಸೊಗಸಾಗಿತ್ತು’ ಎಂದು ಹೃದಯಬಿಚ್ಚಿ ಮಾತಾಡಿದರು.
ಪುತಿನ ಟ್ರಸ್ಟಿನಿಂದ ಕಳೆದ ವರ್ಷ ನಿಸಾರ್ ಅಹಮದರಿಗೆ ಜೀವಮಾನ ಸಾಧನೆಗಾಗಿ ಪುತಿನ ಪುರಸ್ಕಾರ ದೊರೆತಾಗ ಪುತಿನ ಅವರನ್ನು , ಅವರ ಹಿರಿಮೆಯನ್ನು ಎದೆತುಂಬ ಹೊಗಳಿ ಭಾವುಕರಾದರು. ಅವರ ಕಣ್ಣಲ್ಲಿ ಕಂಬನಿ ತುಂಬಿಕೊಂಡಿತ್ತು. ಕಾರ್ಯಕ್ರಮ ಮುಗಿದ ಮೇಲೆ ಒಟ್ಟಿಗೇ “ಊಟ ಮಾಡೋಣ ಬನ್ನಿ’ ಎಂದೆ. “ನನ್ನೊಂದಿಗೆ ನನ್ನ ಸ್ನೇಹಿತರೂ ಇದ್ದಾರೆ’ ಎಂದು ಹಿಂಜರಿದರು. “ಸರ್, ಇದು ಟ್ರಸ್ಟ್ ನೀಡುವ ಔತಣವಲ್ಲ. ನಿಮ್ಮ ಮೂರ್ತಿ ನೀಡುವ ಔತಣ’ ಎಂದೆ. “ಪುರಸ್ಕಾರದಷ್ಟೇ ನಿನ್ನ ಈ ಅಭಿಮಾನವೂ ನನಗೆ ಮಹತ್ವದ್ದಪ್ಪ!’ ಎಂದು ನಿಸಾರ್ ಮತ್ತೆ ಹನಿಗಣ್ಣಾದರು. ಮಗುವಿನ ಮುಗ್ಧತೆ, ಮಗುವಿನ ಹಠಮಾರಿತನ, ಮಗುವಿನ ಚೇಷ್ಟೆ, ಮಗುವಿನ ಮನಸುಖರಾಯತ್ವ! ನಿಸಾರ್ ಅಹಮದರು ಹೇಳಿದರು: “ನೀನು ಎಲ್ಲಿ ಕೇಳಿದರೆ ಅಲ್ಲಿ ನಿನಗೆ ಊಟಹಾಕಿಸುತ್ತೇನೆ.
ನಿನ್ನ ಜೊತೆಗೆ ಆ ಲಕ್ಷ್ಮಣನಿಗೂ’ ಎನ್ನುತ್ತ ನಿಸಾರಹಮದ್ ತೆರೆದಾಹ್ವಾನ ನೀಡಿದರು. ಇಂಥ ಔತಣ ಎಷ್ಟೋ ಬಾರಿ ಅವರಿಂದ ನಮಗೆ ಸಿಕ್ಕಿದೆ. ಇದು ಅಂಥದೇ ಮತ್ತೂಂದು ಆಹ್ವಾನ! ಸಹನೋ ಭವತು, ಸಹನೌ ಭುನಕು¤ ಎಂಬ ಮಾತನ್ನೀಗ ನನ್ನೊಳಗೆ ನಾನೇ ಗುನುಗುನಿಸಿದೆ..
.
ಈಗ ನಿಸಾರ್ ಅಹಮದರ ಆರೋಗ್ಯ ಮೊದಲಿನಷ್ಟು ಚೆನ್ನಾಗಿಲ್ಲ. ಆದರೂ ನಾನು ಆಹ್ವಾನಿಸಿದ ನನ್ನ ಯಾವ ಕಾರ್ಯಕ್ರಮಕ್ಕೂ ಬರಲಾರೆ ಎಂದು ಅವರು ಹೇಳಿಲ್ಲ. ಮೊದಲು ಸ್ವಲ್ಪ ನುಸುನುಸು ಮಾಡುತ್ತಾರೆ. ಕೊನೆಗೆ ನೀನು ಕರೆದಾಗ ಹ್ಯಾಗೆ ಬರೋದಿಲ್ಲ ಅನ್ನಲಿ. ಬರ್ತೀನಿ. ನನ್ನ ಬೇಗ ಕಳಿಸಿಕೊಡಬೇಕು. ಸರಿಯಾ… ನಾನು ನಗುತ್ತೇನೆ! ನೀವು ಎಷ್ಟು ಬೇಗ ಭಾಷಣ ಮುಗಿಸುವಿರೋ ಅಷ್ಟು ಬೇಗ ನಿಮಗೆ ಬಿಡುಗಡೆ! ಸಭೆಯಲ್ಲಿ ನಿಸಾರರಿಗೆ ಪ್ರಿಯರಾದ ಎಷ್ಟೋ ಜನ ಇರುತ್ತಾರೆ. ಕಂಡಕಂಡವರ ಹೆಸರೆತ್ತಿ ಅವರ ಬಗ್ಗೆ ನಿಸಾರ್ ತಮ್ಮ ಅಭಿಮಾನದ ಮಾತು ಆಡೇ ಆಡುತ್ತಾರೆ. ಹಾಗಾಗಿ ಅವರ ಮಾತು ಬೇಗ ಮುಗಿಯತಕ್ಕದ್ದಲ್ಲ ಎಂದು ನನಗೆ ಗೊತ್ತು. ಅವರು ಹೆಸರು ಹೇಳಿ ಪ್ರಸ್ತಾಪಿಸಿದ ವ್ಯಕ್ತಿಯನ್ನು, “ಸ್ವಲ್ಪ$ಮೇಲೆದ್ದು ನಿಂತು ಸಭೆಗೆ ನಿಮ್ಮ ಮುಖ ತೋರಿಸಿರಿ’ ಎಂಬ ಪ್ರೀತಿಯ ತಾಕೀತು ಬೇರೆ! ಮೇಷ್ಟ್ರು ಈವತ್ತೂ ಹಾಜರಿ ತೆಗೆದುಕೊಳ್ಳೋದನ್ನು ಬಿಟ್ಟಿಲ್ಲ- ಎಂದು ನಾವು ಚೇಷ್ಟೆ ಮಾಡುತ್ತೇವೆ. ನಿಸಾರ್ ಇರೋದೇ ಹಾಗೆ. ಅವರಿಗೆ ಜನ ಬೇಕು. ಜನಕ್ಕೆ ನಿಸಾರಹಮದ್ ಬೇಕು. ಅವರು ಮಾತು ಮುಗಿಸಿದಾಗ ಎಲ್ಲರಿಗೂ ಸಮಾಧಾನ. ಅವರೊಂದಿಗೆ ಖಾಸಗಿ ಮಾತು-ಕಥೆಯಲ್ಲಿ ತೊಡಗುವುದು ಇನ್ನೂ ಸೊಗಸು. ಅವರಿಗೆ ದೇಶಕಾಲದ ಸಮೇತ ದಶಕಗಳ ಘಟನೆಗಳೆಲ್ಲ ನೆನಪಿನಲ್ಲಿರುತ್ತವೆ. ಬೋಧಿಯ ನಂತರ ಬುದ್ಧನಿಗೆ ಜನ್ಮಜನ್ಮಾಂತರದ ಸ್ಮರಣೆಗಳು ಸುರುಳಿಬಿಚ್ಚಿದ ಹಾಗೆ ಸುರುಳಿಬಿಚ್ಚುತ್ತವೆ. ಅವರ ಸ್ಮರಣೆ ಯಾವತ್ತೂ ಅವರಿಗೆ ಕೈಕೊಡುವುದಿಲ್ಲ. ರಸವತ್ತಾಗಿ ಪ್ರಸಂಗಗಳನ್ನು ಕಣ್ಮುಂದೇ ನಡೆದಂತೇ ವರ್ಣಿಸುತ್ತಾರೆ, ಆಯಾ ಪಾತ್ರಧಾರಿಗಳ ಆಂಗಿಕ ಮತ್ತು ಮಾತಿನ ಶೈಲಿಗಳ ಸಮೇತ. ಜೊತೆಗೆ ಮನಸ್ಸಿಗೆ ಚುಚ್ಚದ ತಿಳಿಯಾದ ಹಾಸ್ಯ. ತದ್ವತ್ತಾಗಿ ಮಾಸ್ತಿಯೇ ಅಡಿಗರೇ ನರಸಿಂಹಸ್ವಾಮಿಯವರೇ ಎದುರಿಗೆ ಬಂದು ಮಾತಾಡಿದಂಥ ಅನುಕರಣೆಯ ಅನುಸಂಧಾನ. “ಆಲ್ವೇಸ್ ಕೋಟ್ ನಿಸಾರ್ ಅಹಮದ್. ಅನ್ಕೋಟ್ ಇಲ್ಲವೇ ಇಲ್ಲ’ ಎಂದು ನಾನು ಆಗಾಗ ಸಲುಗೆಯಿಂದ ಅವರನ್ನು ಹಾಸ್ಯಮಾಡುವುದುಂಟು. ಅವರು ಇಂಥ ಹಾಸ್ಯವನ್ನು ತಾವೇ ಎಂಜಾಯ್ ಮಾಡಿ ಗಟ್ಟಿಯಾಗಿ ನಗುತ್ತಾರೆ.
ಎಷ್ಟೊಂದು ಮುಗಿಲು ಎಂಬ ಸಾನೆಟ್ ಸಂಗ್ರಹವನ್ನು ನೋಡಿ ನಿಸಾರ್ ನನಗೆ ಬರೆದ ಪತ್ರ ನನ್ನ ಬಹುದೊಡ್ಡ ಸಂಪಾದನೆ. ಉಯ್ನಾಲೆ, ಕೃತ್ತಿಕೆ, ಮಲಾರಗ ಳ ಸಾಲಿಗೆ ಎಷ್ಟೊಂದು ಮುಗಿಲು ನಿಲ್ಲುವ ಅರ್ಹತೆ ಗಳಿಸಿಕೊಂಡಿದೆ ಎಂಬ ಅವರ ಅಭಿಮಾನದ ಮಾತು ವಾಸ್ತವವೂ ಆಗಿ ಪರಿಣಮಿಸಲಿ ಎಂದು ಏಕಾಂತದಲ್ಲಿ ನಾನು ಮತ್ತೆ ಮತ್ತೆ ಹಲುಬಿದ್ದುಂಟು. ಅದೃಷ್ಟವೇ! ಅಸ್ತು ಎನ್ನುವ ಅದೃಶ್ಯ ದೇವತೆಗಳ ಕಿವಿಗೆ ಈ ಮಾತುಗಳು ಬೀಳಲಿ-ಎಂಬುದು ಯಾವತ್ತೂ ನನ್ನ ಮನದಾಳದ ಹಾರೈಕೆ. ಎಚ್. ಎಸ್. ವೆಂಕಟೇಶಮೂರ್ತ