Advertisement
“”ಮೂರ್ತಿಯವರೇ, ಮನೆಯಲ್ಲೇ ಇದ್ದೀರಾ?”
Related Articles
Advertisement
ಸಂಜೆ ಬನಶಂಕರಿಯಲ್ಲಿದ್ದ ಕೆ. ಎಸ್. ನರಸಿಂಹಸ್ವಾಮಿಯವರ ಮನೆಗೆ ಅವರ ಆಪ್ತ ಲೋಕ ಆಗಮಿಸುತ್ತಿತ್ತು. ಕವಿಗಳು; ಸಹೃದಯರು; ಅಭಿಮಾನಿಗಳು. ಆ ಗುಂಪಲ್ಲಿ ಅವರ ಕವಿತೆಯನ್ನು ಯೌವನದಿಂದ ಮೆಚ್ಚಿ ಆರಾಧಿಸುತ್ತಿದ್ದ ಒಬ್ಬ ರಿûಾ ಡ್ರೆ„ವರ್ ಸಹ ಇರುತ್ತಿದ್ದರು! ನಾನು-ಜಿಎಸ್‌ಎಸ್., ಕೆಎಸ್‌ನ ಮನೆಗೆ ಸಾಮಾನ್ಯವಾಗಿ ಒಟ್ಟಿಗೇ ಹೋಗುತ್ತಿದ್ದೆವು. ಸಣ್ಣ ವರಾಂಡ ದಾಟಿದರೆ ಒಂದು ಹಾಲು. ಅಲ್ಲೊಂದು ಒಂಟಿ ಮಂಚ. ಅದರ ಮೇಲೆ ಚಕ್ಕಳಂಬಕ್ಕಳ ಹಾಕಿ, ಬಿಳಿ ಜುಬ್ಟಾ , ಬಿಳಿ ಪಂಚೆಯಲ್ಲಿ, ಅಲೆಅಲೆ ಬಿಳಿಗೂದಲ ಕೆಎಸ್‌ನ ಕೂತಿರುತ್ತಿದ್ದರು. ಅವರಿಗೆ ವಯೋಧರ್ಮದಿಂದ ಕಣ್ಣು ಸ್ವಲ್ಪ$ ಸುಮಾರಾಗಿತ್ತು. “”ನೋಡು… ಯಾರೋ ಬಂದರು” ಎಂದು ಪತ್ನಿ ವೆಂಕಮ್ಮನವರಿಗೆ ಕೂಗುತ್ತಿದ್ದರು. ಅವತ್ತು ಕವಿಪತ್ನಿಯೂ ಭರ್ಜರಿ ಸೀರೆ ಉಟ್ಟುಕೊಂಡು, ಮುಡಿತುಂಬ ಮಲ್ಲಿಗೆ ಮುಡಿದು, ಹಣೆಯ ದುಂಡು ಕುಂಕುಮದೊಂದಿಗೆ ಅಡುಗೆ ಮನೆಯಿಂದ ಹೊರಬರುತ್ತ, “”ಓಹೋ ಶಿವರುದ್ರಪ್ಪನವರು, ವೆಂಕಟೇಶಮೂರ್ತಿ! ಬನ್ನಿ ಬನ್ನಿ… ಈಗಷ್ಟೇ ಶಿವಮೊಗ್ಗ ಸುಬ್ಬಣ್ಣ, ಲಕ್ಷಿ¾àನಾರಾಯಣ ಭಟ್ಟರು ಬಂದಿದ್ದರು” ಎಂದು ಗಟ್ಟಿಯಾಗಿ ಮಾತಾಡುತ್ತಿದ್ದರು. ಕೆಎಸ್‌ನ ನಿರ್ಭಾವುಕ ಮುಖದಲ್ಲೇ, “”ಬನ್ನಿ ಬನ್ನಿ….ನೀವು ಬಂದದ್ದು ಸಂತೋಷ!” ಎನ್ನುತ್ತಿದ್ದರು.
ನಾವು ಕೆಎಸ್‌ನ ಕಾಲು ಮಡಿಚಿ ಕೂತಿದ್ದ ಮಂಚದ ಪಕ್ಕದಲ್ಲಿದ್ದ ಕುರ್ಚಿಗಳ ಮೇಲೆ ಕೂತು ಕವಿಯ ಕೈ ಕುಲುಕಿ ಅಭಿನಂದಿಸುತ್ತ ಇದ್ದೆವು. ಜನವರಿ 26ರಂದು ಕೆಎಸ್‌ನ ದಂಪತಿಗಳು ಬನ್ನಿ ಅಂತ ಯಾರನ್ನೂ ಕೂಗುತ್ತಿರಲಿಲ್ಲ . ನಿಜ. ಆದರೆ, ಆವತ್ತು ತಪ್ಪದೆ ಅವರ ಮನೆಗೆ ಹೋಗಿ ಅವರನ್ನು ನೋಡಿಕೊಂಡು ಬರೋದು ನಮಗೆಲ್ಲ ಅಭ್ಯಾಸವಾಗಿಹೋಗಿತ್ತು. ವೆಂಕಮ್ಮನವರು ದೊಡ್ಡ ಪಾತ್ರೆಯಲ್ಲಿ ಉಪ್ಪಿಟ್ಟು ಮಾಡಿ ಬಂದ ಅತಿಥಿಗಳಿಗೆಲ್ಲ ಉಪಚಾರಮಾಡಿ ನೀಡುತ್ತ ಇದ್ದರು. ಉಪ್ಪಿಟ್ಟು ತಿನ್ನುತ್ತ ಕೆಎಸ್‌ನ ಅವರೊಂದಿಗೆ ಉಭಯಕುಶಲೋಪರಿ ನಡೆಯುತ್ತ¤ ಇತ್ತು. ನರಸಿಂಹಸ್ವಾಮಿ ಅವರದ್ದು ಮಾತು ಬಹಳ ಕಮ್ಮಿ. ಹೆಚ್ಚು ಮಾತು ಅವರ ಪತ್ನಿಯದ್ದೇ. “”ನೋಡಿ…ಬೆಳ್ಳಗೆ ಮಲ್ಲಿಗೆ ಹಾಗೆ ಜುಬ್ಬ ಒಗೆದು ಕೊಟ್ಟಿರುತ್ತೇನೆ. ಹಾಳು ನಶ್ಯ ಉದುರಿಸಿಕೊಂಡು ಜುಬ್ಬ ಕೊಳೆ ಮಾಡಿಕೊಳ್ಳುತ್ತಾರೆ” ಎಂದು ವೆಂಕಮ್ಮ ಆಕ್ಷೇಪಿಸುತ್ತಿದ್ದರು. ಅದಕ್ಕೆ ಕೆಎಸ್‌ನ ಪ್ರತಿಕ್ರಿಯಿಸುತ್ತಿರಲಿಲ್ಲ. ಅವರ ಪಕ್ಕದಲ್ಲೇ ಇರುತ್ತಿದ್ದ ನಶ್ಯಡಬ್ಬಿಯನ್ನು ನಾನು ಗಮನಿಸುತ್ತಿದ್ದೆ. ಅವರ ಬಲಗೈ ತುದಿ ಬೆರಳು ನಶ್ಯಾದಿಂದ ಕಪ್ಪಾಗಿರುತ್ತಿತ್ತು. ಹೆಬ್ಬೆರಳಿಂದ ತೋರುಬೆರಳನ್ನು ಉದ್ದಕ್ಕೂ ನೇವರಿಸುತ್ತ ಕೆಎಸ್‌ನ ಮೌನವಾಗಿ ಕೂತಿರುತ್ತಿದ್ದರು.
“”ಏನಪ್ಪಾ$ಮೂರ್ತಿ… ಹೋದ ವಾರ ಪರಿಷತ್ತಿನಲ್ಲಿ ನಡೆದ ಸಭೆಗೆ ನಿಮಗೂ ಆಹ್ವಾನವಿತ್ತೋ? ನಿಮಗೂ ಒಂದು ತಗಡು ಕೊಟ್ಟರು ತಾನೆ?” ಎಂದು ವೆಂಕಮ್ಮ ಅಲವತ್ತುಕೊಳ್ಳುತ್ತಿದ್ದರು. “”ಮನೆಯಲ್ಲಿ ಇವನ್ನೆಲ್ಲ ಇಡಲಿಕ್ಕೆ ಜಾಗವೇ ಇಲ್ಲವಪ್ಪಾ. ಅವನ್ನು ದಿನಾ ಒರೆಸಿ ಒರೆಸಿ ಇಡೋದರಲ್ಲಿ ನನ್ನ ಸೊಂಟ ಬಿದ್ದು ಹೋಗತ್ತೆ. ತಗಡಿನ ಬದಲು ದುಡ್ಡಾದರೂ ಕೊಟ್ಟರೆ ನಮಗೆ ತರಕಾರಿಗೋ ಮಾತ್ರೆಗೋ ಆಗತ್ತೆ ಅಲ್ಲವಾ?” ಎಂದು ವೆಂಕಮ್ಮ ಚಡಪಡಿಸುತ್ತ¤ ಇದ್ದರು!
ಅಷ್ಟರಲ್ಲಿ ಹೂವಿನ ಹಾರ ಸಮೇತ ಅಪರಚಿತರೊಬ್ಬರು ಬಂದರು. “”ಸ್ವಾಮೀ, ನಾನು ಬಿ.ಸಿ. ಗೌಡ. ಗಡ್ಡ ಹಣ್ಣಾಗಿದೆ ನನಗೆ. ಆದರೂ ಈವತ್ತೂ ನಾನು ನನ್ನ ಹೆಂಡತಿ ನಿಮ್ಮ ಮೈಸೂರುಮಲ್ಲಿಗೆ ಒಟ್ಟಿಗೇ ಓದುತ್ತೀವಿ” ಎನ್ನುತ್ತ ಕವಿಗಳಿಗೆ ಹಾರಹಾಕಿ ಕಾಲುಮುಟ್ಟಿ ನಮಸ್ಕಾರ ಮಾಡಿದರು!
“”ಕೂತ್ಕೊಳ್ಳಿ… ಉಪ್ಪಿಟ್ಟು ಕೊಡ್ತೀನಿ.”
“”ಇಲ್ಲ ತಾಯಿ. ಬೇರೆ ಏನೋ ಕೆಲಸ ಇದೆ”
“”ರಾಮ ರಾಮ… ಯಜಮಾನರ ಹುಟ್ಟುಹಬ್ಬದ ದಿನ ನಮ್ಮ ಮನೆಗೆ ಬಂದು ಬರೀ ಹೊಟ್ಟೆಯಲ್ಲಿ ನೀವು ಹೋಗೋದುಂಟೆ?” “”ಈಚೆಗೆ ಏನು ಬರೆದಿರಿ?” ಎಂದು ಜಿಎಸ್‌ಎಸ್ ಪ್ರಶ್ನಿಸುತ್ತಿದ್ದರು
“”ವೆಂಕಟೇಶಮೂರ್ತಿ ಅಂತ ನನ್ನ ಮಿತ್ರರು ಬರ್ತಾರೆ. ನಾನು ಹೇಳಿದ್ದು ಬರ್ಕೊಳ್ತಾರೆ. ನೆನ್ನೆ ರಾತ್ರಿ ಕೂಡ ಬಾಯಲ್ಲೇ ಹೇಳಿ ಒಂದು ಪದ್ಯ ಬರೆಸಿದೆ!”
“”ನೀವು ಪುಣ್ಯವಂತರು. ಸರಸ್ವತಿ ಇನ್ನೂ ನಿಮ್ಮ ಕೈಬಿಟ್ಟಿಲ್ಲ. ನನ್ನನ್ನು ನೋಡಿ… ನೀರು ನಿಂತ ಮೇಲೆ ನಲ್ಲಿಯಲ್ಲಿ ಜಿನುಗುವ ನೀರ ಹನಿಯಂತೆ ಯಾವಾಗಲೋ ಒಂದು ಕವನ ಜಿನುಗುತ್ತದೆ” ಎಂದು ಜಿ. ಎಸ್.ಎಸ್. ನಗುತ್ತಿದ್ದರು.
“”ಅಯ್ಯೋ… ಈವರೆಗೆ ನೀವು ಬರೆದದ್ದೇ ಬೇಕಾದಷ್ಟು ಇದೆಯಲ್ಲ! ಕವಿತೆ-ವಿಮರ್ಶೆ… ಬೇರೆ ಲೇಖಕರ ಬಗ್ಗೆ ನೀವು ತೋರಿಸೋ ಪ್ರೀತಿ ಸಾಮಾನ್ಯವೇ? ನನ್ನ ಬದುಕನ್ನ ಗಂಧದ ಕೊರಡಿಗೆ ಹೋಲಿಸಿದೋರು ನೀವು. ಎಂಥ ಅದ್ಭುತ ರೂಪಕ ಅದು! ನನಗೆ ದೊಡ್ಡ ಪ್ರಶಸ್ತಿ ಅದು” ಎಂದು ಕೆಎಸ್‌ನ ತಡೆತಡೆದು ನಿಧಾನವಾಗಿ ಮಾತಾಡಿದರು.
ಹಿರಿಯರಿಬ್ಬರ ಮಾತು-ಕಥೆಗಳನ್ನು ನಾನು ಸಂತೋಷದಿಂದ ಆಲಿಸುತ್ತ ಕೂತೆ. ಅಷ್ಟರಲ್ಲಿ ಫೋನ್ ರಿಂಗಾಯಿತು. “ಬೆಳಗಿನಿಂದ ಹೀಗೇ ನೋಡಿ’ ಅಂತ ವೆಂಕಮ್ಮ ಸಂಭ್ರಮದಿಂದಲೇ ವಟಗುಟ್ಟಿ ಫೋನ್ ಎತ್ತಿದರು. ಆ ಕಡೆಯಿಂದ ಪು. ತಿ. ನರಸಿಂಹಾಚಾರ್ ಫೋನ್ ಮಾಡಿ ಕೆಎಸ್‌ನಗೆ ಅಭಿನಂದನೆ ಹೇಳುತ್ತ ಇದ್ದರು! “”ಥ್ಯಾಂಕ್ಸ್. ಪರವಾಗಿಲ್ಲ…ಏನೋ ದೇವರ ದಯೆ” ಎಂದು ಕೆಎಸ್‌ನ ತಮ್ಮ ಅದೇ ನಿರ್ಭಾವುಕ ಧ್ವನಿಯಲ್ಲಿ ಉತ್ತರಿಸಿದ್ದಾಯಿತು.
“”ನರಸಿಂಹಾಚಾರ್ ತುಂಬ ಪ್ರೀತಿಯ ಮನುಷ್ಯ. ತುಂಬ ಅಕ್ಕರಾಸ್ಥೆಯ ಮನುಷ್ಯ. ಆದರೆ, ಅವರ ಕವಿತೆ ಬಹಳ ಪೆಡುಸು” ಕೆಎಸ್‌ನ ಉದ್ಗಾರ.
“”ನಿಮಗೇನನ್ನಿಸತ್ತೆ, ಶಿವರುದ್ರಪ್ಪನವರೇ?”
“”ಕವಿಯ ವ್ಯಕ್ತಿತ್ವವನ್ನ ಆತ ಬೆಳೆದ ಪರಿಸರವೇ ರೂಪಿಸತ್ತೆ ಅಲ್ವಾ? ಬೇಂದ್ರೆ, ಕುವೆಂಪು, ಪುತಿನ ಒಬ್ಬೊಬ್ಬರೂ ಒಬ್ಬರಿಗಿಂತ ಒಬ್ಬರು ಭಿನ್ನ. ಹಾಗೇ ನಿಮ್ಮ ಕವಿತೆಯೂ. ಈ ವೈವಿಧ್ಯವೇ ಕನ್ನಡ ಕಾವ್ಯದ ಸ್ವಾರಸ್ಯ” ಎಂದರು ಜಿಎಸ್‌ಎಸ್.
“”ಅದು ಸರಿ ಬಿಡಿ” ಎಂದು ಕೆಎಸ್‌ನ ಮಾತಿಗೆ ಮುಕ್ತಾಯ ತಂದರು. “ಅದು ಸರಿ ಬಿಡಿ’ ಎನ್ನುವುದು ಅವರಿಗೆ ಪ್ರಿಯವಾದ ವಾಕ್ಯಗುತ್ಛ . ಅವರ ಹೆಬ್ಬೆರಳು ತೋರುಬೆರಳನ್ನು ಇನ್ನೂ ನೇವರಿಸುತ್ತಲೇ ಇತ್ತು!
“”ನೀವು ಪುಣ್ಯವಂತರು ಸರ್. ನಿಮ್ಮ ಹುಟ್ಟುಹಬ್ಬವನ್ನು ಇಡೀ ದೇಶ ಆಚರಿಸುತ್ತದೆ! ಇಂಥ ಭಾಗ್ಯ ಎಷ್ಟು ಜನಕ್ಕುಂಟು?” ಎಂದು ನಾನು ಹೇಳಿದರೆ, “”ನಾನು ಬರೆದ ಹುಟ್ಟುಹಬ್ಬ ಕವನ ಓದಿದೀರಿ ತಾನೆ? ನನ್ನ ಹುಟ್ಟುಹಬ್ಬದ ಸ್ವಾರಸ್ಯ ಅಲ್ಲಿ ಗೊತ್ತಾಗತ್ತೆ ನಿಮಗೆ!” ಎಂದು ಕೆ.ಎಸ್. ನ ತೂಗಿತೂಗಿ ನುಡಿದರು. ಅವರ ಮಾತು ಕಮ್ಮಿ. ಆದರೆ, ಆಡುವ ಒಂದೊಂದು ಮಾತೂ ಗುಂಡುಹೊಡೆದಂತೆ. ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ನವ್ಯ ಕವಿ ಒಬ್ಬರು, “ಕಾವ್ಯವೆಂದರೆ ಒಂದು ತಪಸ್ಸು. ನರಸಿಂಹಸ್ವಾಮಿಯವರ ಹಾಗೆ ಜನರನ್ನು ಖುಷಿಪಡಿಸಲು ಕವಿತೆ ಬರೆಯಬಾರದು’ ಎಂದು ಹಿರಿಯ ಕವಿಗೆ ಬಿಟ್ಟಿ ಬೋಧನೆ ನೀಡಿದ್ದರು. ಕೆಎಸ್‌ನ ತಣ್ಣಗೆ ಅದಕ್ಕೆ ಪ್ರತಿಕ್ರಿಯಿಸಿದ್ದರು. “ನನ್ನ ಪರಮ ಮಿತ್ರರು ಕಾವ್ಯ ಒಂದು ತಪಸ್ಸು ಅಂದರು. ನನಗೆ ತಪಸ್ಸಿನ ಅಡ್ರೆಸ್ ಗೊತ್ತಿಲ್ಲ. ಅದನ್ನು ಈ ಗೆಳೆಯರು ತಿಳಿಸಿದರೆ ಹೋಗಿ ನೋಡಿಕೊಂಡು ಬರುತ್ತೇನೆ!’
ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಭೆಯಲ್ಲಿ ಗೋಪಾಲಕೃಷ್ಣ ಅಡಿಗರು ಕೆಎಸ್‌ನ ಅವರ ಒಂಬತ್ತನೇ ಕವಿತಾ ಸಂಗ್ರಹವನ್ನು ಬಿಡುಗಡೆ ಮಾಡಿದ ಸಂದರ್ಭ. ಅಡಿಗರು ಕಿರುಗಣ್ಣು ಮಾಡಿ ನಗುತ್ತ, “”ನರಸಿಂಹಸ್ವಾಮಿ ಈ ವಯಸ್ಸಲ್ಲಿ ನವಪಲ್ಲವ ಎಂದು ತಮ್ಮ ಕವಿತಾಸಂಗ್ರಹಕ್ಕೆ ಹೆಸರಿಟ್ಟಿದ್ದಾರೆ” ಎಂದರು. ಕೆಎಸ್‌ನ ಥಟ್ಟನೆ ಉತ್ತರಿಸಿದರು, “”ನವ ಎಂದರೆ ಹೊಸದು ಅಂತ ಅಲ್ಲ; ಒಂಬತ್ತನೇದು ಅಂತ!” ದೊಡ್ಡವರ ನಡುವೆ ನಡೆಯುವ ಈ ಶುಭ್ರವಾದ ತಮಾಷೆಯ ಮಾತುಕತೆೆ ಕೂಡ ಅದೆಷ್ಟು ಚೆನ್ನಾಗಿರುತ್ತೆ. ಕಹಿಯ ಸೋಂಕಿಲ್ಲದ ಹಾಸ್ಯ ಅದು.
ನಾನು ಒಮ್ಮೆ ಕೆಎಸ್‌ನ ಮನೆಗೆ ಹೋಗಿದ್ದಾಗ ಅವರು ಬಾಯಿ ಚಪ್ಪರಿಸುತ್ತ¤ (ಅದು ಅವರ ಅಭ್ಯಾಸ) “”ಹೇಗಿದ್ದಾರಪ್ಪಾ, ನಿಮ್ಮ ಗುರುಗಳು?” ಎಂದು ಪ್ರಶ್ನಿಸಿದರು. ಪುತಿನ ಬಗ್ಗೆ ಅವರು ಕೇಳಿದ್ದು. ನಾನು ಹೇಳಿದೆ: “”ವಯಸ್ಸಾಯಿತಲ್ಲ ಸರ್! ಕಣ್ಣು ಮಂದ. ಕಿವಿ ಸುಮಾರು!”ಕೆಎಸ್‌ನ ಥಟ್ಟನೆ ಹೇಳಿದರು,””ಕಣ್ಣು ಕಿವಿ ಮಾತ್ರ ಅಲ್ಲ! ಮೂಗೂ ಸುಮಾರೇ!”
ಕೆಎಸ್‌ನ ಯಾಕೆ ಹಾಗೆ ಹೇಳಿದರು ಅನ್ನೋದು ನನಗೆ ಗೊತ್ತಾಗಲಿಲ್ಲ. ಸಂಜೆ ಒಬ್ಬನೇ ಮನೆಯಲ್ಲಿ ಕೂತಿದ್ದಾಗ ಒಮ್ಮೆಗೆ ಕೆಎಸ್‌ನ ಅವರ ಮಾತಿನ ಅರ್ಥ ಹೊಳೆಯಿತು. ಪುತಿನ ಮೈಸೂರುಮಲ್ಲಿಗೆಯ ಬಗ್ಗೆ ಮಾತಾಡುತ್ತ ಒಮ್ಮೆ “ಕಾವ್ಯವೇನೋ ಚೆಲುವಾಗಿದೆಯಪ್ಪಾ… ಆದರೆ ಅದರಲ್ಲಿ ಆಳ ಕಡಿಮೆ’ ಎಂದಿದ್ದರಂತೆ. ಆ ಮಾತು ಹೇಗೋ ಬಾಯಿಂದ ಬಾಯಿಗೆ ದಾಟಿ ಕೆಎಸ್‌ನ ಅವರ ಕಿವಿಗೆ ಬಿದ್ದಿದೆ. ಅದಕ್ಕೇ ಅವರು ಪುತಿನ ಅವರಿಗೆ ಮೂಗೂ ಸುಮಾರೆ ಎಂದದ್ದು. ಮೈಸೂರು ಮಲ್ಲಿಗೆಯ ಘಮವನ್ನ ಆಘ್ರಾಣಿಸಲಿಕ್ಕೆ ಮೂಗು ಚೆನ್ನಾಗಿರಬೇಕಷ್ಟೇ. ಅದನ್ನು ಗ್ರಹಿಸಲಾಗದಿದ್ದರೆ ಮೂಗು ಸುಮಾರೇ ಮತ್ತೆ! ಪುತಿನ ಮೂಗು ಸುಮಾರು ಎಂದದ್ದು ಪುತಿನಗೆ ತಿಳಿಯಿತು. ಅವರು ಗಟ್ಟಿಯಾಗಿ ನಕ್ಕು, “ನಿಜವಾದ ಕವಿಯಪ್ಪಾ ಅವರು’ ಎಂದು ತಾರೀಫು ಮಾಡಿದರು!
ಜಿ.ಎಸ್.ಎಸ್. ಮತ್ತು ನನ್ನನ್ನು ಬೇಡ ಎಂದರೂ ಬಿಡದೆ ಕೆಎಸ್‌ನ ದಂಪತಿಗಳು ಬಾಗಿಲವರೆಗೂ ಬಂದು ಬೀಳ್ಕೊಟ್ಟರು. ಅಂಗಳದಲ್ಲಿ ಸಣ್ಣ ಬೃಂದಾವನವೂ ಇತ್ತು. ಕಳೆಕಳೆಯಾದ ಶ್ರೀತುಳಸಿ-ಕೃಷ್ಣ ತುಳಸಿಗಳೂ ಇದ್ದವು. ಸುಣ್ಣ ಬಳಿದ ಬೃಂದಾವನದ ಹಣೆಗೆ ವೆಂಕಮ್ಮ ಅರಿಸಿನ-ಕುಂಕುಮ ಏರಿಸಿ ಬೆಳಿಗ್ಗೆ ಪೂಜಿಸಿದ್ದು ಎದ್ದು ಕಾಣುತ್ತ¤ ಇತ್ತು. ಅಲ್ಲೊಂದು ಪುಟ್ಟ ಜಗಲಿ. ಎದುರು ಮನೆಯ ಪುಟ್ಟ ಮಗು ಕೆಎಸ್‌ನ ಬಳಿ ಬಂದಿತು.
ವೆಂಕಮ್ಮ ನಕ್ಕರು. “”ಈ ಮಗು ನಮ್ಮೊàರನ್ನು ತುಂಬ ಹಚ್ಚಿಕೊಂಡು ಬಿಟ್ಟಿದೆ. ದಿನವೂ ಸಂಜೆ ಬಂದು ಅವರೊಂದಿಗೆ ಆಡಿಕೊಳ್ಳುತ್ತದೆ” ಎಂದರು.
“”ತಾತಾ… ಹ್ಯಾಪೀ ಬರ್ತ್ ಡೇ” ಎಂದು ಮಗು ಕೂಗಿತು. “”ಇವತ್ತು ಕವಡೆ ಆಡೋಣವಾ?” ಎಂದು ತಾತನ ಕೈ ಹಿಡಿದು ಎಳೆಯಿತು.
ಕೆಎಸ್‌ನ ಅವರ ಪಗಡೆ ಆಟದ ಪದ್ಯ ನನಗೆ ನೆನಪಾಯಿತು! ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ?
ನಾನು ಕೂಗಿದಾಗಲೆಲ್ಲಾ ಬರುವಳೆನ್ನ ಶಾರದೆ!
ನಾನು ನನ್ನ ಶಾರದೆ ಪಗಡೆಯಾಡಬಾರದೆ?
ಮನಸ್ಸಲ್ಲೇ ಈ ಪದ್ಯ ಗುನುಗುತ್ತ¤ ನಾನು ರಸ್ತೆಗೆ ಇಳಿದೆ. ಸಂಜೆಯ ಹೊಂಬೆಳಕು ಕವಿತಾ ಎಂಬ ಹೆಸರಿನ ಕೆಎಸ್‌ನ ಅವರ ಪುಟ್ಟ ಗೃಹಕ್ಕೆ ಬಂಗಾರದ ಲೇಪ ಮಾಡಿತ್ತು. ಬಾಗಿಲ ತೋಳಿಗೊರಗಿ ವೆಂಕಮ್ಮ ನಸು ಬಾಗಿ ನಿಂತಿದ್ದರು. ಅತಿಥಿಗಳು ಹೋಗುವ ತನಕ ಕೆಮ್ಮಬಾರದು ಎಂದು ಅವರು ಉಸಿರು ಬಿಗಿಹಿಡಿದುಕೊಂಡಂತಿತ್ತು. ನಾವು ರಸ್ತೆಗಿಳಿಯುತ್ತಲೇ ಅವರ ಕೆಮ್ಮು ಒತ್ತಿಕೊಂಡು ಬಂತು. ಕೆಎಸ್‌ನ ಮೊದಲೇ ಹಾಲು ಬಿಳುಪು. ಸಂಜೆಯ ಬೆಳಕಲ್ಲಿ ಬಂಗಾರದ ಪುತ್ಥಳಿಯಂತೆ ಕಣ್ತುಂಬುವಂತಿದ್ದರು. ಮಗುವಿನೊಂದಿಗೆ ಮಗುವಾಗಿ ಅವರು ಕವಡೆ ಆಟದಲ್ಲಿ ತೊಡಗಿದ್ದರು. ಈಗ ಅವರ ಮನೆಯಿಲ್ಲ. ಸ್ವತಃ ಮನೆಯೊಡೆಯನೂ ಇಲ್ಲ. ಜನವರಿ 26ರ ಕವಿಯ ಹುಟ್ಟುಹಬ್ಬದ ಸಂಭ್ರಮವೂ ಇಲ್ಲ. ಕವಿ ಪತ್ನಿಯ ಬಿಚ್ಚುಮಾತಿನ ಗಟ್ಟಿ ಉಪಚಾರವೂ ಇಲ್ಲ. ಆದರೆ, ಕೆಎಸ್‌ನ ಆ ಮಗುವಿನೊಂದಿಗೆ ಆಡುತ್ತ ಆಡುತ್ತ ಹೊನ್ನಚಿತ್ತಾರವಾಗಿ ಮಾರ್ಪಟ್ಟ ಆ ಸ್ವರ್ಣ ಘಳಿಗೆ ಗಟ್ಟಿಯಾಗಿ ನನ್ನ ಕಣ್ಣಲ್ಲಿ ಕೂತುಬಿಟ್ಟಿದೆ. ಪ್ರೀತಿಸುವ ಶಕ್ತಿ ದೊಡ್ಡದು. ಅದು ತಾನು ಪ್ರೀತಿಸಬೇಕಾದ ವಸ್ತುವನ್ನು ತನಗೆ ತಾನೇ ಹುಡುಕಿಕೊಂಡು ಬದುಕಿನ ದಿವ್ಯ ಲೀಲೆಯಲ್ಲಿ ಮೈಮರೆಯುತ್ತದೆ ! – ಎಚ್. ಎಸ್. ವೆಂಕಟೇಶಮೂರ್ತಿ
ಫೊಟೊ : ಎ. ಎನ್. ಮುಕುಂದ್