Advertisement

ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ: ಕೆ.ಎಸ್. ಈಶ್ವರಪ್ಪ ಕುಟುಕು

09:35 AM Feb 08, 2022 | Team Udayavani |

ಮೈಸೂರು: ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ. ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ. ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಸಿದ್ದರಾಮಯ್ಯ ಸಿಎಂ ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋತರು. ಈಗ ಉಡುಪಿಯಿಂದಲೇ ಹಿಜಾಬ್ ವಿವಾದ ಆರಂಭವಾಗಿದೆ ಎಂದು ಮೈಸೂರಿನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದದ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವಿದೆ. ವೋಟ್ ಬ್ಯಾಂಕ್‌ ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ಕೆಲಸವಾಗಿದೆ. ಕಾಂಗ್ರೆಸ್ ಮುಖಂಡರು ಮನಸು ಮಾಡಿದ್ದರೆ ಸಮಸ್ಯೆ ಬಗೆ ಹರಿಸಬಹುದಿತ್ತು. ಆ ಆರು ಜನ ವಿದ್ಯಾರ್ಥಿನಿಯರಿಗೆ ತಿಳುವಳಿಕೆ ನೀಡಬಹುದಿತ್ತು. ಆದರೆ ಕಾಂಗ್ರೆಸ್‌ಗೆ ಮುಸ್ಲಿಂ ಮತಗಳೇ ಮುಖ್ಯವಾದವು. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಹಿಂದೆ ವೀರಶೈವ ಲಿಂಗಾಯತ ಧರ್ಮ, ನಂತರ ಮತಾಂತರದ ವಿಷಯ, ಗೋಹತ್ಯೆ ಈಗ ಹಿಜಾಬ್ ಅವರ ರಾಜಕೀಯ ವಿಚಾರವಾಗಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್, ಆದರೆ ಅಪವಾದ ಮಾತ್ರ ಬಿಜೆಪಿ ಮೇಲೆ ಎಂದರು.

ಇದನ್ನೂ ಓದಿ:ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಇಲ್ಲ: ಸಚಿವ ಈಶ್ವರಪ್ಪ

ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ತಾನು ಎರಡನೇ ಅಂಬೇಡ್ಕರ್ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಸಂವಿಧಾನ ಕಾನೂನು ಗೊತ್ತಿಲ್ಲವೆ? ಸಿಎಂ ಆಗಿದ್ದವರಿಗೆ ನ್ಯಾಯಾಲಯದ ಆದೇಶ ಕಾನೂನು ಗೊತ್ತಿಲ್ಲವೆ? ಕೇರಳದ ಹೈ ಕೋರ್ಟ್ ಏನು ಹೇಳಿದೆ ಎಂದು ಸಿದ್ದರಾಮಯ್ಯ ಓದಿಕೊಳ್ಳಲಿ. ಸರ್ಕಾರದ ಆದೇಶ ಮಾಡಿದೆ ಈ ಬಗ್ಗೆ ಕಾಂಗ್ರೆಸ್ ನಿಲುವ ಸ್ಪಷ್ಟನೆ ಮಾಡಿ. ಕಾನೂನು ಪಾಲನೆ ಮಾಡಬೇಕೋ ಬೇಡವೋ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದರು.

Advertisement

ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವೆ ಎಂಬ ಕಲಬುರ್ಗಿ ಶಾಸಕಿ ಖನೀಜಾ ಫಾತಿಮಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ಧಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ. ಹಿಜಾಬ್ ಹಾಕಿಕೊಂಡು ಅಧಿವೇಶನಕ್ಕೆ ಬರುವುದಲ್ಲ. ನೀವು ಮೊದಲು ಮಸೀದಿಗೆ ಹೋಗಿ. ಎಷ್ಟು ಜನ ಮಹಿಳೆಯರು‌ ಮಸೀದಿಗೆ ಹೋಗಲು ಅವಕಾಶವಿದೆ? ನಾವು ಶಾಲೆಗೆ ಮಾತ್ರ ಹಿಜಾಬ್ ನಿಷೇಧಿಸಿದ್ದೇವೆ. ಹೊರಗಡೆಗೆ ನಿಷೇಧ ಮಾಡಿಲ್ಲ. ಎಲ್ಲಾ ಕಡೆ ಹಾಕಿಕೊಂಡು ಹೋಗಬಹುದು ಎಂದರು.

ಹಿಜಾಬ್ ವಿಚಾರದಲ್ಲಿ ಸಿ.ಎಂ‌.ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಇದು ವಿಕೃತಿಯಿಂದ ಕೂಡಿದ ಹೇಳಿಕೆ. ಇದು ಮುಸ್ಲಿಂ ಮಹಿಳೆಯರಿಗೆ ಮಾಡಿದ ಅವಮಾನ. ಅವರ ಮುಖ‌ ನೋಡಲು ಹಿಜಾಬ್ ತೆಗೆಯಬೇಕಾ? ಇಬ್ರಾಹಿಂ ಅವರ ಈ ಹೇಳಿಕೆ ಯಾರು ಒಪ್ಪುವಂತದ್ದಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next