ಹಾಸನ: ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಯಾವ ಅಧಿಕಾರಿಗಳ ವರ್ಗಾವಣೆಗೆ ಯಾವ ಸಚಿವರು ಎಷ್ಟೆಷ್ಟು ಲಂಚಪಡೆದಿದ್ದಾರೆಂಬುದನ್ನು ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಹಿರಿಯ, ಜವಾಬ್ದಾರಿಯುತ ನಾಯಕರಾಗಿರುವ ಈಶ್ವರಪ್ಪ ಯಾವುದೇ ಆರೋಪ ಮಾಡಿದರೂ ದಾಖಲೆ ಸಹಿತಿ ಸಾಬೀತುಪಡಿಸಿ ಘನತೆ ಉಳಿಸಿಕೊಳ್ಳಬೇಕು. ಪುಕ್ಕಟೆ ಪ್ರಚಾರಕ್ಕೆ ಆರೋಪ ಮಾಡುವುದು ಸಲ್ಲದು ಎಂದರು.
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ವರ್ಗಾವಣೆಗೆ ಕೆ.ಎಸ್.ಈಶ್ವರಪ್ಪ ಸಹಿತ ಹಲವು ಶಾಸಕರು ಶಿಫಾರಸು ಪತ್ರಗಳನ್ನು ನೀಡಿದ್ದಾರೆ. ಶಾಸಕರ ಎಲ್ಲಾ ಮನವಿಗಳಿಗೂ ಪಕ್ಷ ಭೇದ ಮಾಡದೆ ಸ್ಪಂದಿಸಿ ಎಂಜಿನಿಯರ್‌ಗಳು ಹಾಗೂ ಇತರೆ ಅಧಿಕಾರಿಗಳನ್ನು ವರ್ಗ ಮಾಡಿಕೊಟ್ಟಿದ್ಧೇನೆ. ವರ್ಗಾವಣೆ ಮಾಡಿಸಲು ಈಶ್ವರಪ್ಪ ಸಹಿತ ಯಾವುದೇ ಶಾಸಕರಿಂದಲಾದರೂ ನಾನು ಹಣ ತೆಗೆದುಕೊಂಡಿದ್ದೇನೆಯೇ? ಆರೋಪ ಮಾಡುವವರು ತನಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನಾದರೂ ಹೇಳಲಿ ನೋಡೋಣ ಎಂದು ತಿರುಗೇಟು ನೀಡಿದರು.
ಅತಿವೃಷ್ಟಿಯಿಂದ ಶಿರಾಡಿ, ಚಾರ್ಮಾಡಿ ಸಹಿತಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಭೂ ಕುಸಿತವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಮಳೆ ನಿಂತ ನಂತರ ಹಾನಿಯ ಅಂದಾಜು ಮಾಡಿ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ರೇವಣ್ಣ ಹೇಳಿದರು.