ಶಿವಮೊಗ್ಗ : ರಾಹುಲ್ ಗಾಂಧಿಯವರ ಬಗ್ಗೆ ಏನು ಹೇಳಬೇಕೋ ನನಗೆ ಅರ್ಥ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಎಂದರೇ ರಾಹುಲ್ ಗಾಂಧಿ, ಅವರ ಅಮ್ಮ, ಅಪ್ಪ, ಅಜ್ಜ, ಮುತ್ತಜ್ಜ ಹೀಗೇ ಇವರದ್ದೇ ಆಗಿ ಹೋಗಿದೆ. ಆದರೆ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಜನರೇ ಕಾಂಗ್ರೆಸ್ ಪಕ್ಷ ಹಾಗೂ ಅವರ ಕುಟುಂಬವನ್ನು ದೇಶದಿಂದ ಹೊರಹಾಕಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನರು ಬಿಜೆಪಿ ಹಾಗೂ ಮೋದಿಯವರ ಜೊತೆಗೆ ಇರುತ್ತಾರೆ. ಪ್ರಧಾನಿ ಮೋದಿಯವರನ್ನು ದೇಶದ ಜನರೇ ಬೇಕು ಎಂದು ತೀರ್ಮಾನ ಮಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಅವರ ಛೇಲಾಗಳು ಹೇಳಿದ್ದನ್ನು ಜನರು ನಂಬುವುದಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ನಾವಿಕನಿಲ್ಲದ ದೋಣಿ;ಚಿಕ್ಕ ಪುಟ್ಟ ನಾಯಕರು ಕುರ್ಚಿಗಾಗಿ ಹೋರಾಟ: ಶೋಭಾ ಕರಂದ್ಲಾಜೆ
ಭದ್ರಾವತಿಯ ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ ನಡೆದ ವಿಚಾರವಾಗಿ ಮಾತನಾಡಿದ ಅವರು ರನ್ನರ್ಸ್ ಅಪ್ ಆದ ತಂಡ ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆಗಳನ್ನು ಕೂಗಿದೆ. ಇದನ್ನು ವಿರೋಧಿಸಿ ಶಾಸಕರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಈ ರೀತಿಯ ಗುಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇದನ್ನು ಮತ್ತೆ ಬೆಳೆಸುವ ಪ್ರಯತ್ನ ಮಾಡಬೇಡಿ. ತಪ್ಪು ಮಾಡಿದವರು ಸರೆಂಡರ್ ಆಗುವುದು ಒಳ್ಳೆಯದು ಎಂದ ಅವರು ಭದ್ರಾವತಿ ಶಾಸಕರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು. ಅದನ್ನು ಬಿಟ್ಟು ಗುಂಡಾಗಿರಿ ಮಾಡಿದವರಿಗೆ ಬೆಂಬಲ ನೀಡುವುದು ಸರಿಯಲ್ಲ ಎಂದು ನುಡಿದರು.