ಶಿವಮೊಗ್ಗ: ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ. ಅಧಿಕಾರವಿಲ್ಲದಿದ್ದರೂ ಪಕ್ಷ ನಮ್ಮ ಅನುಭವ ಬಳಕೆ ಮಾಡಿಕೊಳ್ಳಬಹುದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಎಲ್ಲಾ ಭಗವಂತ ಹಾಗೂ ಹೈ ಕಮಾಂಡ್ ಗೆ ಬಿಟ್ಟಿದ್ದು. ಸಂಪುಟದಲ್ಲಿ ಯಾರು ಸೇರುತ್ತಾರೆ, ಯಾರು ಬಿಡುತ್ತಾರೆ ಎಂಬುದು ನನಗೂ ಗೊತ್ತಿಲ್ಲ ಎಂದರು.
ಇದನ್ನೂ ಓದಿ:ಇಂದೂ ಮುಂದುವರಿಯಲಿದೆ ಸಂಪುಟ ಸರ್ಕಸ್: 15 ಶಾಸಕರಿಗೆ ಮಾತ್ರ ಅವಕಾಶ? ಹಿರಿಯರಿಗೆ ಕೊಕ್?
ಈ ನಡುವೆ ಯುವಕರಿಗೆ ಆದ್ಯತೆ ಹಾಗೂ ಹಳಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಕೃಷ್ಣನ ತಂತ್ರಗಾರಿಕೆಯನ್ನು ಪಕ್ಷ ಅನುಸರಿಸಬಹುದು. ಲಾಬಿ ಹಾಗೂ ಒತ್ತಡಕ್ಕೆಲ್ಲ ಹೈ ಕಮಾಂಡ್ ಮಣಿಯುತ್ತದೆ ಎಂದು ನನಗೆ ಅನಿಸುವುದಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ವಲಸೆ ಬಂದವರಲ್ಲಿ ಕೆಲವರಿಗೆ ಅವಕಾಶ ಸಿಗದೆ ಇರಬಹುದು ಎಂದು ಹೇಳಿದರು.
ಬೊಮ್ಮಾಯಿ ಸರ್ಕಾರದ ಭವಿಷ್ಯ ಮುಂದಿನ ಆರು ತಿಂಗಳು ಎಂಬ ಸ್ವಾಮೀಜಿ ಹೇಳಿಕೆ ಬಗ್ಗೆ ಕೇಳಿದಾಗ, ಈ ಬಗ್ಗೆ ಏನೂ ಹೇಳಲಾರೆ. ಅದು ಸತ್ಯವೂ ಆಗಬಹುದು, ಸುಳ್ಳೂ ಆಗಬಹುದು ಎಂದರು.