ಹಾವೇರಿ: ಸಿದ್ದರಾಮಯ್ಯ ಮಂಗಳೂರಿಗೆ ಸಾಂತ್ವನ ಹೇಳಲು ಹೊರಟಿಲ್ಲ, ಬೆಂಕಿ ಹಚ್ಚಲು ಹೊರಟಿದ್ದಾರೆ. ಆದ್ದರಿಂದ ಅವರಿಗೆ ಅನುಮತಿ ನೀಡಿಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಹೇಳಿದರು.
ಧಾರ್ಮಿಕ ಕಾರ್ಯಕ್ರಮ ನಿಮಿತ್ತ ರವಿವಾರ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಶಾಂತಿ ಬೇಕಾಗಿಲ್ಲ. ಸಿದ್ದರಾಮಯ್ಯ ಇರಬಹುದು, ಖಾದರ್ ಇರಬಹುದು ಬೆಂಕಿ ಹಚ್ಚಬೇಕು ಎಂಬ ಮಾತುಗಳನ್ನು ಆಡುತ್ತಾರೆ. ಗಲಭೆ ಮಾಡಬೇಕು ಎಂದು ಕಾಂಗ್ರೆಸ್ ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಈಗಾಗಲೇ ಎರಡು ಹೆಣಗಳು ಬಿದ್ದಿವೆ. ಇವರಿಗೆ ಇನ್ನೆಷ್ಟು ಹೆಣಗಳು ಬೀಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬ್ರಿಟಿಷರು ಭಾರತವನ್ನು ಒಡೆದು ಹೋಳು ಮಾಡಿದರು. ಅವರಂತೆ ಇಂದಿನ ಕಾಂಗ್ರೆಸ್ ಹಿಂದೂ-ಮುಸ್ಲಿಂ ಒಂದಾಗುವುದನ್ನು ಸಹಿಸುತ್ತಿಲ್ಲ ಎಂದರು.
ಪೌರತ್ವ ತಿದ್ದುಪಡಿ ಕಾಯಿದೆ ಯಾವುದೇ ಧರ್ಮದ ಪರವಾಗಿಲ್ಲ. ಈ ಕಾಯಿದೆ ಇಡೀ ದೇಶವನ್ನು ಒಂದು ಮಾಡುತ್ತದೆ. ಕಾಯಿದೆಯಿಂದ ಮುಸ್ಲಿಂರಿಗೆ ತೊಂದರೆ ಆಗಲ್ಲ ಎನ್ನುವುದನ್ನು ದೆಹಲಿ ಜಮಾ ಮಸೀದಿಯ ಮೌಲ್ವಿಗಳೇ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ನವರು ಇದನ್ನು ದುರುಪಯೋಗ ಪಡಿಸಿಕೊಂಡು ಗಲಭೆ ಸೃಷ್ಠಿಸಲು ಮುಂದಾಗಿದ್ದಾರೆ.
ಪೌರತ್ವ ತಿದ್ದುಪಡಿ ಆಗಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಹೇಳಿದ್ದರು. ಆ ಕಾರಣದಿಂದ ದೇಶದಲ್ಲಿ ಹಲವು ಅಭಿವೃದ್ಧಿಗಳು ಕಾಣುತ್ತಿವೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ವಿನಾಕಾರಣ ಗೊಂದಲು ಸೃಷ್ಟಿಸಲು ಮುಂದಾಗಿರುವುದು ಸರಿಯಲ್ಲ ಎಂದರು.