ಶಿವಮೊಗ್ಗ: ರಾಜ್ಯದಲ್ಲಿ ಮತ್ತೆ ಹಿಜಾಬ್ ಸಮಸ್ಯೆ ಸೃಷ್ಟಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕೆಲವು ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು. ಅವರ ಮನಸ್ಥಿತಿ ಹಾಗೇ ಇರುವುದರಿಂದ ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿಲ್ಲ. ಹೊಂದಿಕೊಳ್ಳಬಾರದೆಂದು ಕೆಲವರು ನಿಶ್ಚಯ ಮಾಡಿದ್ದಾರೆ. ಅಂತವರ ಮನಸ್ಥಿತಿ ಬದಲಾವಣೆಗೆ ಮುಸಲ್ಮಾನರ ಹಿರಿಯರು ಬುದ್ದಿ ಹೇಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಭಾರತದ ಸಂಸ್ಕೃತಿಗೆ ತಕ್ಕಂತೆ ಹೊಂದಾಣಿಕೆಯಾಗಬೇಕು. ಆಗದಿದ್ದರೆ ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಮನಸ್ಥಿತಿ ಒಪ್ಪುವ ದಿಕ್ಕಿನಲ್ಲಿ ಅವರು ಪ್ರಯತ್ನ ಮಾಡಬೇಕು ಎಂದರು.
ಕೋರ್ಟ್, ಸಂವಿಧಾನ, ಸರ್ಕಾರ ಹಾಗೂ ಸರ್ಕಾರದ ಕಾನೂನಿಗೆ ಬೆಲೆ ಕೊಡಬೇಕು. ಈ ಮಣ್ಣಿನ ಪ್ರತಿಯೋಬ್ಬರೂ ಕಾನೂನಿಗೆ ಬೆಲೆ ಕೊಡಬೇಕು. ಮುಸಲ್ಮಾನರು ದೇಶದ ಕಾನೂನು ವಿರುದ್ಧವಾಗಿ ಇರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಇರಬೇಕಾದರೇ ಕಾನೂನು, ಸಂವಿಧಾನಕ್ಕೆ ಬೆಲೆ ಕೊಡಬೇಕು ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ನೆಹರುಗೂ ಮೋದಿಗೂ ಆಕಾಶ ಭೂಮಿಗಿರುವ ಅಂತರ : ಸಿದ್ದರಾಮಯ್ಯ
ಹಿಜಾಬ್ ವಿವಾದದ ಹಿಂದೆ ಇರುವ ರಾಷ್ಟ್ರದ್ರೋಹಿಗಳನ್ನು ಹುಡುಕಿ ತೆಗೆಯುತ್ತಿದ್ದೇವೆ. ರಾಷ್ಟ್ರದ್ರೋಹಿಗಳನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೋಳ್ಳುತ್ತೇವೆ. ಮುಸಲ್ಮಾನ ವಿದ್ಯಾರ್ಥಿಗಳ ಮನಸ್ಸನ್ನು ಸಹ ಪರಿವರ್ತನೆ ಮಾಡುತ್ತೇವೆ. ಈ ರಾಷ್ಟ್ರದ ಪ್ರಜೆಗಳಾಗಿ ಅವರು ಮುಂದುವರೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತದೆ ಎಂದು ಈಶ್ವರಪ್ಪ ಹೇಳಿದರು.