ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಕಬಡ್ಡಿ ಕೂಟದ ಗಲಾಟೆ ಸಂಬಂಧ ಶಾಸಕ ಸಂಗಮೇಶ್ ಪುತ್ರನನ್ನು ಬಂಧಿಸಿರುವ ಪ್ರಕರಣವನ್ನು ಖಂಡಿಸಿ ಶಿವಮೊಗ್ಗದಲ್ಲಿಂದು ಕಾಂಗ್ರೆಸ್ ನಿಂದ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನೆಯನ್ನು ಸಚಿವ ಕೆ ಎಸ್ ಈಶ್ವರಪ್ಪ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶಕ್ಕೆ ಬರುವ ದೊಡ್ಡ ದೊಡ್ಡ ನಾಯಕರ ಪಟ್ಟಿಯನ್ನು ನಾನು ನೋಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಬರ್ತಿದ್ದಾರೆ. ಕಾಂಗ್ರೆಸ್ ನವರು ನಾವು ಜೀವಂತವಾಗಿದ್ದೇವೆ ಎಂದು ತೋರಿಸೋದಕ್ಕೆ ಸಮಾವೇಶ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲರೂ ಒಮ್ಮೆ ಭದ್ರಾವತಿಗೆ ಹೋಗಿ ನೋಡಿಕೊಂಡು ಬರಲಿ. ಘಟನೆಯಲ್ಲಿ ಯಾರ ತಪ್ಪೆಂದು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಕೇಳಲಿ. ಕ್ರೀಡೆಯಲ್ಲಿ ಗೆದ್ದ ತಂಡ ಭಾರತ್ ಮಾತಾಕೀ ಜೈ, ಜೈ ಶ್ರೀರಾಮ್ ಘೋಷಣೆ ಕೂಗಿ, ಸಂಭ್ರಮಿಸಿದ್ದಾರೆ. ಈ ತರಹ ಕೂಗಿದ್ದು ಶಾಸಕ ಸಂಗಮೇಶ್ ಹಾಗೂ ಅವರ ಮಕ್ಕಳಿಗೆ ಯಾಕೇ ಬೇಸರ ಆಗಿದೆಯೋ ಗೊತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಎಂದು ಕೂಗಿದ್ದರೇ ಸಮಾಧಾನ ಆಗ್ತಿತ್ತೇನೋ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಭಯೋತ್ಪಾದಕ ಸಂಘಟನೆಯ 7 ಮಂದಿ ಸಹಚರರ ಸೆರೆ, ಶಸ್ತ್ರಾಸ್ತ್ರ ವಶಕ್ಕೆ
ಈ ರೀತಿ ಕೂಗಿದ್ದಕ್ಕೆ ಹಲ್ಲೆ ಮಾಡಿದ್ದು ಸರಿಯೇ ಎಂದು ಹೋಗಿ ಮೊದಲು ಕೇಳಿಕೊಂಡು ಬರಲಿ. ಕ್ರೀಡೆಯಲ್ಲಿ ಗೆದ್ದವರು ಸಂಭ್ರಮಾಚರಣೆ ಮಾಡುವುದು ಸಾಮಾನ್ಯ. ಸೋತಾಗ ಸೋಲನ್ನು ಒಪ್ಪಿಕೊಳ್ಳಬೇಕು. ಇಲ್ಲಿ ಜನಾಕ್ರೋಶ ಸಮಾವೇಶ ಮಾಡುತ್ತಿರವುದಕ್ಕೆ ಅರ್ಥವಿಲ್ಲ. ಹೀಗೆ ಮುಂದುವರೆಸಿಕೊಂಡು ಹೋಗ್ಬೇಡಿ ಎಂದರು.
ನಾನು,ಸಂಸದರು, ಯಡಿಯೂರಪ್ಪ, ಸರ್ಕಾರ ತಪ್ಪು ಮಾಡಿದರೆ ಟೀಕೆ, ಹೋರಾಟ ಮಾಡಲಿ. ನಾವು ಹೋರಾಟ ಮಾಡಿಕೊಂಡು ಬಂದಿದ್ದಕ್ಕೆ ಇಂದು ಸರ್ಕಾರ ಬಂದಿರೋದು. ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಅಂದಿದ್ದಕ್ಕೆ ವಿರೋಧ ಮಾಡಿದರೆ ಕಾಂಗ್ರೆಸ್ ಮತ್ತಷ್ಟು ಅಧೋಗತಿಗೆ ಹೋಗುತ್ತದೆ ಎಂದರು.
ಸಿಡಿ ವಿಚಾರದಲ್ಲಿ ಎಸ್ಐಟಿ ಯಿಂದ ಹಲವರ ಬಂಧನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎನೇನು ನಡಿಯುತ್ತದೆ ನೋಡೋಣ. ತನಿಖೆ ಮಾಡುತ್ತಿದ್ದು, ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ. ತಪ್ಪಿತಸ್ಥರಲ್ಲದವರು ಹೊರಗೆ ಬರಲಿ. ಆದಷ್ಟು ಬೇಗ ಇದಕ್ಕೆ ಅಂತ್ಯ ಹಾಡಲಿ ಎಂದರು.
ಇದನ್ನೂ ಓದಿ:ಅಕ್ಕನ ಮನೆಯಲ್ಲೇ ಕನ್ನ ಹಾಕಿದ ತಂಗಿಯ ಬಂಧನ