ಬೆಂಗಳೂರು: ನಾನು ಈ ಉಚ್ಚಾಟನೆಯನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ, ನಾನು ಸಾಯುವವರೆಗೂ ಬಿಜೆಪಿಯವ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತೆ ಗುಡುಗಿದ್ದಾರೆ.
ಚುನಾವಣ ಅಕ್ರಮಕ್ಕೆ ಸಂಬಂಧಪಟ್ಟಂತೆ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಮತ್ತೆ ಪಕ್ಷದ ಬಾಗಿಲು ತಟ್ಟುವ ಮುನ್ಸೂಚನೆ ನೀಡಿದ್ದಾರೆ.
ನಾನು ಸಾಯುವವರೆಗೂ ಬಿಜೆಪಿಗನೇ. ಹಿಂದೆ ಇದೇ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಿಂದ 6 ವರ್ಷ ಉಚ್ಚಾಟನೆ ಮಾಡಿದ್ದೇವೆ ಎಂದಿದ್ದರು. ಆದರೆ ಯಡಿಯೂರಪ್ಪನವರೇ ಶೆಟ್ಟರ್ ಮನೆಗೆ ಹೋಗಿ ಪಕ್ಷಕ್ಕೆ ವಾಪಸ್ ಕರೆದುಕೊಂಡು ಬಂದು ಎಂಪಿ ಸೀಟು ಕೊಟ್ಟರು. ಈ ಉಚ್ಚಾಟನೆಯನ್ನು ನಾನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನಾನು ಮೋದಿ ಪರ ಕೈ ಎತ್ತುತ್ತೇನೆ ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಯ ಹಿಂದಿನ ದಿನ ಫೇಕ್ ವಿಡಿಯೋ ಹರಿಬಿಡಲಾಗಿದೆ. ನಾನು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಾಡಿದ ಪ್ರಚಾರದ ವೀಡಿಯೋ ಈಗ ವೈರಲ್ ಮಾಡಲಾಗಿದೆ. ನಾನು ಚುನಾವಣ ಆಖಾಡದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಬೇಕು. ಸಂಸದ ರಾಘವೇಂದ್ರ ಅವರನ್ನು ಬಂಧಿಸಬೇಕೆಂದು ಚುನಾವಣ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದರು.
ನಾನು ಭವಿಷ್ಯಕಾರ ಅಲ್ಲ
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಆಪರೇಷನ್ ಕಮಲದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ರಾಜ್ಯದಲ್ಲಿ ಸರಕಾರ ಇದೆ. ಯಾವ ಅರ್ಥದಲ್ಲಿ ಸರಕಾರ ಪತನವಾಗುತ್ತದೆ ಎಂದು ಅವರು ಹೇಳಿದ್ದಾರೋ ಗೊತ್ತಿಲ್ಲ. ನಾಳೆ ಸರಕಾರ ಏನಾಗುತ್ತದೆ ಎಂದು ಗೊತ್ತಿಲ್ಲ. ನಾನು ಭವಿಷ್ಯಕಾರ ಅಲ್ಲ. ಅವರು ಆಪರೇಷನ್ ಕಮಲ ಎಂದರೆ ಈ ಕಡೆಯಿಂದ ಕೆಲವೊಬ್ಬ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಬಗ್ಗೆ ನಾನು ಈಗ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.