ಮೈಸೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ನಮ್ಮ ಸರ್ಕಾರದ ಮೇಲೆ 40% ಲಂಚದ ಆರೋಪ ಮಾಡುತ್ತದೆ. ನಮ್ಮ ಸರ್ಕಾರದ ಯಾವ ಸಚಿವರು ಮೇಲೂ ಒಂದೇ ಒಂದು ಲಂಚದ ನಿರ್ದಿಷ್ಟ ಪ್ರಕರಣ ಇಲ್ಲ. 40% ಆರೋಪ ಮಾಡುವ ಕಾಂಗ್ರೆಸ್ ಒಂದೇ ಒಂದು ಕೇಸ್ ಎತ್ತಿ ತೋರಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ ಇಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಎಂದುಕೊಂಡಿದ್ದೆ. ತಾನು ಸಿಎಂ ಆಗಲು ತನ್ನ ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಡಿ.ಕೆ.ಶಿ ಜಾತಿವಾದಿಯಾಗಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಸಹ ಜಾತಿವಾದಿಯಾಗಿದ್ದಾರೆ ಇವರಿಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿಯ ಕೆಸರು ಅಂಟಿಸಿದ್ದಾರೆ ಎಂದು ಟೀಕಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ವಿಚಾರವಾಗಿ ಮಾತನಾಡಿದ ಅವರು, ನನಗೆ ಮೊದಲ ದಿನವೇ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ಗೊತ್ತಿತ್ತು. ನಾನು ಈ ಪ್ರಕರಣದಲ್ಲಿ ಯಾವ ತಪ್ಪು ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟೆ. ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಇದ್ದ ಮುಜುಗರ ನಿವಾರಣೆಯಾಗಿದೆ. ಬಿ ರಿಪೋರ್ಟ್ ಆದರೂ ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರೂ ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವುದು ಬೇಸರ ಮೂಡಿಸಿದೆ. ಸಿದ್ದರಾಮಯ್ಯ ಕಾನೂನು ಪಂಡಿತರಾಗಿದ್ದಾರೆ. ಸುಮ್ಮನೆ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಹೊಸ ರಾಷ್ಟ್ರಪತಿಯ ಹೊಸ ಜೀವನ : ಶಿಕ್ಷಕಿಯಿಂದ ಮೇಡಂ ಪ್ರಸಿಡೆಂಟ್ ವರೆಗೆ…
ನಾನು ಸಚಿವ ಸಂಪುಟ ಮತ್ತೆ ಸೇರುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ನನ್ನದು ಯಾವ ತಪ್ಪು ಇರದಿದ್ದರೂ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಈಗ ಆರೋಪ ಮುಕ್ತನಾಗಿದ್ದೇನೆ. ಸಂಪುಟ ಭಾಗವಾಗುವ ಎಲ್ಲಾ ನಿರ್ಧಾರಗಳು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಈಶ್ವರಪ್ಪ ಹೇಳಿದರು.