ದುಬೈ: ಐಸಿಸಿ ಟಿ20 ವಿಶ್ವಕಪ್ ನ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಸ್ಕಾಟ್ಲೆಂಡ್ ನೀಡಿದ ಸುಲಭ ಗುರಿಯನ್ನು ಕೇವಲ 6.3 ಓವರ್ ಗಳಲ್ಲಿ ಬೆನ್ನತ್ತಿದ ಭಾರತ ತಂಡ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಉತ್ತಮ ರನ್ ರೇಟ್ ಪಡೆಯಲು ಸ್ಕಾಟ್ಲೆಂಡ್ ನೀಡಿದ 86 ರನ್ ಗುರಿಯನ್ನು 7.1 ಓವರ್ ಗಳಲ್ಲಿ ತಲುಪುವ ಸವಾಲು ಪಡೆದಿದ್ದ ಭಾರತ ತಂಡಕ್ಕೆ ಆರಂಭಿಕರು ನೆರವಾದರು. ಅದರಲ್ಲೂ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿದರು.
ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕೆ.ಎಲ್.ರಾಹುಲ್ ಈ ಬಾರಿಯ ವಿಶ್ವಕಪ್ ನ ಅತೀ ವೇಗದ ಅರ್ಧಶತಕ ಗಳಿಸಿದ ದಾಖಲೆ ಬರೆದರು. ಕೆ ಎಲ್ ರಾಹುಲ್ ಅವರು ಈ ಇನ್ನಿಂಗ್ಸ್ ನಲ್ಲಿ ಮೂರು ಸಿಕ್ಸರ್ ಮತ್ತು ಆರು ಬೌಂಡರಿ ಬಾರಿಸಿದರು.
ರಾಹುಲ್ ಗೆ ಶುಕ್ರವಾರ ಡಬಲ್ ಧಮಾಕ. ಒಂದೆಡೆ ಪಂದ್ಯ ಗೆದ್ದ ಖುಷಿಯಾದರೆ ಮತ್ತೊಂದೆಡೆ ಗೆಳತಿ ಆಥಿಯಾ ಶೆಟ್ಟಿ ಜನ್ಮದಿನ. ಗೆಳತಿಯ ಬರ್ತ್ ಡೇಗೆ ರಾಹುಲ್ ಅರ್ಧಶತಕದ ಗಿಫ್ಟ್ ನೀಡಿದರು. ಗ್ಯಾಲರಿಯಲ್ಲಿ ಕುಳಿತಿದ್ದ ಆಥಿಯಾ ಗೆಳೆಯ ರಾಹುಲ್ ಗೆ ಚಿಯರ್ ಮಾಡಿದರು.
ಇದನ್ನೂ ಓದಿ:ದುಬೈನಲ್ಲಿ ಟೀಂ ಇಂಡಿಯಾ ದೀಪಾವಳಿ: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ
ಪಂದ್ಯದ ಬಳಿಕ ಟ್ವಿಟ್ಟರ್ ಪೋಸ್ಟ್ ಮಾಡಿದ ಕೆ.ಎಲ್.ರಾಹುಲ್ ಅವರು ಮೊದಲ ಬಾರಿಗೆ ತನ್ನ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. “ ಹ್ಯಾಪಿ ಬರ್ತ್ ಡೇ ಮೈ ಲವ್ ಆಥಿಯಾ ಶೆಟ್ಟಿ” ಎಂದು ಕೆ.ಎಲ್ ಬರೆದುಕೊಂಡಿದ್ದಾರೆ.