Advertisement

ನೈಋತ್ಯ ಶಿಕ್ಷಕರ ಕ್ಷೇತ್ರ: ಕೆ.ಕೆ. ಮಂಜುನಾಥ್‌ ಕಾಂಗ್ರೆಸ್‌ ಅಭ್ಯರ್ಥಿ

09:40 AM Oct 14, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆ ಸೇರಿದಂತೆ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೊಡಗಿನ ಕೆ.ಕೆ. ಮಂಜುನಾಥ್‌ ಅವರು ಸ್ಪರ್ಧಿಸುತ್ತಿದ್ದು ಶಿಕ್ಷಕ ಮತದಾರರು ಅವರನ್ನು ಬೆಂಬಲಿಸಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಜುನಾಥ್‌ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಲ್ಲ ಎಂದು ಪ್ರತಿಸ್ಪರ್ಧಿಗಳಿಂದ ಅಪಪ್ರಚಾರ ನಡೆಯುತ್ತಿದೆ.  ಮಂಜುನಾಥ್‌ ಅವರು ಪಕ್ಷದ ಅಭ್ಯರ್ಥಿಯಾಗಿದ್ದು ಈ ಬಾರಿ ಶಿಕ್ಷಕರ ಕ್ಷೇತ್ರಕ್ಕೆ ಓರ್ವ ಶಿಕ್ಷಕರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಇದೇ ರೀತಿ ಪದವೀಧರರ ಕ್ಷೇತ್ರಕ್ಕೆ ಎಸ್‌.ಪಿ. ದಿನೇಶ್‌ ಅಭ್ಯರ್ಥಿಯಾಗಿರುತ್ತಾರೆ ಎಂದರು.

ನೋಂದಾಯಿಸಿ
ದ.ಕ. ಜಿಲ್ಲೆಯಲ್ಲಿ ಸುಮಾರು 8,000ದಿಂದ 10,000ದ ವರೆಗೆ ಶಿಕ್ಷಕ ಮತದಾರರು ಹಾಗೂ ಸುಮಾರು 50,000 ಪದವೀಧರ ಮತದಾರರಿದ್ದಾರೆ. ಈ ಹಿಂದಿನ ಮತದಾರರ ಪಟ್ಟಿ ರದ್ದುಗೊಂಡಿದ್ದು ಹೊಸದಾಗಿ ಪಟ್ಟಿ ಸಿದ್ಧವಾಗುತ್ತಿದೆ. ಶಿಕ್ಷಕರು ಹಾಗೂ ಪದವೀಧರರು ಸ್ವಯಂಪ್ರೇರಿತರಾಗಿ ಹೆಸರು ನೋಂದಾಯಿಸಬೇಕು ಎಂದು ಕೋರಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ನೀಡಿದೆ ಎಂದವರು ವಿವರಿಸಿದರು.

ಯಶಸ್ವಿ ಅಭಿಯಾನ
ಸೆ. 23ರಿಂದ ನಡೆಯುತ್ತಿರುವ ಮನೆಮನೆಗೆ ಕಾಂಗ್ರೆಸ್‌ ಅಭಿಯಾನ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಪಕ್ಷದ ಎಲ್ಲ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದವರು ಹೇಳಿದರು.

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್‌ ಮಾತನಾಡಿ, 1994ರಲ್ಲಿ ಹೈಸ್ಕೂಲ್‌ ಶಿಕ್ಷಕನಾಗಿ ಸೇರಿದ ನಾನು ಶಿಕ್ಷಕರ ಸಂಘದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದೇನೆ. ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಆಯ್ಕೆಯಾಗಬೇಕು ಎಂಬುದು ನನ್ನ ನಿಲುವು ಆಗಿದ್ದು ಈ ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು. ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಸದಾಶಿವ ಉಳ್ಳಾಲ, ಸಂತೋಷ್‌ ಕುಮಾರ್‌ ಶೆಟ್ಟಿ, ಅಬ್ದುಲ್‌ ಸಲೀಂ, ಅಪ್ಪಿ, ನಜೀರ್‌ ಬಜಾಲ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಉಪಸ್ಥಿತರಿದ್ದರು.

Advertisement

ಗಾಂಜಾ: ಕಠಿನ ಕ್ರಮಕ್ಕೆ ಆಗ್ರಹ
ಜಿಲ್ಲೆಯಲ್ಲಿ ಮಾದಕ ದ್ರವ್ಯ ಹಾವಳಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಈಗಾಗಲೇ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಕೂಡ ಆಗ್ರಹ ಮಾಡುತ್ತಿದೆ ಎಂದು ಹರೀಶ್‌ ಕುಮಾರ್‌ ಹೇಳಿದರು.

ಅ. 22ರಂದು ಸಿಎಂ ಬಂಟ್ವಾಳಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ. 22ರಂದು ಬಂಟ್ವಾಳಕ್ಕೆ ಅಗಮಿಸಲಿದ್ದು ಸುಮಾರು 300 ಕೋ.ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸುವರು ಎಂದು ಹರೀಶ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next