ಹುಬ್ಬಳ್ಳಿ: ಇಂದಿನ ಕಲುಷಿತ ರಾಜಕಾರಣ ಶುದ್ಧೀಕರಣವಾಗಲು ಸಹಕಾರ ರಂಗದ ಭೀಷ್ಮ ಕೆ.ಎಚ್. ಪಾಟೀಲರ ತತ್ವಾದರ್ಶಗಳು ಅವಶ್ಯವಾಗಿವೆ. ಜನಹಿತ ಬಯಸುವ ಸಂಸ್ಥೆಗಳನ್ನು ಕಟ್ಟಿ ಅವರು ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆಂದು ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ಇಂದಿರಾ ಗಾಜಿನಮನೆ ಉದ್ಯಾನವನದಲ್ಲಿ ದಿ| ಕೆ.ಎಚ್. ಪಾಟೀಲರ ಪುತ್ಥಳಿ ಬಳಿ ನಡೆದ 31ನೇ ಪುಣ್ಯಸ್ಮರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಹಕಾರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಾಧ್ಯಮ, ಧಾರ್ಮಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ಕೆ.ಎಚ್. ಪಾಟೀಲರ ಸಾಧನೆ ನಾಡಿಗೆ ಬೆಳಕು ತಂದುಕೊಟ್ಟಿದೆ. ಇಂದು ರಾಜಕಾರಣವೆಂದರೆ ಮೂಗು ಮುರಿದುಕೊಳ್ಳುವ ಕಾಲದಲ್ಲಿ ಸೇವೆ ಅನ್ನುವ ಪದ ಅರ್ಥ ಕಳೆದುಕೊಂಡಿದೆ. ಕೆ.ಎಚ್. ಪಾಟೀಲರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಆ ಸೇವೆಗೆ ಅರ್ಥ ಕೊಡಬೇಕಾಗಿದೆ ಎಂದರು.
ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿ, ನಾವೆಲ್ಲಾ ಅವರ ರಾಜಕೀಯ ಜೀವನದಿಂದ ಪ್ರಭಾವಿತರಾದವರು. ಕೆ.ಎಚ್. ಪಾಟೀಲರ ಸಾರ್ವಜನಿಕ ಜೀವನ ಸಮಾಜಕ್ಕೆ ಅಷ್ಟೇ ಅಲ್ಲ ದೇಶಕ್ಕೆ ಮಾದರಿ. ಇಂತಹ ಮಹಾನ್ ನಾಯಕರ ಪುತ್ಥಳಿಯನ್ನು ಮೂಲಸ್ಥಳದಲ್ಲಿ ಪ್ರತಿಷ್ಠಾಪಿಸಿ ಗೌರವ ಸಲ್ಲಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಮೇಯರ್ ಮೆಮೋರಿಯಲ್ ಚರ್ಚ್‌ನ ಫಾಸ್ಟರ್ ರೆವರೆಂಡ್ ರಾಜು ಮೇದಗೊಪ್ಪ , ಮುಸ್ಲಿಂ ಧರ್ಮಗುರು ಮೌಲಾನಾ ಮುಕ್ತಾರ ಅಹ್ಮದ
ಮಾತನಾಡಿದರು.
ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಹಾಗೂ ದಿ| ಕೆ.ಎಚ್. ಪಾಟೀಲರ ಪುತ್ಥಳಿಗಳನ್ನು ಮೂಲ ಸ್ಥಳದಲ್ಲಿಯೇ ಸ್ಥಾಪಿಸಬೇಕು. ಜಿಲ್ಲಾಡಳಿತ ಮಾತುಕೊಟ್ಟಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದರು. ಇದಕ್ಕೂ ಮೊದಲು ದಿ| ಕೆ.ಎಚ್. ಪಾಟೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಮುಖಂಡರಾದ ದೊರೈರಾಜ ಮಣ್ಣಿಕುಂಟ್ಲ, ಎಂ.ಎಂ. ಗೌಡರ, ಪಾರಸಮಲ್ ಜೈನ್, ಸದಾನಂದ ಡಂಗನವರ, ಬಲವಂತ ಗುಂಡಮಿ, ಶೇಖಣ್ಣ ಬೆಂಡಿಗೇರಿ, ಗೋಪಣ್ಣ ನಲವಡಿ, ಡಿ.ಎನ್. ದೊಡ್ಡಮನಿ, ಭೀಮಣ್ಣ ಬಡಿಗೇರ, ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ, ಮನೋಜ ಪಾಟೀಲ, ಸತೀಶ ಮಾಡಳ್ಳಿ, ರಘು ಕೆಂಪಲಿಂಗನಗೌಡರ, ಗಿರಿಮಲ್ಲ ಮತ್ತಿಕಟ್ಟಿ, ಮಹಾವೀರ ಜೈನ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಶರಣಪ್ಪ ಕೊಟಗಿ, ವಿ.ಆರ್. ಹೊಸಮನಿ, ವಿ.ಎಚ್. ಶಿರೋಳ, ಎಚ್.ಎಚ್. ಕಿರೇಸೂರ, ಅಶೋಕ ಇಟಗಿ, ಕೆ.ವ್ಹಿ. ಹುಲಕೋಟಿ, ಉಮೇಶ ಬಳಿಗಾರ ಮೊದಲಾದವರಿದ್ದರು.
ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ, ಬುದ್ಧ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಎಫ್.ಎಚ್. ಜಕ್ಕಪ್ಪನವರ ಸ್ವಾಗತಿಸಿದರು. ಮಹೇಂದ್ರ ಸಿಂಘಿ ಗಣ್ಯರಿಗೆ ಗೌರವ ಸಲ್ಲಿಸಿದರು. ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ ವಂದಿಸಿದರು. ಪ್ರಾಚಾರ್ಯ ಎಸ್.ಬಿ. ಸಣಗೌಡರ ನಿರೂಪಿಸಿದರು.