ಬೆಂಗಳೂರು: ಕಾಂಗ್ರೆಸ್ ಬಾಗಿಲನ್ನು ಯಾರು ತಟ್ಟಿದ್ದಾರೆ. ನಾವ್ಯಾರು ಎಲ್ಲಿಗೂ ಹೋಗುವುದಿಲ್ಲ ಎಂದು ವಲಸಿಗ ಸಚಿವರು ಕಾಂಗ್ರೆಸ್ ಸೇರುವ ವದಂತಿ ವಿಚಾರವನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಳ್ಳಿ ಹಾಕಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಬಿಜೆಪಿಯಲ್ಲಿ ಚನ್ನಾಗಿಯೇ ಇದ್ದೇವೆ. ಇಲ್ಲಿ ನಮಗೆ ಯಾವುದೇ ಸಮಸ್ಯೆಯಿಲ್ಲ. ನಮಗೆ ಸಚಿವ ಸ್ಥಾನ ನೀಡಿ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಾವ್ಯಾಕೆ ಬಿಜೆಪಿ ಬಿಟ್ಟು ಹೋಗಬೇಕು ಎಂದರು.
ಕೆಲವರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಒಂದಿಬ್ಬರಿಗೆ ಸಚಿವ ಸ್ಥಾನ ಸಿಕ್ಕಿಲ್ಲವಷ್ಟೇ, ಆದರೆ ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ ಎಂದು ಗೋಪಾಲಯ್ಯ ಹೇಳಿದರು.
ಇದನ್ನೂ ಓದಿ:ಕಲಬುರಗಿ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆಗೆ ತಾತ್ಕಾಲಿಕ ತಡೆ
ಮದ್ಯ ಮಾರಾಟ ಸಂಸ್ಥೆಗಳ ಸದಸ್ಯರ ಜೊತೆ ಸಿಎಂ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮದ್ಯ ಮಾರಾಟದ ಕಮಿಷನ್ ಹೆಚ್ಚಳ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಆರ್ಥಿಕ ಇಲಾಖೆ ಜತೆ ಸಿಎಂ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ. 23,247 ಕೋಟಿ ನಾವು ತೆರಿಗೆ ಸಂಗ್ರಹ ಮಾಡಿದ್ದೇವೆ, ಕೋವಿಡ್ ಸಮಯದಲ್ಲೂ ನಮ್ಮ ಟಾರ್ಗೆಟ್ ಪೂರ್ಣ ಮಾಡಿದ್ದೇವೆ. ಈ ವರ್ಷ ಗುರಿ ಮೀರಿ ತೆರಿಗೆ ಸಂಗ್ರಹವಾಗುತ್ತದೆ ಎಂದರು.
ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿದೆ. ನಾಳೆ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಭೆ ಮಾಡುತ್ತಾರೆ. ಸಂಸ್ಥೆಗಳ ಸದಸ್ಯರು ಕೊಟ್ಟ ಸಲಹೆ ಮತ್ತು ಮನವಿಗಳನ್ನು ಸಿಎಂ ಕೇಳಿದ್ದಾರೆ ಎಂದು ಸಚಿವ ಗೋಪಾಲಯ್ಯ ಹೇಳಿದರು.