ನವಿಮುಂಬಯಿ: ಭವಾನಿ ಫೌಂಡೇಶನ್ ಮುಂಬಯಿ ವತಿಯಿಂದ ಕೋವಿಡ್ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾದ ಸಾವಿರಾರು ಮಂದಿಗೆ ಹಲವು ರೀತಿಯಲ್ಲಿ ಸಹಕರಿಸಿ ಮಾನವೀಯತೆ ಮೆರೆದಿದೆ.
ಉಡುಪಿ ಜಿಲ್ಲೆಯ ಮೂಡುಬೆಳ್ಳೆಯಲ್ಲಿ ಭವಾನಿ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ ಚೆಲ್ಲಡ್ಕ ಮತ್ತು ಅಧ್ಯಕ್ಷ ಜೀಕ್ಷಿತ್ ಕೆ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಆ. 27ರಂದು 100ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಭವಾನಿ ಫೌಂಡೇಶನ್ ಉಪಾಧ್ಯಕ್ಷ, ಇಂಡಿಯನ್ ಎಕ್ಸ್‌ಪ್ರೆಸ್ ಆಂಗ್ಲ ಪತ್ರಿಕೆಯ ಮಹಾಪ್ರಬಂಧಕ ದಿನೇಶ್ ಶೆಟ್ಟಿ ಮಾತನಾಡಿ, ಸಮಾಜದ ಕಷ್ಟ-ನಷ್ಟಗಳಿಗೆ ಭವಾನಿ ಫೌಂಡೇಶನ್ ನಿರಂತರವಾಗಿ ಸ್ಪಂದಿಸುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಬಡ ಜನರ ಊಟ, ವಸತಿ, ಶಿಕ್ಷಣ, ಮದುವೆಯಂತಹ ಶುಭ ಕಾರ್ಯಗಳಿಗೆ, ಅನಾರೋಗ್ಯ ಪೀಡಿತರಿಗೆ, ಆದಿವಾಸಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶ ಗಳಲ್ಲಿ ಮೂಲ ಸೌಕರ್ಯಗಳಿಗೆ ಸ್ಪಂದಿಸುತ್ತಿದೆ.
ಇದನ್ನೂ ಓದಿ:ಅಭಿಮಾನಿಗಳಿಂದ ಒತ್ತಾಯ ಬಂದರೆ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನೊಡೋಣ: ಸುಮಲತಾ
ಈ ಎಲ್ಲ ಕಾರ್ಯವನ್ನು ರೂಢಿಸಿಕೊಂಡು ಬಂದ ಭವಾನಿ ಫೌಂಡೇಶನ್ ಕಳೆದ 17 ತಿಂಗಳುಗಳಿಂದ ಕೋವಿಡ್ ಲಾಕ್‌ಡೌನ್ ವಿಷಮ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಂಕಷ್ಟಕ್ಕೊಳಗಾದ ಸಾವಿರಾರು ಮಂದಿಗೆ ನಿರಂತರವಾಗಿ ಕಿಟ್‌ಗಳನ್ನು ವಿತರಿಸಿದೆ. ಭವಾನಿ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ ಚೆಲ್ಲಡ್ಕ ಅವರ ವಿಶೇಷ ಸಹಕಾರದೊಂದಿಗೆ ಈ ಮಹಾನ್ ಕಾರ್ಯ ನಡೆದಿದೆ. ಮುಂದೆಯೂ ಸಮಾಜ ಸೇವೆ ಮಾಡುವ ಶಕ್ತಿಯನ್ನು ಭಗವಂತ ಅವರಿಗೆ ಕರುಣಿಸಲಿ ಎಂದು ತಿಳಿಸಿ ಶುಭ ಹಾರೈಸಿದರು.
ಮೂಡುಬೆಳ್ಳೆ ಗ್ರಾಮೀಣ ಪ್ರದೇಶದ ದೆಂದೂ ರುಕಟ್ಟೆ, ಅಲೆವೂರು, ಮಣಿಪುರ ಪರಿಸರದ ರಿಕ್ಷಾ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ಆರ್ಥಿಕವಾಗಿ ಹಿಂದುಳಿದ ಎಲ್ಲ ಧರ್ಮಗಳ 100ಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರು, ಹಿರಿಯರು ಹಾಗೂ ಸಮಾಜ ಸೇವಕರು ಉಪಸ್ಥಿತರಿದ್ದು ಸಹಕರಿಸಿದರು. ಮುಂಬಯಿಯಿಂದ ಊರಿಗೆ ತೆರಳಿ ಈ ಸಮಾಜಮುಖೀ ಕಾರ್ಯದ ಮುಂದಾಳತ್ವ ವಹಿಸಿದ್ದ ಭವಾನಿ ಫೌಂಡೇಶನ್‌ನ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಅವರನ್ನು ಭವಾನಿ ಫೌಂಡೇಶನ್‌ನ ವಿಶ್ವಸ್ಥರು, ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.