Advertisement
ಈ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಅನಂತರ ಇಂದಿನ ಬಾಂಗ್ಲಾದೇಶ ಜನ್ಮತಳೆಯಿತು. “”ವಿಜಯ ದಿವಸದಂದು ನಾವು ನಮ್ಮ ಸಶಸ್ತ್ರಪಡೆಗಳು 1971ರಂದು ತೋರಿದ ಅಚಲ ಧೈರ್ಯವನ್ನು ಸ್ಮರಿಸುತ್ತೇವೆ. ಈ ವಿಶೇಷ ವಿಜಯ ದಿವಸದಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಂ ವಿಜಯ ಜ್ಯೋತಿ ಬೆಳಗಿಸುವ ಗೌರವ ನನಗೆ ಸಿಕ್ಕಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನಾ ಮುಖ್ಯಸ್ಥರು ಹಾಜರಿದ್ದರು. ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರೂ ಈ ವಿಚಾರದಲ್ಲಿ ಟ್ವೀಟ್ ಮಾಡಿದ್ದು, ಭಾರತೀಯ ಸೇನೆಯ ಪರಾಕ್ರಮ ಹಾಗೂ ಇಂದಿರಾ ಗಾಂಧಿಯವರ ನಾಯಕತ್ವವನ್ನು ಸ್ಮರಿಸಿದ್ದಾರೆ.
ನಾಲ್ಕು ಸ್ವರ್ಣಿಂ ವಿಜಯ ಜ್ಯೋತಿಗಳನ್ನು 1971ರ ಯುದ್ಧದ ಪರಮವೀರಚಕ್ರ ಹಾಗೂ ಮಹಾವೀರ ಚಕ್ರ ಪಡೆದ ಧೀರ ಯೋಧರ ಗ್ರಾಮಗಳನ್ನು ಒಳಗೊಂಡು ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲಾಗುತ್ತಿದೆ. ಯೋಧರ ಗ್ರಾಮಗಳಿಂದ, ಹೋರಾಟದ ಜಾಗಗಳಿಂದ ಮಣ್ಣನ್ನು ತಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಡಲಾಗುವುದು ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 93,000 ಪಾಕ್ ಸೈನಿಕರು ಶರಣಾಗಿದ್ದರು
ಪಾಕಿಸ್ಥಾನ ವಿರುದ್ಧದ ಅಂದಿನ ಗೆಲುವಿನಲ್ಲಿ ಭಾರತೀಯ ಯೋಧರ ಶೌರ್ಯವನ್ನು ಮರೆಯುವಂತೆಯೇ ಇಲ್ಲ. ಆ ಸಮಯದಲ್ಲಿ ಪಾಕ್ ಸೇನೆಯ ಕ್ರೌರ್ಯಕ್ಕೆ 3,800ಕ್ಕೂ ಅಧಿಕ ಬಾಂಗ್ಲಾ (ಪೂರ್ವ ಪಾಕಿಸ್ಥಾನ) ನಾಗರಿಕರು ಮೃತಪಟ್ಟಿದ್ದರು. ಪಾಕ್‌ನ ಈ ಕ್ರೌರ್ಯವನ್ನು ಹತ್ತಿಕ್ಕಲು ಭಾರತೀಯ ಸೇನೆಯು ಮುಕ್ತಿ ವಾಹಿನಿಯ ಸಹಯೋಗದೊಂದಿಗೆ ಪಾಕ್‌ನ ಹೆಡೆಮುರಿಕಟ್ಟಿತ್ತು. ಭಾರತದ ಬಹು ಆಯಾಮದ ದಾಳಿಗೆ ತತ್ತರಿಸಿದ ಪಾಕ್ ಡಿ.16, 1971ರಂದು ಭಾರತೀಯ ಸೇನೆಯ ಮುಂದೆ ಮಂಡಿಯೂರಿತು. ಪಾಕ್ ಸೇನಾ ಮುಖ್ಯಸ್ಥ ಅಮಿರ್ ಅಬ್ದುಲ್ಲಾ ನಿಯಾಜಿ ಸೇರಿ 93 ಸಾವಿರ ಪಾಕ್ ಸೈನಿಕರು ಅಂದು ಭಾರತಕ್ಕೆ ಶರಣಾಗಿದ್ದರು. 13 ದಿನಗಳ ಈ ಯುದ್ಧದಲ್ಲಿ 3,800ಕ್ಕೂ ಅಧಿಕ ಭಾರತ-ಪಾಕ್ ಸೈನಿಕರು ಮೃತಪಟ್ಟಿದ್ದರು.